Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ʻಕಾವೇರಿ ದೀಪಾರತಿʼ ಮೌಢ್ಯ ಆಚಾರಣೆ: ವೆಂಕಟಗಿರಿಯಯ್ಯ

ಮಂಡ್ಯ: ಕಾವೇರಿ ದೀಪಾರತಿ ಎಂಬುದು  ಮೌಢ್ಯ ಆಚರಣೆಯಾಗಿದ್ದು, ಕಾವೇರಿ ಆರತಿ ಬದಲಾಗಿ ನದಿಗೆ ವೈಜ್ಞಾನಿಕ, ವೈಚಾರಿಕ ಸ್ಪರ್ಶ ನೀಡಿ, ನದಿ ನೀರಿದ ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅವರು ಸರ್ಕಾರ ಹಾಗೂ  ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿಯ ಎರಗಿರುವ ಗಂಡಾಂತರ ನಿವಾರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡದೇ, ಕಾವೇರಿ ದೀಪಾರತಿ ಮೂಲಕ ಮೌಢ್ಯಾಚರಣೆ, ಮತ್ತು ಭಾವನಾತ್ಮಕವಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ ಎಂದು ದೂರಿದರು.

ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಭಾಗದ ಜನ ಜಾನುವಾರುಗಳ ಕುಡಿಯುವ ನೀರಿನ ಜೀವನಾಡಿಯಾಗಿರುವ ಕಾವೇರಿ ನದಿಯನ್ನು ಶುದ್ದವಾಗಿರಿಸಿಕೊಳ್ಳಲು ಸರ್ಕಾರ ವಿಫಲವಾಗಿದ್ದು, ಮೈಸೂರು, ಶ್ರೀರಂಗಪಟ್ಟಣ ಭಾಗದ ಕೊಳಚೆ ನೀರು ನದಿ ಸೇರುವುದನ್ನು ತಡೆಯಲು, ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ನೀರು ವೈಜ್ಞಾನಿಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕಾರ್ಯತಂತ್ರ ರೂಪಿಸಲು ಮುಂದಾಗಬೇಕೆಂದು ಒತ್ತಾಯ ಮಾಡಿದರು.

ತಮಿಳುನಾಡಿನಿಂದ ನಮ್ಮ ಭಾಗದ ನೀರು ಕಸಿಯುವ ಷಡ್ಯಂತ್ರ ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರ ವಿಫಲವಾಗಿದ್ದು, ಕೇಂದ್ರ ಸರ್ಕಾರವೂ ಭಾರತ ಸಂವಿಧಾನದ ಕಾಲಂ ೨೬೨ರಡಿ ರಾಷ್ಟ್ರೀಯ ಜಲ ನೀತಿ ರೂಪಿಸಿ ಎಲ್ಲ ರಾಜ್ಯಗಳಿಗೂ ಸಮಾನವಾದ ನೀರಿನ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ. ಇದರಿಂದ ಕರ್ನಾಟಕ ಜಲ ಸಂಪನ್ಮೂಲ ಲೂಟಿಯಾಗುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕಾವೇರಿ ಬಗ್ಗೆ ಗೌರವವಿದ್ದಲ್ಲಿ ನದಿಗಿರುವ ಆಂತರಿಕ, ಕಾವೇರಿ ಆರತಿಯನ್ನು ಕೈಬಿಟ್ಟು, ನದಿಗೆ ಎರಗಿರುವ ಭಾಹ್ಯ ಗಂಡಾಂತರ ನಿವಾರಿಸಿ ಕಾವೇರಿ ಅಚ್ಚುಕಟ್ಟು ಪ್ರದೇಶದ ಜನರಿಗೆ ಜಾಗೃತಿಗೆ ನೆರವಾಗುವ ಕಾರ್ಯತಂತ್ರ ರೂಪಿಸಬೇಕು, ಆರತಿಗಿಟ್ಟ ಅನುದಾನದಿಂದ ಕಾವೇರಿ ನೀರು ಸದ್ಬಳಕೆ, ಸಂಶೋಧನಾ ತರಬೇತಿ ತೆರೆಯುವಂತೆ ಮನವಿ ಮಾಡಿದರು.

ಸರ್ಕಾರ ಕೊಳಚೆ ನೀರು ನದಿ ಸೇರುವುದನ್ನು ತಡೆಯಲು, ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬೆಳೆಗಳಿಗೆ ನೀರು ವೈಜ್ಞಾನಿಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕಾರ್ಯತಂತ್ರ ರೂಪಿಸಲು ಆದ್ಯತೆ ನೀಡದೆ ಅನಗತ್ಯ ವಿಚಾರಕ್ಕೆ ಮುಂದಾಗಿರುವುದು ಸರಿಯಲ್ಲ. ನಾಡಿಗೆ ವೈಚಾರಿಕ, ವೈಜ್ಞಾನಿಕ ಸ್ಪರ್ಶ ನೀಡಿ, ಜನಾಭಿವೃದ್ಧಿ, ರಾಜ್ಯದ ಅಭಿವೃದ್ಧಿ ಕಡೆಗೆ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ಆನಂದ್, ಮುದ್ದರಾಜು, ದೇವರಾಜು ಇದ್ದರು.

Tags: