Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮಾಗಿದ ಜೀವಗಳ ನಗು

• ಕೀರ್ತಿ ಬೈಂದೂರು
ಸಿನಿಮಾ ನೋಡುವುದಕ್ಕೆಂದು ಗೆಳತಿಯರು ಒಟ್ಟಾಗಿ ಥಿಯೇಟರ್‌ನಲ್ಲಿ ಕೂತಿದ್ದೆವು. ‘ಇನ್ನೇನು ರಾಷ್ಟ್ರಗೀತೆ ಬರತ್ತೆ, ಏಳೋದಕ್ಕೆ ತಯಾರಾಗಿರು ಅಂತ ಪಕ್ಕದಲ್ಲಿ ಕೂತ ಅಜ್ಜ ಮೊದಲೇ ಅಜ್ಜಿಯನ್ನು ಎಬ್ಬಿಸಿದರು. ಸಿನಿಮಾ ಆರಂಭವಾಗಿ ಹತ್ತು ನಿಮಿಷ ಕಳೆದಿರಲಿಕ್ಕೂ ಇಲ್ಲ, ಅಷ್ಟರಲ್ಲಿ ಈ ಅಜ್ಜ ಸಿನಿ ವಿಮರ್ಶೆಗೆ ತೊಡಗಿದ್ದೇ. ಅಷ್ಟಕ್ಕೂ ಕಾಣುತ್ತಿದ್ದ ಚಿತ್ರ, ಇತ್ತೀಚಿನ ಸಿನಿಮಾಗಳಿಗಿಂತ ಭಿನ್ನ ಕಥಾಹಂದರವನ್ನೇನೂ ಒಳಗೊಂಡಿರಲಿಲ್ಲ ಎನ್ನಿ. ವಿಚಿತ್ರವೆಂದರೆ ಈ ಅಜ್ಜ ಚಿತ್ರದ ಕತೆ ಹೋಲುವ ಇತರ ಸಿನಿಮಾಗಳ ಹೆಸರನು ಒಂದಾದ ಮೇಲೊಂದರಂತೆ ಹೇಳುತ್ತಲಿದ್ದರು!

ಹೆಸರಿಸಿದ ಕೆಲವೊಂದು ಸಿನಿಮಾಗಳನ್ನು ನೋಡಿರದ ನಮಗೆಲ್ಲಾ ಅಚ್ಚರಿ. ಹೇಗೆ ಸಾಧ್ಯ ಕೇಳೋಣವೆಂದು ಮಧ್ಯೆ ಬಾಯಿ ಹಾಕಿದರೆ, ಎಲ್ಲಿ ಅವರ ಭಾವಪರವಶತೆಯನ್ನು ಕದಲಿಸಿದಂತಾಗುವುದೋ ಎಂದು ಸುಮ್ಮನಿದ್ದೆವು. ಈಗಿನ ನಾಯಕರು ನಮ್ಮ ಕಾಲದ ನಾಯಕರಿಗೆ ಸಮರಲ್ಲ ಎಂಬುದು ಅಜ್ಜ ಅಜ್ಜಿಯರ ಏಕಮತ. ಹಾಗಾಗಿಯೋ ಏನೋ ರೊಮ್ಯಾಂಟಿಕ್ ಹಾಡುಗಳ ಹಿನ್ನೆಲೆಯಲ್ಲಿ ಅವರಿಬ್ಬರು ರೆಟ್ರೋ ಸಿನಿಮಾದ ಹಿಟ್ ಜೋಡಿಗಳನ್ನು ಕಲ್ಪಿಸಿಕೊಳ್ಳುತ್ತಿದ್ದರು. ಅಜ್ಜಿ ಮೆಲುವಾಗಿ ಒಂದೆರಡು ಹಾಡುಗಳನ್ನು ಮೈಮರೆತು ಗುನುಗಿದ್ದರು. ನಾವು ಅಚ್ಚರಿಯಿಂದ ಅವರನ್ನೇ ನೋಡುತ್ತಿದ್ದೆವು. ಸುಮ್ಮನಿರೆಂದು ಪಾಪದ ಅಜ್ಜಿಯನ್ನು ಅಜ್ಜ ಎಚ್ಚರಿಸಿದ್ದೂ ಆಯಿತು. ಕಾಣುತ್ತಿದ್ದ ಚಿತ್ರದಲ್ಲಿ ನಾಯಕಿ ದೊಡ್ಡ ಕಾಯಿಲೆಯಲ್ಲಿ ಬಳಲುತ್ತಿರುತ್ತಾಳೆ, ಚಲನಚಿತ್ರದ ಒಳ ತಿರುಳು ಧನಾತ್ಮಕವಾಗೇ ಇದ್ದರೂ ನನ್ನಂಥವಳಿಗೆ ಟ್ರಾಜಿಡಿ ಸಿನೆಮಾವನ್ನು ಅರಗಿಸಿಕೊಳ್ಳುವುದಕ್ಕೆ ವಾರವಾದರೂ ಬೇಕು. ಆ ವರ್ಷ ನಂಗೆ ಹಾಗಾಗಿರ್ಲಿಲ್ವಾ? ಅವು, ಇವು ಎಷ್ಟು ಅನುಭವಿಸಿದ್ರು!” ಈ ಕತೆಗಳನ್ನು ಸ್ವಲ್ಪ ನಾಜೂಕಾಗಿ ಹೆಣೆದರೆ ಮಸ್ತಾದ ಸಿನಿಮಾ ತಯಾರೆಂಬ ತೀರ್ಮಾನಕ್ಕೂ ಬಂದರು. ಹೀಗೆ ಸಾವಿನೊಂದಿಗೆ ಮುಖಾಮುಖಿಯಾದ ಘಟನೆಗಳನ್ನು ನೆನಪಿಸುತ್ತಾ, ತೆರೆಯ ಮೇಲಣ ಕತೆಯನ್ನೂ ಮೀರಿಸಿದ ಪಂಟರಿವರು.

ಚಿತ್ರದಲ್ಲಿ ಬಾಡುತ್ತಿದ್ದ ಬಳ್ಳಿಯೊಂದನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ನಾಯಕ ಮರುಜೀವ ನೀಡುವ ದೃಶ್ಯವೊಂದಿದೆ. ನಾಯಕಿಗೆ ಹಸಿರೆಂದರೆ ಜೀವ. ಪರದೆಯಲ್ಲಿ ಹಸಿರ ಬಳ್ಳಿಯ ಚಿತ್ರ ಬರುತ್ತಿದ್ದಂತೆ ಇಡೀ ಥಿಯೇಟರ್ ಮೌನವಾಗಿ ಕಣ್ಣುಂಬಿಕೊಳ್ಳುತ್ತಿತ್ತು. ‘ಇವನು ಬಳ್ಳಿ ಹತ್ತಿರದ ಮಣ್ಣ ಗೆದರಿದ ತಕ್ಷಣ ಮಳೆ ಬರತ್ತಾ!’ ಎಂದು ಅಜ್ಜ ಲಾಜಿಕ್ ತಿಳಿಸುತ್ತಿದ್ದರೆ, ‘ಏ, ಎಷ್ಟೇ ಚೆನ್ನಾಗಿ ಹೂ ಅರಳಿದೆ ನೋಡ್ರಿ!’, ಮಾತುಗಳನ್ನು ಮೆಲ್ಲನೆ ಉಸುರುತ್ತಾ ಅಜ್ಜಿ ಮ್ಯಾಜಿಕ್ ಗಮನಿಸುತ್ತಿದ್ದರು. ಸಾಮ್ಯ ವೈರುಧ್ಯಗಳ ನಡುವೆ ಬದುಕಬೇಕಾದ ಈ ಜೀವನ ಅದೆಷ್ಟು ಸೋಜಿಗ ಎನಿಸಿದ್ದು, ಇವರಿಬ್ಬರನ್ನೂ ಕಂಡ ಮೇಲೆಯೇ. ಹೀಗೆ ಅಪ್ಪಟ ಜೀವಂತಿಕೆಯ ಕ್ಷಣಗಳನ್ನು ನಗುತ್ತಲೇ ಕಟ್ಟಿಕೊಳ್ಳುವ ಹಿರಿಜೀವಗಳು, ಸಿನೆಮಾ ಮುಗಿದ ಮೇಲೆ ಜನಸಂಧಿಯ ನೂಕುನುಗ್ಗಲಲ್ಲಿ ಅವರಿಬ್ಬರನ್ನೂ ಮಾತಾಡಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ.

ಹಿರಿಯರೊಡನೆ ಒಂದಿಷ್ಟು ಸಮಯವನ್ನು ಕಳೆಯುತ್ತೇನೆ ಎಂಬುವವರಿಗೆ ನಗುವಿಗೆ ಕೊರತೆಯಿಲ್ಲ. ಇಂತಹ ಬಹುತೇಕರಲ್ಲಿ ಆರೋಗ್ಯದ ಗುಟ್ಟು ಕೇಳಿದರೆ ನಗುವೆಂದೇ ಹೇಳುತ್ತಾರೆ. ಹಾಸ್ಯಪ್ರಜ್ಞೆಯಿಂದಲೇ ಬದುಕನ್ನು ಚೈತನ್ಯವಾಗಿರಿಸಿಕೊಂಡ ಹಿರಿಯರಿಗೆಲ್ಲ ಶರಣು.

ಸಿನೆಮಾ ಒಂದೇ ಅಲ್ಲಾ, ಮನೆಯಲ್ಲಿ ಹಿರಿಯರು ಧಾರಾವಾಹಿ ನೋಡುತ್ತಿದ್ದರೆ ಪಕ್ಕ ಕೂತ ನೆನಪುಗಳು ಹಲವರಿಗಿದೆ. ಕೆಲ ಹಿರಿಯರು ಅದರಲ್ಲಿ ಮುಳುಗಿ, ಕಳೆದುಹೋಗಿರುವುದಿದೆ. ತೆರೆಯ ಮೇಲೆ ನಡೆಯುತ್ತಿರುವುದೆಲ್ಲ ಸುಳ್ಳು ಎಂಬ ನಮ್ಮಂತಹವರ ಸಾಕ್ಷಿ ಈ ಹಿರಿಯರ ನ್ಯಾಯಾಲಯಕ್ಕೆ ಬೇಕಾಗಿಲ್ಲ. ಪ್ರತೀ ಪಾತ್ರಗಳ ಜೊತೆಗೆ ಮುಖಾಮುಖಿ ನಡೆಸಿ, ಭಾವನೆಗಳಿಗೆ ಅವರು ಸ್ಪಂದಿಸುವ ರೀತಿಯೇ ಭಿನ್ನ.

Tags: