Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಾರುಕಟ್ಟೆಯ ಮಿತಿಯ ನಡುವೆ ಮಕ್ಕಳ ಚಿತ್ರಗಳು

ಬಾ.ನಾ.ಸುಬ್ರಹ್ಮಣ್ಯ

ಮುಂದಿನ ವಾರ ತೆರೆ ಕಾಣಲಿರುವ ಚಿತ್ರವೊಂದರ ಪೂರ್ವ ಪ್ರದರ್ಶನ ನಿನ್ನೆ ಇತ್ತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅಪರೂಪ. ಮಕ್ಕಳ ಚಿತ್ರಗಳು ಒತ್ತಟ್ಟಿಗಿರಲಿ, ಜನಪ್ರಿಯ ನಟರದೊ, ನಿರ್ದೇಶಕರದೋ ಚಿತ್ರಗಳ ಪೂರ್ವ ಪ್ರದರ್ಶನಗಳೂ ಕಡಿಮೆಯೇ. ಈಗ ಪೂರ್ವ ಪ್ರದರ್ಶನವೂ ಗಳಿಕೆಯ ಮತ್ತೊಂದು ದಾರಿ ಎನ್ನುವವರೂ ಇದ್ದಾರೆ. ಜನಪ್ರಿಯ ನಟರ ಚಿತ್ರಗಳನ್ನು ಬಿಡುಗಡೆಯ ಹಿಂದಿನ ದಿನ ಟಿಕೆಟ್ ಕೊಂಡು ನೋಡುವ ಪೂರ್ವ ಪ್ರದರ್ಶನವಾಗಿ ಬದಲಾಯಿಸಿದ ಸಂಸ್ಥೆಗಳೂ ಇವೆ. ಕೆಲವೊಮ್ಮೆ ಮಾಮೂಲಿ ದರಕ್ಕಿಂತ ಹೆಚ್ಚು ಪ್ರವೇಶ ದರ ಈ ಪ್ರದರ್ಶನಗಳಿಗೆ ಇರುತ್ತದೆ.

ಇಂತಹ ದಿನಗಳಲ್ಲಿ ಅತಿಥಿಗಳನ್ನು ಆಹ್ವಾನಿಸಿ, ಮಕ್ಕಳ ಚಿತ್ರವನ್ನು ಪ್ರದರ್ಶಿಸಿ ಕಾರ್ಯಕ್ರಮ ನಡೆಸುವ ಮಾತು ಕಡಿಮೆ ಏನಲ್ಲ.

ಮುಂದಿನ ವಾರ ತೆರೆಗೆ ಬರಲಿರುವ ಈ ಚಿತ್ರದ ಮೂಲಕ ರಾಜ್ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ರಾಜ್ ಸೋದರ ವರದರಾಜು ಅವರ ಮೊಮ್ಮಗ ಪೃಥ್ವಿರಾಜ್ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದು, ಈ ಚಿತ್ರವನ್ನು ಕುಮಾರ್ ಮಹೇಶ್ ನಿರ್ದೇಶಿಸಿದ್ದಾರೆ. ನಿರ್ಮಾಪಕರು ದೊಡ್ಡಹುಲ್ಲೂರು ರಾಜಗೋಪಾಲ್. ಜೊತೆಗೆ ವಿಜಯಕುಮಾರ್ ಇದ್ದಾರೆ.

ಕನ್ನಡದಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ರಾಜ್ಯ ಸರ್ಕಾರ ಅವುಗಳಿಗೆ ವಿಶೇಷ ಉತ್ತೇಜನ ನೀಡಲು ಆರಂಭಿಸಿದ ಮೇಲೆ ಕೆಲವರು ಅತ್ತ ಗಮನ ಹರಿಸಿದ್ದುಂಟು. ಹಾಗಂತ ಅದಕ್ಕೂ ಮೊದಲು ಮಕ್ಕಳ ಚಿತ್ರ ತಯಾರಾಗಿಲ್ಲ ಎಂದೇನಿಲ್ಲ. ಹಾಗೆ ನೋಡಿದರೆ ಕನ್ನಡದಲ್ಲಿ ಸೆಟ್ಟೇರಿದ ಮೊದಲ ಮಾತಿನ ಚಿತ್ರ ‘ಭಕ್ತ ಧುವ’. ಮೊದಲು ತೆರೆಕಂಡದ್ದು ‘ಸತಿ ಸುಲೋಚನಾ’ ಕನ್ನಡದ ಮೊದಲ ಎರಡು ಚಿತ್ರಗಳಲ್ಲಿ ಒಂದು ಮಕ್ಕಳನ್ನು ಕೇಂದ್ರೀಕರಿಸಿದರೆ, ಇನ್ನೊಂದರ ಹೆಸರೇ ಹೇಳುವಂತೆ ಮಹಿಳೆಗೆ ಸಂಬಂಧಿಸಿದ್ದು.

ಹಲವು ಪುರಾಣ ಕಥಾಚಿತ್ರಗಳು ಮಕ್ಕಳಿಗೆ ಸಂಬಂಧಿಸಿದಂತೆ ತಯಾರಾಗಿವೆ. 1937ರಲ್ಲಿ ತಯಾರಾದ ‘ಚಿರಂಜೀವಿ’ ಭಕ್ತ ಮಾರ್ಕಾಡೇಯನ ಕಥೆ, ಉತ್ತರ ಕರ್ನಾಟಕದವರು ತಯಾರಿಸಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಯೂ ಅದರದ್ದಾಗಿತ್ತು. ಪ್ರಹ್ಲಾದನ ಕಥೆಯಾದರೋ ಮೂರು ಬಾರಿ ಕನ್ನಡದಲ್ಲಿ ತಯಾರಾಗಿತ್ತು. ಮೊದಲನೆಯದು 1942ರಲ್ಲಿ. ‘ಪ್ರಹ್ಲಾದ’ ಚಿತ್ರವನ್ನು ಕೆ. ಸುಬ್ರಹ್ಮಣ್ಯಂ ನಿರ್ದೇಶಿಸಿದ್ದರು. ಕುಮಾರಿ ಚಂದ್ರಮ ಅದರಲ್ಲಿ ಪ್ರಹ್ಲಾದ ಪಾತ್ರ, ವಿಶೇಷ ಎಂದರೆ, ಪ್ರಹ್ಲಾದ ಗುರುಗಳ ಬಳಿ ಕಲಿಯುವ ಸಂದರ್ಭದಲ್ಲಿ ಅವರ ಸಹಪಾಠಿಗಳಾಗಿ, ಮಾ.ಮುತ್ತುರಾಜು ಮತ್ತು ಮಾ.ವರದರಾಜು ನಟಿಸಿದ್ದು, ಮುಂದೆ ರಾಜಕುಮಾರ್ ಆಗಿ ಹೆಸರಾದ ಮುತ್ತುರಾಜು ಅವರು ಬಾಲನಟರಾಗಿ, ತಮ್ಮನೂ ಸೇರಿದಂತೆ ಅಭಿನಯಿಸಿದ ಏಕೈಕ ಚಿತ್ರವಿದು.

ಮುಂದೆ ಸ್ವತಃ ರಾಜಕುಮಾರ್ ತಮ್ಮದೇ ಸಂಸ್ಥೆಯಿಂದ ‘ಭಕ್ತ ಪ್ರಹ್ಲಾದ’ ಚಿತ್ರವನ್ನು ನಿರ್ಮಿಸಿದರು. 1983ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಹಿರಣ್ಯ ಕಶಿಪುವಾಗಿ ರಾಜಕುಮಾರ್, ಪ್ರಹ್ಲಾದನಾಗಿ ಪುನೀತ್ ರಾಜಕುಮಾರ್, ಮಾ. ಲೋಹಿತ್ ಹೆಸರಲ್ಲಿ ನಟಿಸಿದ್ದರು. ಅಪ್ಪ-ಮಗ ನಟಿಸಿದ ಇನ್ನೊಂದು ಚಿತ್ರ 1958ರಲ್ಲಿ ತಯಾರಾಯಿತು. ಸುಬ್ಬಯ್ಯ ನಾಯ್ಡು ತಮ್ಮ ಸಂಸ್ಥೆಯ ಮೂಲಕ ನಿರ್ಮಿಸಿ, ನಿರ್ದೇಶಿಸಿ ನಟಿಸಿದ ಆ ಚಿತ್ರದಲ್ಲಿ ಅವರ ಮಗ ಲೋಕೇಶ್ ಪ್ರಹ್ಲಾದನಾಗಿ ನಟಿಸಿದ್ದರು.

ಪುರಾಣ ಕಥೆಗಳು ಮಾತ್ರವಲ್ಲ, ಸಾಮಾಜಿಕ ಕಥಾನಕಗಳ ಮಕ್ಕಳ ಚಿತ್ರಗಳೂ ತಯಾರಾಗಿವೆ. ‘ನಾಗರಹೊಳೆ’, ‘ಪುಟಾಣಿ ಏಜಂಟ್ 123, ‘ಪ್ರಚಂಡ ಪುಟಾಣಿಗಳು’, ‘ದೊಂಬರ ಕೃಷ್ಣ’, ‘ಚಿನ್ನಾರಿ ಮುತ್ತ’, ‘ಕೊಟ್ರೇಶಿ ಕನಸು’ ಹೀಗೆ ಹಲವು ಚಿತ್ರಗಳು ಕಳೆದ ಶತಮಾನದಲ್ಲಿ ತಯಾರಾದವು ಮಾತ್ರವಲ್ಲ, ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆಯ ಗಳಿಕೆಯಲ್ಲಿ ಗೆಲುವನ್ನೂ ಕಂಡವು. ಆದರೆ ಅಂತಹ ಗೆಲುವು, ಮಾರುಕಟ್ಟೆಗೆ ಆಕರ್ಷಣೆ ನಂತರ ಕಡಿಮೆ ಆಯಿತು ಎಂದೇ ಹೇಳಬೇಕು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಚಿತ್ರಗಳಿಗೆ ಸಾಕಷ್ಟು ಉತ್ತೇಜನಗಳಿವೆ. ಚಲನಚಿತ್ರ ರಾಷ್ಟ್ರಪ್ರಶಸ್ತಿ ಪರಂಪರೆ ಆರಂಭವಾದ 1953ರಿಂದಲೇ ಅತ್ಯುತ್ತಮ ಮಕ್ಕಳ ಚಿತ್ರಗಳಿಗೆ ಪ್ರಶಸ್ತಿ ನೀಡಲು ಆರಂಭಿಸಿತ್ತು.

‘ದಂಗೆಯೆದ್ದ ಮಕ್ಕಳು’, ‘ಜಂಬೂಸವಾರಿ’, ‘ಕೇರ್ ಆಫ್ ಫುಟ್‌ಪಾತ್’, ‘ಗುಬ್ಬಚ್ಚಿಗಳು’, ‘ಪುಟಾಣಿ ಪಾರ್ಟಿ’, ‘ಹೆಜ್ಜೆಗಳು’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು: ಕೊಡುಗೆ ರಾಮಣ್ಣ ರೈ ಚಿತ್ರಗಳು ಅತ್ಯುತ್ತಮ ಮಕ್ಕಳ ಚಿತ್ರಗಳಿಗೆ ಇರುವ ಸ್ವರ್ಣಕಮಲ ಪಡೆದಿದ್ದವು. ಇತರ ಕೆಲವು ಚಿತ್ರಗಳು ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವು. ‘ತುತ್ತೂರಿ’, ‘ಅರಿವು’, ‘ಬೆಟ್ಟದ ಹೂವು’, ‘ಚಿನ್ನಾರಿ ಮುತ್ತ’, ‘ಕೊಟ್ರೇಶಿ ಕನಸು’, ‘ಕ್ರೌರ್ಯ’, ‘ಅಕ್ಷಿ’, ‘ಒಂದಲ್ಲಾ ಎರಡಲ್ಲಾ ಮುಂತಾದ ಚಿತ್ರಗಳು ಈ ಸಾಲಿಗೆ ಸೇರಿದವುಗಳು. ಇವುಗಳಲ್ಲಿ ಕೆಲವು ಚಿತ್ರಗಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪಾಲ್ಗೊಂಡು ಪ್ರಶಸ್ತಿ ಪಡೆದಿವೆ. ಕನ್ನಡದಲ್ಲಿ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರಲ್ಲಿ ಬಾಲನಟರೇ ಹೆಚ್ಚು. ಜಿ.ಎಸ್.ನಟರಾಜ್ (ಕಾಡು), ಅಜಿತ್‌ಕುಮಾರ್ (ಘಟಶ್ರಾದ್ಧ), ಪುನೀತ್ ರಾಜಕುಮಾರ್ (ಬೆಟ್ಟದ ಹೂವು), ವಿಜಯ ರಾಘವೇಂದ್ರ (ಕೊಟ್ರೇಶಿ ಕನಸು), ವಿಶ್ವಾಸ್ (ಕ್ರೌರ್ಯ), ಕೆ. ಮನೋಹರ(ರೈಲ್ವೇ ಚಿಲ್ಡನ್), ಪಿ.ವಿ.ರೋಹಿತ್ (ಒಂದಲ್ಲಾ ಎರಡಲ್ಲಾ) ಈ ಗೌರವಕ್ಕೆ ಪಾತ್ರರಾದವರು.

ರಾಷ್ಟ್ರಮಟ್ಟದಲ್ಲಿ ಮಕ್ಕಳ ಚಿತ್ರಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಖಾತೆಯ ಅಧೀನದಲ್ಲಿ ಮಕ್ಕಳ ಚಿತ್ರಸಮಾಜವನ್ನು ಸ್ಥಾಪಿಸಿದೆ. ಅದು ಮಕ್ಕಳ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಎರಡು ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ ನಡೆಸುತ್ತಿತ್ತು. 1985ರಲ್ಲಿ, ಚಿತ್ರೋತ್ಸವದ ಎರಡನೇ ಆವೃತ್ತಿ ಬೆಂಗಳೂರಿನಲ್ಲಿ ನಡೆದಿತ್ತು. ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಚೌಡಯ್ಯ ಸ್ಮಾರಕ ಭವನದಲ್ಲಿ ಚಿತ್ರೋತ್ಸವವನ್ನು ಉದ್ಘಾಟಿಸಿದ್ದೇ ಅಲ್ಲದೆ, ಅಲ್ಲೇ ಮುಂದಿದ್ದ ಸ್ಯಾಂಕಿ ಕೆರೆಯ ದಡದಲ್ಲಿ ಮಕ್ಕಳ ಚಲನಚಿತ್ರ ಸಂಕೀರ್ಣಕ್ಕೆ ಅಡಿಗಲ್ಲೂ ಹಾಕಿದ್ದರು. ಏಷ್ಯಾದಲ್ಲೇ ಅತಿದೊಡ್ಡ ಮಕ್ಕಳ ಚಿತ್ರ ಸಮುಚ್ಚಯ ಅದಾಗಬೇಕಿತ್ತು. ಅಲ್ಲಿ ಮಕ್ಕಳ ಸಿನಿಮಾ ನಿರ್ಮಾಣ, ಪ್ರದರ್ಶನ ಮಾತ್ರವಲ್ಲದೆ ಮಕ್ಕಳ ಮನೋವಿಕಾಸ, ಮನರಂಜನೆಗೆ ಬೇಕಾದ ಪೂರಕ ವಾತಾವರಣ ಕಲ್ಪಿಸುವ ಯೋಜನೆ ಅದಾಗಿತ್ತು. ಅಲ್ಲಿರುವ ಯಾವುದೇ ಮರಗಳನ್ನು ಕಡಿಯದೆ ಸಂಕೀರ್ಣ ನಿರ್ಮಿಸುವ ಯೋಜನೆ ಅದಾಗಿತ್ತು.

ಆದರೆ ಅದಕ್ಕೆ ಸ್ಥಳೀಯ ಪರಿಸರವಾದಿಗಳ ವಿರೋಧ ಎದುರಾಯಿತು. ಪ್ರತಿರೋಧದ ಕಾರಣ ಬೇರೆ ಕಡೆ ಜಾಗ ನೀಡುವುದಾಗಿ ಆಶ್ವಾಸನೆ ಇತ್ತಾದರೂ, ಹತ್ತು ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಆ ಯೋಜನೆಯನ್ನು ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಸುಲಭವಾಗಿ ಸೆಳೆದುಕೊಂಡರು. ಇನ್ನೂ ಆ ಯೋಜನೆ ಪೂರ್ಣವಾಗಿಲ್ಲ. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದ ಎರಡು ಮೂರು ಆವೃತ್ತಿಗಳು ನಡೆದಿಲ್ಲ. ಈಗ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧೀನದಲ್ಲಿರುವ ಚಲನಚಿತ್ರ ಸಂಬಂಧಿತ ವಿಭಾಗಗಳು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ತೆಕ್ಕೆಗೆ ಬಿದ್ದಿವೆ. ಮಕ್ಕಳ ಚಲನಚಿತ್ರಗಳ ಕುರಿತ ಆಸಕ್ತಿ ಇರುವ ಮಂದಿ ಅಲ್ಲಿ ಇದ್ದರೆ, ಬಹುಶಃ ಅಲ್ಲೂ ಚಟುವಟಿಕೆಗಳು ಪ್ರಾರಂಭವಾಗಬಹುದು. ಇದು ನಷ್ಟದ ಬಾಬತ್ತು ಎನ್ನುವ ಮಂದಿ ಬಂದರೆ ಕಷ್ಟ.

ಮಕ್ಕಳ ಚಿತ್ರಗಳನ್ನು ಉತ್ತೇಜಿಸುವುದರಲ್ಲಿ ರಾಜ್ಯ ಸರ್ಕಾರವೂ ಹಿಂದೆ ಬಿದ್ದಿಲ್ಲ. ಹೊಸ ಸಹಸ್ರಮಾನದಲ್ಲಿ ಮಕ್ಕಳ ಚಿತ್ರಗಳಿಗೆ ವಿಶೇಷ ಸಹಾಯಧನ ನೀಡಲು ಆರಂಭಿಸಿದೆ. ಮೊದಲು ಎರಡು ಚಿತ್ರಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು ಈಗ ನಾಲ್ಕು ಚಿತ್ರಗಳಿಗೆ ನಿಗದಿಪಡಿಸಿದ್ದು ತಲಾ 25 ಲಕ್ಷ ರೂ.ಗಳನ್ನು ಉತ್ತಮ ಗುಣಮಟ್ಟದ ಮಕ್ಕಳ ಚಿತ್ರಗಳಿಗೆ ನೀಡುತ್ತಿದೆ. ಆದರೆ ಮಕ್ಕಳ ಚಲನಚಿತ್ರಗಳು ಮಕ್ಕಳಿಗೆ ತಲುಪುವ ಕೆಲಸ ಆಗಬೇಕು. ಚಿತ್ರಮಂದಿರಗಳಲ್ಲಿ, ಒಟಿಟಿಯಲ್ಲಿ ಕನ್ನಡ ಚಿತ್ರಗಳನ್ನೇ ದೂರ ಮಾಡುತ್ತಿರುವ ಆರೋಪ ಇದೆ. ಇನ್ನು ಮಕ್ಕಳ ಚಿತ್ರಗಳನ್ನು ಕೊಂಡುಕೊಂಡು ಪ್ರದರ್ಶನ, ಪ್ರಸಾರ ಮಾಡುತ್ತಾರೆಯೇ? ಬಹುತೇಕ ಶಾಲೆಗಳಲ್ಲಿ ಡಿಜಿಟಲ್ ಪ್ರದರ್ಶನ ವ್ಯವಸ್ಥೆ ಇದೆ. ಆನ್‌ಲೈನ್ ತರಗತಿಗಳಿವೆ. ಸರ್ಕಾರ ಅಂತಹ ಜಾಗಗಳಿಂದ ಉತ್ತಮ ಗುಣಮಟ್ಟದ, ಮಕ್ಕಳ ಮನೋವಿಕಾಸ, ಜ್ಞಾನಾರ್ಜನೆಗೆ ಪೂರಕವಾಗುವ ಮಕ್ಕಳ ಚಲನಚಿತ್ರಗಳನ್ನು ಪ್ರಸಾರ ಮಾಡುವಂತೆ ನೋಡಿಕೊಳ್ಳಬಹುದು. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಮಂದಿರಗಳಲ್ಲಿ ಇಲ್ಲವೇ ಶಾಲೆಗಳ ಸಭಾಂಗಣಗಳಲ್ಲಿ ಪ್ರದರ್ಶನ ಮಾಡಲು ಅನುಮತಿ ನೀಡಬಹುದು. ಅವು ಗುಣಮಟ್ಟದ ಚಿತ್ರಗಳಾಗಿರಬೇಕು, ಸಹಾಯಧನ ಪಡೆಯಲು ಸಂತೆಗೆ ಮೂರು ಮೊಳ ಸುತ್ತಿದವುಗಳಾಗಿರಬಾರದು. ಹಿಂದೆ ಚಲನಚಿತ್ರ ಅಕಾಡೆಮಿ ಒಮ್ಮೆ ಮಕ್ಕಳ ಚಿತ್ರೋತ್ಸವ ಏರ್ಪಡಿಸಿತ್ತು. ಅದರ ಮೂಲಕ ಉತ್ತಮ ಮಕ್ಕಳ ಚಿತ್ರಗಳನ್ನು ಮಕ್ಕಳಿಗೆ ನೋಡುವ ಅವಕಾಶ ಸಿಕ್ಕಿತ್ತು. ಅಂತಹ ಕೆಲಸಗಳೂ ಆಗಬೇಕು.

ರಾಷ್ಟ್ರಮಟ್ಟದಲ್ಲಿ ಮಕ್ಕಳ ಚಿತ್ರಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಖಾತೆಯ ಅಧೀನದಲ್ಲಿ ಮಕ್ಕಳ ಚಿತ್ರ ಸಮಾಜವನ್ನು ಸ್ಥಾಪಿಸಿದೆ. ಅದು ಮಕ್ಕಳ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಎರಡು ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ ನಡೆಸುತ್ತಿತ್ತು. 1985ರಲ್ಲಿ, ಚಿತ್ರೋತ್ಸವದ ಎರಡನೇ ಆವೃತ್ತಿ ಬೆಂಗಳೂರಿನಲ್ಲಿ ನಡೆದಿತ್ತು. ಅಂದಿನ ಪ್ರಧಾನಮಂತ್ರಿ ರಾಜೀವ್‌ ಗಾಂಧಿ ಚೌಡಯ್ಯ ಸ್ಮಾರಕ ಭವನದಲ್ಲಿ ಚಿತ್ರೋತ್ಸವವನ್ನು ಉದ್ಘಾಟಿಸಿದ್ದೇ ಅಲ್ಲದೆ, ಅಲ್ಲೇ ಮುಂದಿದ್ದ ಸ್ಯಾಂಕಿ ಕೆರೆಯ ದಡದಲ್ಲಿ ಮಕ್ಕಳ ಚಲನಚಿತ್ರ ಸಂಕೀರ್ಣಕ್ಕೆ ಅಡಿಗಲ್ಲೂ ಹಾಕಿದ್ದರು. ಏಷ್ಯಾದಲ್ಲೇ ಅತಿದೊಡ್ಡ ಮಕ್ಕಳ ಚಿತ್ರ ಸಮುಚ್ಚಯ ಅದಾಗಬೇಕಿತ್ತು. ಅಲ್ಲಿ ಮಕ್ಕಳ ಸಿನಿಮಾ ನಿರ್ಮಾಣ, ಪ್ರದರ್ಶನ ಮಾತ್ರವಲ್ಲದೆ ಮಕ್ಕಳ ಮನೋವಿಕಾಸ, ಮನರಂಜನೆಗೆ ಬೇಕಾದ ಪೂರಕ ವಾತಾವರಣ ಕಲ್ಪಿಸುವ ಯೋಜನೆ ಅದಾಗಿತ್ತು.

Tags: