Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರಿನ ಪ್ರತಿಷ್ಠಿತ ಸ್ಥಳಗಳಲ್ಲಿ ಗಾಂಜಾ ‘ಘಾಟು

ಎಚ್.ಎಸ್.ದಿನೇಶ್‌ಕುಮಾರ್

2 ವರ್ಷಗಳ ಅವಧಿಯಲ್ಲಿ ವಶಪಡಿಸಿಕೊಂಡ ಗಾಂಜಾ 150ಕ್ಕೂ ಹೆಚ್ಚು
ಪೆಡ್ಲರ್‌ಗಳು ಖರೀದಿಸುವ ಗಾಂಜಾ ರೂಗಳಲ್ಲಿ 10,000 ಕೆಜಿಗೆ
ಪ್ರಕರಣದಲ್ಲಿ ಬಂಧಿಸಲ್ಪಟ್ಟವರು 28 ಮಂದಿ
ಪೆಡ್ಲರ್‌ಗಳು ಮಾರಾಟ ಮಾಡುವುದು 4,000 100ಗ್ರಾಂಗೆ

ಮೈಸೂರು: ನಗರ ಪೊಲೀಸರ ಸತತ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಗರದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಗಾಂಜಾ ಪ್ರಮಾಣ 150 ಕೆಜಿಗೂ ಹೆಚ್ಚು. ಬಂಧಿಸಲ್ಪಟ್ಟ ವರು 28 ಮಂದಿ…!

ಇದು ನಿಜಕ್ಕೂ ಆತಂಕಕಾರಿ ವಿಚಾರ. ಗಾಂಜಾ ಮಾರಾಟ ಹಾಗೂ ಅಕ್ರಮ ಬಳಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪೊಲೀಸರ ಹೆದರಿಕೆಯ ನಡುವೆಯೂ ಹಣದಾಸೆಗಾಗಿ ಕೆಲವರು ಗಾಂಜಾ ಮಾರಾಟವನ್ನು ಕಸುಬಾಗಿಸಿಕೊಂಡಿದ್ದಾರೆ. ಅವರ ಹಣದಾಸೆಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಎಂಬುದು ಮಾತ್ರ ಸುಳ್ಳಲ್ಲ.

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಗಾಂಜಾ ಬಳಕೆ ಹೆಚ್ಚಿದೆ ಎಂದು ಪೊಲೀಸರು ಹೇಳುತ್ತಾರೆ. ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಕೊಠಡಿಗಳು ಅಥವಾ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಾರೆ. ಅಂತಹವರು ಬಹುಬೇಗನೆ ಇಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎನ್ನುತ್ತಾರೆ.

ಹೊರ ಜಿಲ್ಲೆಗಳಿಂದ ಗಾಂಜಾ: ಗಾಂಜಾವನ್ನು ಕೆಲ ಹಳ್ಳಿಗಳಲ್ಲಿ ಗುಟ್ಟಾಗಿ ಬೆಳೆಯುತ್ತಾರೆ. ಚೆಂಡು ಹೂವಿನ ತೋಟ ಅಥವಾ ಮನೆಯ ಹಿತ್ತಲಿನಲ್ಲಿ ಬೆಳೆಯುವವರ ಸಂಖ್ಯೆ ಹೆಚ್ಚು. ಅಂತಹವರು ಗಾಂಜಾ ಮಾರಾಟಗಾರರ ಜೊತೆ ಸಂಪರ್ಕ ಹೊಂದಿರುತ್ತಾರೆ.

ಕೆಜಿಗೆ 8 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಮಾರಾಟ ಮಾಡಿ ಹೋಗುತ್ತಾರೆ. ಖರೀದಿಸಿದ ಪೆಕ್ಟರ್ ಗಳು, ಗಾಂಜಾವನ್ನು ಹದಗೊಳಿಸಿ ಬಿಸಿಲಿನಲ್ಲಿ ಒಣಗಿಸಿ 20 ಗ್ರಾಂನಿಂದ ” ಹಿಡಿದು 100 ಗ್ರಾಂವರೆಗೆ ಪೊಟ್ಟಣಗಳನ್ನಾಗಿ ಸಿದ್ಧಗೊಳಿಸುತ್ತಾರೆ. 100 ಗಾಂಜಾ ಬೆಲೆ ಇಂದು ಮಾರುಕಟ್ಟೆಯಲ್ಲಿ 4 ಸಾವಿರ ರೂ. ಇದೆ.

ಕಾಲೇಜುಗಳೇ ಟಾರ್ಗೆಟ್: ನಗರದ ಪ್ರತಿಷ್ಠಿತ ಕಾಲೇಜುಗಳೇ ಗಾಂಜಾ ಮಾರಾಟಗಾರರ ಟಾರ್ಗೆಟ್. ಕಾಲೇಜು ಮುಂದೆ ಅಡ್ಡಾಡುವ ಪೆಡ್ಲರ್‌ಗಳು ಅಲ್ಲಿನ ಟೀ ಶಾಪ್, ಸಣ್ಣ ಹೋಟೆಲ್ ಕೆಲಸಗಾರರ ಮೂಲಕ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಾರೆ.

ವಿದ್ಯಾರ್ಥಿಗಳೇ ಏಜೆಂಟ್: ಇದು ಮಾತ್ರ ಆತಂಕಕಾರಿ ಬೆಳವಣಿಗೆ ಒಮ್ಮೆ ಗಾಂಜಾ ಸೇವನೆಯ ಚಟಕ್ಕೆ ಬೀಳುವ ವಿದ್ಯಾರ್ಥಿಯು ತನ್ನ ಸಹಪಾಠಿಯನ್ನೂ ಚಟಕ್ಕೆ ಬೀಳಿಸುವ ಯತ್ನ ಮಾಡುತ್ತಾನೆ. ಅದು ಯಶಸ್ವಿಯಾದಲ್ಲಿ ಮತ್ತೊಬ್ಬ, ಮಗದೊಬ್ಬ ಎಂಬಂತೆ ಚಟವನ್ನು ಅಂಟಿಸಿಕೊಳ್ಳುತ್ತಾರೆ. ಈ ವೇಳೆ ಪೆಡ್ಲರ್ ಜೊತೆ ನಂಟು ಬೆಳೆಸಿಕೊಳ್ಳುವ ವಿದ್ಯಾರ್ಥಿಯೇ ಗಾಂಜಾ ಮಾರಾಟಕ್ಕೆ ಮದ್ಯವರ್ತಿಯಾಗುತ್ತಾನೆ.

ಪೊಲೀಸರ ನಿತರಂತರ ಕಾರ್ಯಾಚರಣೆ: ಗಾಂಜಾ ಮಾರಾಟ ಹಾಗೂ ಸೇವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಅಂತಹವರನ್ನು ಮಟ್ಟಹಾಕಲು ತೀರ್ಮಾನಿಸಿದೆ. ಸೆನ್ ಠಾಣೆಯ ಪೊಲೀಸರು, ಸಿಸಿಬಿ ಹಾಗೂ ಠಾಣಾ ಮಟ್ಟದಲ್ಲಿ ಪೊಲೀಸರು ಆಗಾಗ್ಗೆ ಕಾರ್ಯಾಚರಣೆ ನಡೆಸುವ ಮೂಲಕ ಗಾಂಜಾ ಮಾರಾಟಗಾರರ ಹೆಡೆಮುರಿ ಕಟ್ಟುತ್ತಿದ್ದಾರೆ.
ಈ ಸಂಬಂಧ ಸಾರ್ವಜನಿಕರ ಸಹಕಾರ ಬೇಕು ಎಂದು ಪೊಲೀಸರು ಮನವಿ ಮಾಡುತ್ತಾರೆ.

ಗಾಂಜಾ ತಡೆಗೆ ಏನು ಮಾಡಬೇಕು?
• ಗಾಂಜಾ ಹೆಚ್ಚು ಮಾರಾಟವಾಗುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ಪೋಲೀಸ್‌ ಕಣ್ಣಾವಲು ಹೆಚ್ಚು ಮಾಡಬೇಕು.
• ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಂಶಯ ಬಂದ ವಿದ್ಯಾರ್ಥಿಗಳ ಬಗ್ಗೆ ನಿಗಾ ಇಡಬೇಕು, ಪೋಷಕರಿಗೆ ಮಾಹಿತಿ ನೀಡಬೇಕು.
• ಶಿಕ್ಷಣ ಸಂಸ್ಥೆಗಳು ಮಾದಕ ವಸ್ತುಗಳ ಬಳಕೆ ವಿರುದ್ಧ ಆಗಾಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
• ಮಾನಸಿಕ ತಜ್ಞರಿಂದ ಶಾಲಾ, ಕಾಲೇಜಿನಲ್ಲಿ ಉಪನ್ಯಾಸಗಳನ್ನು ಏರ್ಪಡಿಸಬೇಕು.
• ಹೊರ ದೇಶದ ವಿದ್ಯಾರ್ಥಿಗಳು ವಾಸಿಸುವ ಸ್ಥಳ ಹಾಗೂ ಹಾಸ್ಟೆಲ್‌ಗಳ ಮೇಲೆ ನಿಗಾ ವಹಿಸಬೇಕು.
• ತಿಂಗಳಿನಲ್ಲಿ ಒಮ್ಮೆಯಾದರೂ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್‌ಗಳಿಗೆ ತೆರಳಿ ಆಯಾ ಠಾಣಾ ಮಟ್ಟದ ಪೊಲೀಸರು ಪರಿಶೀಲನೆ ನಡೆಸಬೇಕು.
• ಕಾಲೇಜಿಗೆ ತೆರಳುವ ತಮ್ಮ ಮಕ್ಕಳ ಬಗ್ಗೆ ಪೋಷಕರು ಅತಿಯಾದ ನಂಬಿಕೆ ಇಡುವ ಬದಲು ಆಗಿಂದಾಗ್ಗೆ ಕಾಲೇಜಿಗೆ ತೆರಳಿ ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು.

ಗಾಂಜಾ ಮಾರಾಟ ಹಾಗೂ ಸೇವಿಸುವವರ ಬಗ್ಗೆ ಇಲಾಖೆ ಹದ್ದಿನ ಕಣ್ಣಿರಿಸಿದೆ. ಗಾಂಜಾ ಮಾರಾಟ ಮಾಡುವವನು ಸಿಕ್ಕಿಬಿದ್ದ ವೇಳೆ ಆತನನ್ನು ವಿಚಾರಣೆಗೊಳಪಡಿಸಿ ಅದರ ಮೂಲವನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರೂ ನಮಗೆ ಮಾಹಿತಿ ಒದಗಿಸಿದಲ್ಲಿ ಅನುಕೂಲವಾಗುತ್ತದೆ. ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಪೋಷಕರು ಅವರ ಬಗ್ಗೆ ನಿಗಾ ವಹಿಸಬೇಕು. 15 ದಿನಗಳಿಗೆ ಒಮ್ಮೆಯಾದರೂ ಕಾಲೇಜಿಗೆ ತೆರಳಿ ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು. ಆಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು.
• ಎಂ.ಮುತ್ತುರಾಜ್, ಉಪ ಪೊಲೀಸ್ ಆಯುಕ್ತರು.

Tags: