Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಕಾಲಕ್ಕೆ ಸುರಿದ ಹಿಂಗಾರು ಮಳೆ, ರೈತರ ಮುಖದಲ್ಲಿ ಜೀವ ಕಳೆ

ಕಳೆದ ಬಾರಿ ಸಕಾಲಕ್ಕೆ ಮಳೆಯಾಗದೇ ಈ ಬಾರಿಯೂ ಕೈ ಕೊಡುವ ಮುನ್ಸೂಚನೆಯಲ್ಲಿದ್ದ ಮಳೆರಾಯ ಈ ವರ್ಷ ರೈತರಿಗೆ ತಡವಾಗಿಯಾದರೂ ಕೊಂಚ ನೆಮ್ಮದಿ ನೀಡಿದ್ದಾನೆ. ಈಗಂತೂ ರಾಜ್ಯದ ನಾನಾ ಭಾಗಗಳಲ್ಲಿ ಸಕಾಲಿಕವಾಗಿ ಹಿಂಗಾರು ಮಳೆ ಬೀಳುತ್ತಿರುವುದು ಮಳೆ ಆಶ್ರಿತ ಕೃಷಿ ಮಾಡುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ರಾಜ್ಯದ 200ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿತ್ತು. ಜನರಿಗೆ ಕೃಷಿ ಭೂಮಿಗಿರಲಿ ಕುಡಿಯುವ ನೀರಿಗೂ ಹಾಹಾಕಾರ ಶುರು ವಾಗಿತ್ತು. ಇದರಿಂದ ಹಾಕಿದ ಬೆಳೆ ಕೈ ಸೇರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿಯೂ ತಡವಾಗಿ ಆರಂಭಗೊಂಡ ಮುಂಗಾರು ಮಳೆ ರೈತರಲ್ಲಿ ಅಷ್ಟೇನೂ ಭರವಸೆ ಮೂಡಿಸಿರಲಿಲ್ಲ. ಅಂತೇಯೇ ಜಲಾಶಯಗಳೂ ತಡವಾಗಿ ಭರ್ತಿಯಾದ್ದರಿಂದ ಕೃಷಿ ಭೂಮಿಗಳಿಗೆ ನೀರು ಪೂರೈಕೆಯಾಗಿದ್ದೂ ತಡವಾಗಿತ್ತು. ಇಂತಹ ಸ್ಥಿತಿಯಲ್ಲಿದ್ದ ರೈತರಿಗೆ ಈಗ ಹಿಂಗಾರು ಮಳೆ ಸಕಾಲಕ್ಕೆ ಬೀಳುವ ಮೂಲಕ ಸಂತಸ ತಂದಿದೆ.

ಮುಂಗಾರಿನಂತೆಯೇ ಹಿಂಗಾರು ಮಳೆಯೂ ರೈತರಿಗೆ ಅತಿಮುಖ್ಯ. ಮಳೆಯ ಆಗಮನವನ್ನು ಗಮನದಲ್ಲಿಟ್ಟುಕೊಂಡು ರೈತರು ಕೃಷಿ ಮಾಡ ಬೇಕು. ಸದ್ಯಕ್ಕಂತೂ ಮೈಸೂರು ಜಿಲ್ಲೆಯ ತಿ.ನರಸೀ ಪುರ, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್‌.ಡಿ. ಕೋಟೆಯ ಕೆಲ ಭಾಗ ಹಾಗೂ ನಂಜನಗೂಡಿನ ಭಾಗದಲ್ಲಿ ತಡವಾಗಿಯೇ ಭತ್ತದ ನಾಟಿ ಮಾಡಿದ್ದು, ಈ ಮಳೆಯಿಂದ ರೈತರಿಗೆ ಅನುಕೂಲ ವಾಗಿದೆ. ಇನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ಮಾತ್ರ ಭತ್ತ ನಾಟಿ ಕಾರ್ಯವನ್ನು ಜೂನ್, ಜುಲೈ ತಿಂಗಳಲ್ಲಿನಲ್ಲಿಯೇ ಮಾಡಿ ಮುಗಿಸುವವರಿಗೆ ಈ ಹಿಂಗಾರು ಮಳೆ ಕೊಂಚ ಆತಂಕ ಸೃಷ್ಟಿಸಬಹುದು. ಅದರ ಹೊರತಾಗಿ ಈ ಮಳೆಯು ಕೃಷಿಗೆ ಪೂರಕವಾಗಿಯೇ ಬೀಳುತ್ತಿದೆ. ಅಲ್ಲದೆ ದಿನ ಬಿಟ್ಟು ದಿನ ಮಳೆ ಬೀಳುತ್ತಿರುವುದರಿಂದ ಜಮೀನಿನಲ್ಲಿ ನೀರು ನಿಂತು ಬೆಳೆಗಳಿಗೆ ಅಷ್ಟೇನೂ ಹಾನಿಯಾಗಿಲ್ಲ ಎಂಬುದು ಬಹುತೇಕ ರೈತರ ಮಾತಾಗಿದೆ.

ಜೂನ್, ಜುಲೈ ತಿಂಗಳಿನಲ್ಲಿ ನಾಟಿ ಮಾಡಿದ್ದರೆ ಇದು ಭತ್ತ ಕಾಳುಕಟ್ಟುವ ಸಮಯ. ಈ ವೇಳೆ ಭತ್ತದ ತೆಂಡೆಗೆ ನೀರು ತುಂಬಿಕೊಂಡು ಕಾಳು ಜೊಳ್ಳಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯ ಭತ್ತದ ನಾಟಿ ಕೆಲಸಗಳು ಜೂನ್, ಜುಲೈನಲ್ಲಿಯೇ ಮುಗಿಯಬೇಕಿತ್ತು. ಆದರೆ, ಸಕಾಲಕ್ಕೆ ಮಳೆಯಾಗದೆ ಹಾಗೂ ಕೆಆರ್‌ಎಸ್ ಮತ್ತು ಕಪಿಲಾ, ನುಗು ಜಲಾಶಯಗಳು ತಡವಾಗಿ
ತುಂಬಿದ್ದರಿಂದ ನಾಲೆಗಳಿಗೆ ನೀರು ಹರಿಯುವುದು ತಡವಾಗಿ ನಾಟಿ ಕೆಲಸವೂ ತಡವಾಗಿದೆ.

ಇನ್ನು ಇದರೊಂದಿಗೆ ಹೆಚ್ಚಾಗಿ ಈ ಭಾಗದಲ್ಲಿ ಬೆಳೆಯುವ ಜೋಳ, ಚಿಯಾ, ಹುರುಳಿ, ರಾಗಿ ಸೇರಿದಂತೆ ಕಾಳು, ಸೊಪ್ಪು, ತರಕಾರಿ ಬೆಳೆಗಳಿಗೂ ಈ ಮಳೆ ಪೂರಕವಾಗಿದೆ ಎನ್ನುತ್ತಾರೆ ರೈತರು.

ಹತ್ತಿ, ಟೊಮೊಟೋ ಬೆಳೆಗಾರರ ಆತಂಕ:

ಸಾಮಾನ್ಯವಾಗಿ ಎಲ್ಲ ಕಡೆ ಈಗ ಹತ್ತಿ ಬಿಡಿಸುವ ಕಾರ್ಯ ಆರಂಭಗೊಂಡಿದ್ದು, ಮಳೆಯಿಂದಾಗಿ ಹತ್ತಿ ಬೆಲೆ ಇಳಿಕೆಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಮಳೆ ಹೆಚ್ಚಾದಷ್ಟೂ ಹತ್ತಿ ಬೆಳೆಯ ಗುಣಮಟ್ಟ ಕುಸಿಯುವುದರಿಂದ ರೈತರಿಗೆ ಆತಂಕ ಎದುರಾಗಿದೆ. ಇನ್ನು ಈ ಮಳೆಯೂ ಕೊಯ್ಲಿಗೆ ಬಂದಿರುವ ಟೊಮೆಟೋ ಬೆಳೆಗೆ ಸಮಸ್ಯೆ ತಂದೊಡ್ಡುವ ಆತಂಕ ಇದೆ.

ಇದರೊಂದಿಗೆ ಈಗ ಬಿಸಿಲಿಗಿಂತ ಮೋಡ ಕವಿದ ವಾತಾವರಣ ಹೆಚ್ಚಾಗಿದ್ದು, ಈ ವಾತಾವರಣದಲ್ಲಿ ಬೆಳೆಗಳಿಗೆ ಫಂಗಸ್, ಕೀಟಬಾಧೆ ಜತೆಗೆ ಅನವಶ್ಯಕ ಕಳೆ ಬೆಳೆಯುವ ಸಾಧ್ಯತೆ ಹೆಚ್ಚಾಗಿದ್ದು, ರೈತರು ಈ ಬಗ್ಗೆ ಜಾಗೃತರಾಗಿರುವುದು ಅಗತ್ಯ.

ಕಳೆದ ಬಾರಿಯ ಬರಗಾಲದ ಜತೆಗೆ ಈ ಬಾರಿಯೂ ಮಾನ್ಸೂನ್ ಮಳೆಯು ತಡವಾಗಿ ಆರಂಭವಾದ್ದರಿಂದ ರೈತರಲ್ಲಿ ಮಂದಹಾಸವೇ ಮರೆಯಾಗಿತ್ತು. ಹಿಂಗಾರು ಮಳೆಯೂ
ಕೈಕೊಡಬಹುದೇನೋ ಎಂಬ ಆತಂಕ ಇತ್ತು. ಆದರೆ ಈ ಬಾರಿ ಸಕಾಲಕ್ಕೆ ಸರಿಯಾದ ಪ್ರಮಾಣದಲ್ಲಿ ಹಿಂಗಾರು ಮಳೆ ಬೀಳುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.
ರಾಜೇಶ್, ಎಚ್‌.ಡಿ.ಕೋಟೆ.

Tags: