ಜಿ.ತಂಗಂ ಗೋಪಿನಾಥಂ
ಮೈಸೂರು: ಹುಲ್ಲು ತಿನ್ನುತ್ತಾ ಫೋಟೋಗೆ ಪೋಸ್ ಕೊಡುತ್ತಿದ್ದ ಅಭಿಮನ್ಯು, ಮಜ್ಜನಕ್ಕೆ ಮೈಯೊಡ್ಡಿದ್ದ ಕಂಜನ್ ಮತ್ತು ಸುಗ್ರೀವ, ಕೆಸರಿನಲ್ಲಿ ಮಹೇಂದ್ರನ ಚಿನ್ನಾಟ ದಣಿವಾರಿಸಿಕೊಳ್ಳುತ್ತಿದ್ದ ಧನಂಜಯ, ಪ್ರಶಾಂತ, ಗೋಪಿ, ಭೀಮ, ಏಕಲವ್ಯ, ಸೊಪ್ಪಿನಿಂದ ಮೈಉಜ್ಜಿಕೊಳ್ಳುತ್ತಿದ್ದ ಲಕ್ಷ್ಮಿಮತ್ತು ಹಿರಣ್ಯ…!
ಇದು ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭಿಮನ್ನು ನೇತೃತ್ವದ ಗಜಪಡೆ ಭಾನುವಾರ ಅರಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಸುಂದರ ದೃಶ್ಯಗಳು.
ಶನಿವಾರವಷ್ಟೇ ಸತತ 5ನೇ ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಭಿಮನ್ಯು ಭಾನುವಾರ ಅರಮನೆ ಅಂಗಳದ ಆನೆ ಬಿಡಾರದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದ. ಬೆಳಗ್ಗೆಯೇ ಸ್ನಾನ ಮಾಡಿ, ಕುಸುರೆ, ಸೊಪ್ಪು ತಿಂದು ತನಗಾಗಿಯೇ ನಿರ್ಮಿಸಿರುವ ಶೆಡ್ ನಲ್ಲಿ ಹುಲ್ಲು ತಿನ್ನುತ್ತಾ ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ಅದರ ಮಾವುತ ವಸಂತ ತುಂಬಾ ಖುಷಿಯಿಂದಲೇ ಮುತ್ತುಕೊಟ್ಟು ಮುದ್ದಾಡುತ್ತಿದ್ದರು. ಕಾವಾಡಿ ರಾಜು ಕೂಡ ಅಭಿಮನ್ಯುಗೆ ಬೇಕಾದ ಆಹಾರವನ್ನು ನೀಡುತ್ತಿದ್ದ ದೃಶ್ಯ ಕಂಡುಬಂತು.
ಧನಂಜಯ, ಗೋಪಿ, ಪ್ರಶಾಂತ, ಹಿರಣ್ಯಾ ಹಸಿ ಹುಲ್ಲು, ಸೊಪ್ಪು ಮೇಯುತ್ತಾ ನಿಂತಿದ್ದವು, ಮತ್ತೊಂದು ಕಡೆ ಏಕಲವ್ಯ, ಭೀಮ, ರೋಹಿತ್, ಲಕ್ಷ್ಮೀ ಮೇಯುತ್ತಾ ವಿಶ್ರಾಂತಿ ಪಡೆಯುತ್ತಿದ್ದವು. ಮರದ ಅಡಿಯಲ್ಲಿ ನಿಂತಿದ್ದ ಮಹೇಂದ್ರ ಮಾತ್ರ ಕೆಸರಿನಲ್ಲಿ ಆಟವಾಡುತ್ತಿದ್ದ ದೃಶ್ಯ ಕಂಡುಬಂತು.
ಇನ್ನೂ ಅರಮನೆಯ ಆನೆ ಬಿಡಾರದಲ್ಲಿರುವ ದೊಡ್ಡದಾದ ತೊಟ್ಟಿಯಲ್ಲಿ ಸುಗ್ರೀವ ಮತ್ತು ಕಂಜನ್ ಮಜ್ಜನಕ್ಕೆ ಮೈಯೊಡ್ಡಿದ್ದರು. ಮಾವುತ ಜಿ.ಜೆ.ಶಂಕರ್, ಸುಗ್ರೀವ ಆನೆಯನ್ನು, ಕಾವಾಡಿ ಕಿರಣ್ ಕಂಜನ್ ಆನೆಯನ್ನು ಮಲಗಿಸಿ ಪೈಪ್ ಸಹಾಯದಿಂದ ನೀರು ಚಿಮ್ಮಿಸಿ ಬ್ರಶ್ ಸಹಾಯದಿಂದ ಮೈಯೆಲ್ಲಾ ಉಜ್ಜಿ ಸ್ನಾನ ಮಾಡಿಸುತ್ತಿದ್ದರು. ಒಟ್ಟಾರೆಯಾಗಿ 14 ಆನೆಗಳು ಯಶಸ್ವಿಯಾಗಿ ದಸರಾ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದವು.
ಆನೆಗಳನ್ನು ನೋಡಲು ಮುಗಿಬಿದ್ದ ಜನತೆ.. ಜಂಬೂಸವಾರಿಯ ಮರು ದಿನವಾದ ಭಾನುವಾರ ಮೈಸೂರು ಅರಮನೆ ಆವರಣವು ಪ್ರವಾಸಿಗರಿಂದ ಕೂಡಿತ್ತು. ಪ್ರವಾಸಿಗರು ಅರಮನೆಯನ್ನು ವೀಕ್ಷಿಸಿ ಬಳಿಕ, ದಸರಾ ಆನೆಗಳನ್ನು ನೋಡಲು ಮುಗಿಬಿದ್ದರು. ಕುತೂಹಲದಿಂದ ಆನೆ ಬಿಡಾರದತ್ತ ಕುಟುಂಬ ಸಮೇತ ಧಾವಿಸಿ, ಪ್ಲೇಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಕಾಡಿನ ಮಕ್ಕಳ ಕಲರವ: ಗಜಪಡೆಯ ಮಾವುತರು, ಕಾವಾಡಿಯ ಪುಟಾಣಿ ಮಕ್ಕಳು ವಿವಿಧ ಆಟೋಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಭ್ರಮಿಸಿದ್ದರು.
ಇಂದು ಕಾಡಿನತ್ತ ಪಯಣ: ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿರುವ ದಸರಾ ಗಜಪಡೆ ಇಂದು ಕಾಡಿನಿಂದ ನಾಡಿಗೆ ಹೊರಡಲು ಸಜ್ಜಾಗಿವೆ. ಅವುಗಳೊಂದಿಗೆ ಮಾವುತರು ಹಾಗೂ ಕಾವಾಡಿಗರು ಸಹ ತಮ್ಮ ಕುಟುಂಬ ಸಮೇತ ತಮ್ಮ ಸ್ವಸ್ಥಾನಕ್ಕೆ ತೆರಳಲು ಸಿದ್ಧವಾಗಿದ್ದಾರೆ.