Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು: ಮಕ್ಕಳ ದಸರಾಗೆ ಮೆರಗು ನೀಡಿದ ಚಿಣ್ಣರು

ಮೈಸೂರು: ಒಂದೆಡೆ ಮಹನೀಯರ ವೇಷಭೂಷಣ ತೊಟ್ಟು ಹೆಜ್ಜೆ ಹಾಕಿದ ಚಿಣ್ಣರು, ಮೊಗದಂದು ಕಡೆ ಗಣಿತ-ವಿಜ್ಞಾನದ ಪ್ರಯೋಗಾಲಯ, ವ್ಯಾಪರ-ವಹಿವಾಟು, ಚಾಮುಂಡಿ ದುರ್ಗಿ ಹಾಡಿಗೆ ನೃತ್ಯ….. ಅಬ್ಬ ಒಂದೇ ಎರಡೇ, ಭಾನುವಾರ ಇಲ್ಲಿನ ಕಲಾಮಂದಿರದಲ್ಲಿ ನಡೆದ ಮಕ್ಕಳ ದಸರೆಯಲ್ಲಿ ಇಂತಹ ನೂರಾರು ನೋಟಗಳು ಕಣ್ಣಿನಲ್ಲಿ ಸೆರೆಯಾದವು.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಉಪಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸಾರೆಗೆ ಚಿಣ್ಣರು ಮೆರಗು ತುಂಬಿದರು.

ತಳ್ಳಾಟ-ನೂಕಾಟಗಳಿಲ್ಲದೆ ನಿರಳಾವಾಗಿ ಭಾಗಿಯಾಗಿದ್ದ ಜನ. ಮಕ್ಕಳು ಮಹನೀಯರ ವೇಷಭೂಷಣ ತೊಟ್ಟು ಪುಟಾಣಿಗಳು ಗಾಂಭೀರ್ಯದಿಂದ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಚಾಮುಂಡಿ, ದುರ್ಗಿ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಜನಪದ ನೃತ್ಯ, ಗೀತಾಗಾಯನ ಸೌರಭ ಹೀಗೆ ನಾನಾ ಕಲಾ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

ವಿಶಿಷ್ಟ ಮಳಿಗೆಗಳು…
ಮಕ್ಕಳ ದಸರಾ ಅಂಗವಾಗಿ ನಿರ್ಮಿತವಾದ ವಿಶಿಷ್ಟ ಮಳಿಗೆಗಳು, ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯ, ಕರ್ನಾಟಕದ ಜನಪದ ಕಲೆಗಳು, ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಮೈಸೂರಿನ ರಾಜ ಪರಂಪರೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮೈಸೂರಿನ ವಿಶೇಷತೆಗಳು, ಕೆ ಆರ್ ನಗರದ ಸುಗ್ಗಿ ಸಿರಿ ಸಿರಿಧಾನ್ಯಗಳ ಮಹತ್ವ ಪೌಷ್ಟಿಕ ಆಹಾರ, ಪಿರಿಯಾಪಟ್ಟಣ ಶಾಲೆಯ ಕರ್ನಾಟಕದ ಇತಿಹಾಸ, ಎಚ್.ಡಿ ಕೋಟೆಯ ಸಸ್ಯ ಸಿರಿ ಔಷಧೀಯ ಸಸ್ಯಗಳು, ಕರಕುಶಲ ವಸ್ತುಗಳ ಪ್ರದರ್ಶನ ನಜರಾಬಾದ್, ಅಗಸ್ತ್ಯ ಫೌಂಡೇಶನ್ ನ ವಿಜ್ಞಾನ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ 15ಕ್ಕೂ ಹೆಚ್ಚು ಮಳಿಗೆಗಳು ಮಕ್ಕಳ ದಸರಾದಲ್ಲಿ ಮುಖ್ಯ ಆಕರ್ಷಣೆಯಾಗಿದ್ದವು.

ಮಕ್ಕಳ ದಸರಾ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ, ಮಕ್ಕಳಲ್ಲಿ ಅಡಗಿರುವ ನಾನಾ ಪ್ರತಿಭೆಗಳನ್ನು ಗುರುತಿಸಿ, ಹೊರ ತಂದು ಪ್ರೋತ್ಸಾಹ ನೀಡಲು ಮಕ್ಕಳ ದಸರಾ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಅತ್ಯಂತ ರಚನಾತ್ಮಕ ಮತ್ತು ಕ್ರಿಯಾಶೀಲವಾದ ಮಕ್ಕಳ ದಸರಾ ಆಯೋಜನೆ ಶ್ಲಾಘನೀಯ. ದಸರಾ ಉತ್ಸವದ ಸಂದರ್ಭ ಮತ್ತೆಲ್ಲೂ ಕಂಡುಬರದ ಮಕ್ಕಳ ದಸರಾವನ್ನು ಇಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುವುತ್ತಿರುವುದು ಉತ್ತಮವಾದ ಪ್ರಯತ್ನ ಎಂದರು.

ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಎಂಬಂತೆ ಈ ದೇಶವನ್ನು ಸದ್ ಮಾರ್ಗದಲ್ಲಿ ಮುಂದೆ ನಡೆಸುವವರು ಇಂದಿನ ಮಕ್ಕಳೇ. ಈ ಸಂದರ್ಭದಲ್ಲಿ ತಂದೆಯಾವರಾದ ಬಂಗಾರಪ್ಪ ಅವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭವನ್ನು ನೆನೆಯುತ್ತಾ, ಡಾ. ರಾಜ್ ಕುಮಾರ್ ಮತ್ತು ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಸಮಯದಲ್ಲಿ ಅನಾರೋಗ್ಯ ಕಾರಣದಿಂದ ಕುವೆಂಪುರವರು ಪ್ರಶಸ್ತಿಯನ್ನು ಸ್ವೀಕರಿಸಿರಲಿಲ್ಲ. ಮುಖ್ಯಮಂತ್ರಿಗಳಾದ ಬಂಗಾರಪ್ಪನವರು ತಮ್ಮ ಗುರುಗಳ ಪ್ರಶಸ್ತಿಯನ್ನು ಸ್ವೀಕರಿಸಿ ತನ್ನ ಗುರುಗಳಿಗೆ ತಲುಪಿಸಿ, ಅವರನ್ನು ಮೈಸೂರಿನಿಂದ ತೀರ್ಥಹಳ್ಳಿ ಮನೆಗೆ ಕರೆದುಕೊಂಡು ಹೋಗಿದ್ದಂತಹ ಸಂದರ್ಭದ ಗುರು ಶಿಷ್ಯರ ಒಡನಾಟವನ್ನು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಅನೇಕ ಕೊರತೆ ಇದೆ ಆದರೆ ವಿಶ್ವಾಸವನ್ನು ಕಳೆದುಕೊಂಡಿರುವುದಿಲ್ಲ. ಇಂದಿಗೂ ಉತ್ತಮ ಶಿಕ್ಷಕರು ಕಾಣಸಿಗುವುದು ನಮ್ಮ ಸರ್ಕಾರಿ ಶಾಲೆಗಳಲ್ಲಿಯೇ. ಇಂದು ಅಜೀಮ್ ಪ್ರೇಮ್ ಜಿ ಅವರ ಕೊಡುಗೆಯಾಗಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆಯನ್ನು ನೀಡುತ್ತಿದ್ದೇವೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ರಾದ ಡಾ. ಮಾನಸ ಮಾತನಾಡಿ, ಮಕ್ಕಳು ಟಿ.ವಿ. ಹಾಗೂ ಮೊಬೈಲ್‌ಗಳಿಂದ ಹಾಳಾಗುತ್ತಿದ್ದಾರೆಂಬ ಮಾತು ಈಗ ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಟಿ.ವಿ. ಮೊಬೈಲ್‌ಗಳಲ್ಲಿ ಒಳಿತು–ಕೆಡಕು ಉಂಟು ಮಾಡುವ ಎರಡು ಅಂಶಗಳಿದ್ದು, ಮಕ್ಕಳು ಒಳ್ಳೆಯ ಅಂಶಗಳತ್ತ ಮಾತ್ರ ಗಮನಹರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವ ಮಕ್ಕಳೂ ದಡ್ಡರಲ್ಲ. ಮಕ್ಕಳಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಎರಡೂ ಇರುತ್ತವೆ. ಮಕ್ಕಳ ಕೆಟ್ಟ ಕೆಲಸಗಳ ಬಗ್ಗೆ ತಿಳಿಸಿ, ಒಳ್ಳೆ ಗುಣಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು, ಆ ಮೂಲಕ ಒಳ್ಳೆಯ ಪ್ರಜೆಯನ್ನಾಗಿ ಮಾರ್ಪಡಿಸಬೇಕು ಎಂದರು.

ಬಾಲ ಪ್ರತಿಭೆಗಳಿಗೆ ಸನ್ಮಾನ

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಬಾಲ ಕಲಾವಿದರಾದ ಜೀ ಕನ್ನಡದ ಸೀತಾರಾಮ ಧಾರವಾಹಿಯ ಬಾಲನಟಿ ರೀತು ಸಿಂಗ್, ಹೆಚ್.ಎಸ್. ಮಹೇಶ್ ಕುಮಾರ್, ಆರ್.ಸಿ ಗೌಡ, ರಿಷಿ ಶಿವ ಪ್ರಸನ್ನ ಬಾಲ ಪ್ರತಿಭೆಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಜಿ. ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ ಎಸ್ ಜವರೇಗೌಡ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ನಿಂಗರಾಜು, ಮಹಿಳಾ Cards ಮಕ್ಕಳ ದಸರಾ ಉಪಸಮಿತಿಯ ಉಪ ವಿಶೇಷ ಅಧಿಕಾರಿಗಳು ಮತ್ತು ಜಂಟಿ ನಿರ್ದೇಶಕರಾದ ವಿ. ಪ್ರಿಯದರ್ಶಿನಿ,ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: