Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಹಾಸನದಲ್ಲಿವೆ ಹತ್ತಾರು ಐತಿಹಾಸಿಕ ದೇವಾಲಯಗಳು

ಹಾಸನಾಂಬ ದೇವಾಲಯ:
ಎಲ್ಲರಿಗೂ ಚಿರಪರಿಚಿತವಾದ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲಿ ಹಾಸನಾಂಬ ದೇವಾಲಯವೂ ಒಂದು. ಈ ದೇವಾಲಯವು ಕಾವೇರಿ ನದಿಯ ದಡದಲ್ಲಿದೆ. ಸಾಕಷ್ಟು ಭಕ್ತಾದಿಗಳನ್ನು ಹೊಂದಿರುವ ಈ ದೇವಾಲಯಕ್ಕೆ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಹಾಸನದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಈ ದೇವಾಲಯದಲ್ಲಿ ಸಾಕಷ್ಟು ಪವಾಡಗಳು ನಡೆಯುತ್ತವೆ ಎಂಬುದನ್ನು ಜನರು ಇಂದಿಗೂ ನಂಬುತ್ತಾರೆ. ಈ ಸುಂದರ ದೇವಾಲಯವನು ನೋಡಲು ನಿಮ್ಮ ಹಾಸನ ಪ್ರವಾಸದ ಸಮಯದಲ್ಲಿ ಒಮ್ಮೆಯಾದರೂ ಭೇಟಿ ನೀಡಬಹುದು.

ಲಕ್ಷ್ಮೀ ದೇವಿ ದೇವಸ್ಥಾನ:
ಹಾಸನದ ದೊಡ್ಡಗದ್ದವಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀ ದೇವಿ ದೇವಸ್ಥಾನವನ್ನು ಹೊಯ್ಸಳರು 12ನೇ ಶತಮಾನದಲ್ಲಿ ನಿರ್ಮಿಸಿದರು ಎಂಬ ಇತಿಹಾಸವಿದೆ. ನೀವು ಇತಿಹಾಸ ಪ್ರಿಯರಾಗಿದ್ದರೆ, ಹಾಸನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಈ ಭವ್ಯವಾದ ದೇವಾಲಯಕ್ಕೆ ಭೇಟಿ ನೀಡಬಹುದು. ಬೆಳಿಗ್ಗೆ 9ರಿಂದ ಸಂಜೆ 6:30 ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಇದು ಹಾಸನ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ. ಇಲ್ಲಿ ಮುಖ್ಯ ದೇವಾಲಯವು ನಾಲ್ಕು ದೇಗುಲಗಳನ್ನು ಒಳಗೊಂಡಿದ್ದು, ಪೂರ್ವ ದೇಗುಲವು ಲಕ್ಷ್ಮೀ ದೇವಿಯನ್ನು ಹೊಂದಿದ್ದರೆ, ಉತ್ತರದ ದೇವಾಲಯದಲ್ಲಿ ಕಾಳಿ-ದುರ್ಗೆಯರು, ಪಶ್ಚಿಮದಲ್ಲಿ ಶಿವನ ದೇವಾಲಯವಿದೆ. ದಕ್ಷಿಣವು ಖಾಲಿಯಾಗಿದೆ. ಬಹುಶಃ ಇಲ್ಲಿ ವಿಷ್ಣು ದೇವರಿತ್ತು ಎಂದು ನಂಬಲಾಗಿದೆ.

ಬೂಸೇಶ್ವರ ದೇವಾಲಯ:
ಹಾಸನದ ಮತ್ತೊಂದು ಜನಪ್ರಿಯ ದೇವಾಲಯಗಳಲ್ಲಿ ಬೂಸೇಶ್ವರ ದೇವಾಲಯವೂ ಒಂದು. ಕೊರವಂಗಲ ದೇವಾಲಯ ಎಂದು ಪ್ರಸಿದ್ಧವಾಗಿರುವ ಈ ಬೂಸೇಶ್ವರ ದೇವಾಲಯವು ಹಾಸನದಲ್ಲಿರುವ ಶಿವನಿಗೆ ಅರ್ಪಿತವಾದ ಮತ್ತೊಂದು ದೇವಾಲಯ. ಸುಮಾರು 11-12ನೇ ಶತಮಾನದಲ್ಲಿ ಹೊಯ್ಸಳ ರಾಜವಂಶದ ಅವಧಿಯಲ್ಲಿ ಈ ದೇವಾಲಯವನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಾಸನದ ಹೃದಯ ಭಾಗದಲ್ಲಿಯೇ ಇದ್ದು, ಈ ದೇವಾಲಯವನ್ನು ನಗರದ ರಕ್ಷಕನೆಂದು ನಂಬಲಾದ ಭಗವಾನ್ ಭುಸೇಶ್ವರನಿಗೆ ಸಮರ್ಪಿತವಾಗಿದೆ. ಇಲ್ಲಿ ಅನೇಕ ಸುಂದರವಾದ ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ಕಾಣಬಹುದು.

ಈಶ್ವರ ದೇವಾಲಯ:
ಈಶ್ವರ ದೇವಾಲಯವು ಹಾಸನ ಜಿಲ್ಲೆಯ ಅರಸೀಕೆರೆ ಯಲ್ಲಿರುವ ಹೊಯ್ಸಳ ರಾಜವಂಶದವರು ನಿರ್ಮಿಸಿರುವ ಸುಂದರ ದೇವಾಲಯ, 13ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು 16 ಬಿಂದುಗಳು ನಕ್ಷತ್ರಾಕಾರದ ಗುಮ್ಮಟ ಮಂಟಪವನ್ನು ಹೊಂದಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಕಾವೇರಿ ನದಿಯ ದಂಡೆಯ ಮೇಲಿದ್ದು, ಹಾಸನ ಜಿಲ್ಲಾ ಕೇಂದ್ರದಿಂದ ಕೆಲವೇ ಕಿ.ಮೀಗಳ ದೂರದಲ್ಲಿದೆ. ಇನ್ನು ಈ ದೇವಾಲಯವನ್ನು ಸಾಬೂನು ಕಲ್ಲು ಬಳಸಿ ನಿರ್ಮಿಸಿರುವುದು ವಿಶೇಷವಾಗಿದ್ದು, ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಇದು ತೆರೆದ ನವರಂಗ ಮತ್ತು ಮುಖ-ಮಂಟಪವನ್ನು ಹೊಂದಿದೆ.

ಕೇದಾರೇಶ್ವರ ದೇವಾಲಯ:
ಹೊಯ್ಸಳ ರಾಜ ವೀರ ಬಲ್ಲಾಳ ಕ್ರಿ.ಶ.1220ರ ಸುಮಾರಿಗೆ ಈ ಕೇದಾರೇಶ್ವರ ದೇವಾಲಯವನ್ನು ನಿರ್ಮಿಸಿದನು ಎಂಬ ಇತಿಹಾಸವಿದೆ. ಹಳೇಬೀಡು ಎಂದೇ ಪ್ರಸಿದ್ಧಿ ಪಡೆದಿರುವ ಈ ದೇವಾಲಯವು ಬೇಲೂರಿನ ಹೊಯ್ಸಳೇಶ್ವರ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿದೆ. ಶಿವನಿಗೆ ಅರ್ಪಿತವಾದ ಈ ದೇವಾಲಯವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನ ಸಂಕೀರ್ಣವಾದ ಕೆತ್ತನೆಗಳು, ಶಿಲ್ಪಗಳನ್ನು ಇಲ್ಲಿ ಕೆತ್ತಲಾಗಿದೆ. ಸಾಮಾನ್ಯ ಬೇಲೂರಿಗೆ ಭೇಟಿ ನೀಡಿದ ಪ್ರವಾಸಿಗರು ಹಳೇಬೀಡಿನ ಈ ದೇವಾಲಯಕ್ಕೂ ಭೇಟಿ ನೀಡುವುದು ವಾಡಿಕೆ.
ಇವುಗಳಲ್ಲದೆ ಹಾಸನದಲ್ಲಿ ಬೆಟ್ಟದ ಮೇಲಿನ ಜೈನ ಮಠ, ಅಲ್ಲಾಲನಾಥ ದೇವಾಲಯ, ಶೆಟ್ಟಹಳ್ಳಿ ಚರ್ಚ್, ಹುಲಿಕೆರೆ ಕೊಳ, ಪಾರ್ವತಮ್ಮ ಬೆಟ್ಟ, ಕಪ್ಪೆ ಚಿನ್ನಿಗರಾಯ ದೇವಸ್ಥಾನ, ಭೋಗ ನರಸಿಂಗ ದೇವಾಲಯ, ಗೊರೂರು ಅಣೆಕಟ್ಟು, ಮಹಾರಾಜ ಪಾರ್ಕ್ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಕಣ್ಣುಂಬಿಕೊಳ್ಳಬಹುದು. ಇನ್ನೇಕೆ ತಡ ಹಾಸನಕ್ಕೂ ಒಂದು ಭೇಟಿ ಕೊಡಿ.

ಭಗವಾನ್ ಬಾಹುಬಲಿ ಪ್ರತಿಮೆ:
ಭಗವಾನ್ ಬಾಹುಬಲಿ ಪ್ರತಿಮೆಯು ಹಾಸನದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಇದನ್ನು ಗೊಮ್ಮಟೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತಿದ್ದು, ಗೊಮ್ಮಟೇಶ್ವರ ಏಕ ಶಿಲಾ ಮೂರ್ತಿ ಬೆಟ್ಟದ ತುದಿಯಲ್ಲಿದೆ. ಇದನ್ನು 10ನೇ ಶತಮಾನದಲ್ಲಿ ಗಂಗ ರಾಜವಂಶದ ರಾಜ ರಾಜಮಲ್ಲನ ಕಮಾಂಡ‌ ಚಾವುಂಡರಾಯ ನಿರ್ಮಿಸಿದನು ಎಂಬ ಇತಿಹಾಸವಿದೆ. 17 ಮೀಟರ್ ಎತ್ತರವಿರುವ ವಿಶ್ವದ ಅತಿ ಎತ್ತರದ ಏಕಶಿಲೆಯ ಪ್ರತಿಮೆ ಇದಾಗಿದೆ. ಹಾಸನದ ಪ್ರವಾಸಿಗೆ ಭೇಟಿ ನೀಡುವವರು ಇಲ್ಲಿಗೆ ಭೇಟಿ ನೀಡದಿದ್ದರೆ ಪ್ರವಾಸ ಅಪೂರ್ಣ ಎಂದೇ ಹೇಳಬಹುದು.

ಕಳೆದ ವಾರ ‘ಆಂದೋಲನ’ದ ವಾರಾಂತ್ಯ ವಿಶೇಷ ಸಂಚಿಕೆಯಲ್ಲಿ ಮೈಸೂರಿನಿಂದ ಕೇವಲ 23 ಕಿ.ಮೀ. ದೂರದಲ್ಲಿರುವ ನಂಜನಗೂಡಿನ ತಾಲ್ಲೂಕಿನ ಅನೇಕ ಪ್ರವಾಸಿ ತಾಣಗಳ ಬಗ್ಗೆ ಕಿರುಪರಿಚಯ ಮಾಡಲಾಗಿತ್ತು. ಬಿಡುವಿನ ಸಮಯದಲ್ಲಿ ನೀವು ಅಲ್ಲಿಗೆ ಪ್ರವಾಸ ಕೈಗೊಂಡಿದ್ದೀರಾ ಎಂದು ಭಾವಿಸಿದ್ದೇವೆ. ಇಂದು ಅಂತಹದ್ದೇ ಒಂದು ಪ್ರವಾಸಿ ತಾಣದ ಪರಿಚಯ ಮಾಡಿಕೊಳ್ಳೋಣ. ದಸರಾ ರಜೆಗೆಂದು ಮೈಸೂರಿಗೆ ಆಗಮಿಸಿರುವ ನಿಮ್ಮ ಕುಟುಂಬದವರೊಂದಿಗೆ ನೀವು ಒಂದು ದಿನದಲ್ಲಿ ಇಲ್ಲಿಗೂ ಹೋಗಿ ಬರಬಹುದು. ಮೈಸೂರಿನ ಪಕ್ಕದ ಜಿಲ್ಲೆಯಾದ ಹಾಸನವು ಸಾಕಷ್ಟು ಪ್ರವಾಸಿ ತಾಣಗಳನ್ನು ಒಳಗೊಂಡು ಹಚ್ಚಹಸಿರಿನಿಂದ ಕಂಗೊಳಿಸುವ ಒಂದು ಸುಂದರ ತಾಣ. ಇಲ್ಲಿ ಸಾಕಷ್ಟು ಪ್ರಾಕೃತಿಕ ಸೌಂದರ್ಯದ ಪ್ರವಾಸಿ ತಾಣಗಳಿರುವ ಜತೆಗೆ ಐತಿಹಾಸಿಕ ದೇವಾಲಯಗಳೂ ಇವೆ.

 

 

Tags: