ಮೈಸೂರು: ಮಹಿಷಾ ಮಂಡಲೋತ್ಸವ ಆಚರಣೆ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಅವಕಾಶ ನೀಡಬೇಕು. ಇಲ್ಲವಾದರೆ ನಾವೇ ಚಾಮುಂಡಿ ಬೆಟ್ಟಕ್ಕೆ ನುಗ್ಗಿ ಪುಷ್ಪಾರ್ಚನೆ ಮಾಡಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ದಲಿತರು ಎಚ್ಚರಿಸಿದ್ದಾರೆ.
ನಗರದ ಪುರಭವನ ಆವರಣದಲ್ಲಿ ನಡೆಯುತ್ತಿದ್ದ ಮಹಿಷಾ ಮಂಡಲೋತ್ಸವ ಕಾರ್ಯಕ್ರಮದ ವೇಳೆ ಚಾಮುಂಡಿ ಬೆಟ್ಟದ ಮಹಿಷನ ಹತ್ತಿರ ನಿಷೇಧಾಜ್ಞೆ ಮಾಡಿರುವುದನ್ನು ದಲಿತತು ಒಕ್ಕೊರಲಿನಿಂದ ಖಂಡಿಸಿದರು.
ಈ ಸಂದರ್ಭದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮ ಮುಗಿದ ನಂತರ ಸಮಿತಿಯ 5 ಜನ ಮುಂಖಡರನ್ನು ಕರೆದುಕೊಂಡು ಹೋಗಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರೆ ಸರಿ, ಇಲ್ಲವಾದರೆ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಎಸಿಪಿ ಶಾಂತಮಲ್ಲಪ್ಪ ಅವರು ದಲಿತ ಸಂಘರ್ಷ ಸಮಿತಿಯೊಂದಿಗೆ ಮಾತನಾಡಿ, ಮಹಿಷನ ಪ್ರತಿಮೆಗೆ ಬಣ್ಣ ಹೊಡೆಯಲಾಗಿದೆ. ಹೀಗಾಗಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು. ಈ ಮಾತನ್ನು ಕೇಳಿದ ಮಹಿಷ ಭಕ್ತರು ಸ್ಥಳದಲ್ಲಿಯೇ ಧಿಕ್ಕಾರ ಕೂಗಿ, ನೀವು ಅವಕಾಶ ನೀಡದಿದ್ದರೆ, ನಾವೇ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಯ ಗೊಂದಲ ಉಂಟಾದಾಗ ಎಸಿಪಿ, ಕಮೀಷನರ್ ಬರುತ್ತಾರೆ ಎಂದು ಅಲ್ಲಿಂದ ಹೊರ ನಡೆದರು.