Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ಬ್ಯಾಂಡ್ ಉತ್ಪನ್ನಗಳ ವಿಶೇಷ ಸ್ತಬ್ಧಚಿತ್ರ

ಚಿರಂಜೀವಿ ಸಿ.ಹುಲ್ಲಹಳ್ಳಿ

ಜಂಬೂಸವಾರಿಯಲ್ಲಿ ಮೈಸೂರು ಜಿಲ್ಲೆಯ 8 ಸ್ತಬ್ಧಚಿತ್ರಗಳು

ಮೈಸೂರು: ದಸರಾ ಜಂಬೂಸವಾರಿಯ ಸೊಬಗು ನೋಡುಗರ ಕಣ್ಮನ ಸೆಳೆದರೆ, ಅದನ್ನು ಮತ್ತಷ್ಟು ವೈಭವಪೂರ್ಣಗೊಳಿಸುವುದು ಸ್ತಬ್ಧಚಿತ್ರಗಳ ಮೆರವಣಿಗೆ, ನಾಡಿನ ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ ಇತ್ಯಾದಿ ಕ್ಷೇತ್ರಗಳ ಬಗ್ಗೆ ಮಾಹಿತಿಗಳನ್ನು ಒಳಗೊಂಡ ಸಂದೇಶವನ್ನು ಸಾರುತ್ತಾ ಸಾಗುವ ಈ ಸ್ತಬ್ಧ ಚಿತ್ರಗಳಲ್ಲಿ ಕಾಣುವ ಕಲಾವಿದರ ಕೈಚಳಕ ಆಶ್ಚರ್ಯ ಮೂಡಿಸುತ್ತವೆ.

ಸರ್ಕಾರಿ ಸ್ವಾಮ್ಯದ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸೋಪು, ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳ ವಿವರಣೆ ಒದಗಿಸುವ ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ದಸರಾ ಸ್ತಬ್ಧಚಿತ್ರ ಉಪ ಸಮಿತಿಯ ಸನ್ನದ್ಧವಾಗಿದೆ.

ದೇಶದಲ್ಲಿ ಜನಮನ್ನಣೆ ಪಡೆದಿರುವ ಮೈಸೂರು ಸಿಲ್ಕ್ ಸೀರೆಗಳ ಇತಿಹಾಸ, ಆಹಾರ ಪರಿಷ್ಕರಣೆಯಲ್ಲಿ ವಿಜ್ಞಾನ ಸಂಶೋಧನೆಗಳಲ್ಲಿ ತನ್ನದೇ ಮಹತ್ವದ ಕೊಡುಗೆ ನೀಡಿರುವ ಸಿಎಫ್‌ ಟಿಆರ್‌ಐ, ರೈಲ್ವೆ ಇಲಾಖೆ, ದೇಶದ ಮಹೋನ್ನತ ಸಂಸ್ಥೆ ಭಾರತೀಯ ನೋಟು ಮುದ್ರಣ ಕೇಂದ್ರವನ್ನು ಪ್ರತಿಬಿಂಬಿಸುವುದೂ ಈ ಬಾರಿಯ ಸ್ತಬ್ಧಚಿತ್ರಗಳ ವಿಶೇಷತೆಯಾಗಿದೆ.

ದೇಶದ ಕಲೆ, ವಾಸ್ತು ಶಿಲ್ಪ, ಜಾನಪದ ಕಲೆ ಸೇರಿದಂತೆ ಸರ್ಕಾರದ ಸಾಧನೆ, ಕರ್ನಾಟಕ ಏಕೀಕರಣದ ಚರಿತ್ರೆ ಮತ್ತು ಹೋರಾಟವನ್ನು ಬಿಂಬಿಸುವ 42 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಮೈಸೂರಿನಿಂದ 8 ಇಲಾಖೆಗಳ ಸ್ತಬ್ದಚಿತ್ರಗಳಿರಲಿವೆ.

ಪ್ರವಾಸಿಗರಿಗೆ ಸುರಕ್ಷತೆಯ ಜೊತೆಗೆ ಮನೋಲ್ಲಾಸ ನೀಡುವ ರಾಜ್ಯದ 15 ರಮಣೀಯ ಪ್ರವಾಸಿ ಸ್ಥಳಗಳಲ್ಲಿ ಜಂಗಲ್ ಲಾಕ್ಟಿಸ್ ಇದ್ದು, ಇವುಗಳ ಮಾಹಿತಿಯನ್ನೂ ಒಳಗೊಂಡ ಸ್ತಬ್ಧಚಿತ್ರವೂ ಇರಲಿದೆ.

ಸಂವಿಧಾನದ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಭ್ರಾತೃತ್ವ ಸಾರುವ ಸ್ತಬ್ಧಚಿತ್ರಗಳು, ಅನುಭವ ಮಂಟಪ, ಶರಣರ ಸಾಮಾಜಿಕ ಕ್ರಾಂತಿ ದಾಸರ ಭಕ್ತಿ ಪರಂಪರೆ, ಕಾರ್ಮಿಕರ ಹಕ್ಕುಗಳು ಮತ್ತು ಸುರಕ್ಷಿತೆಯನ್ನು ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳು ಪ್ರತಿನಿಧಿಸಲಿವೆ.

ಕರ್ನಾಟಕ ಏಕೀಕರಣ ಚಳವಳಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೋರಾಟದ ಚರಿತ್ರೆಯನ್ನು ಸಾರುವ ನಿಟ್ಟಿನಲ್ಲಿ ಪ್ರತಿ ಸ್ತಬ್ಧಚಿತ್ರದಲ್ಲಿ ಸುವರ್ಣ ಕರ್ನಾಟಕ ಲೋಗೊ ಮತ್ತು ಒಂದೊಂದು ಸ್ತಬ್ದ ಚಿತ್ರದಲ್ಲಿಯೂ ಏಕೀಕರಣದ ಪ್ರಮುಖ ಹೋರಾಟಗಾರರ ಭಾವಚಿತ್ರ ಇರಲಿದೆ ಎಂದು ದಸರಾ ಸ್ತಬ್ಧಚಿತ್ರ ಉಪ ಸಮಿತಿಯ ವಿಶ್ವಾಸ.

ಎನ್‌ಡಿಆರ್‌ಎಫ್‌ ಸಂಸ್ಥೆಯ ಸ್ತಬ್ಧಚಿತ್ರಕ್ಕೆ ಅನುಮತಿಗೆ ಪ್ರಯತ್ನಿಸಿದೆವು. ಆದರೆ, ಸಂಸ್ಥೆಯ ನಿಯಮಗಳನ್ನು ಸರಿದೂಗಿಸಲು ಕಾಲಾವಕಾಶ ಸಾಧ್ಯವಾಗದ ಕಾರಣ ನಿರಾಕರಣೆ ಆಯಿತು ಎಂದು ಸ್ತಬ್ದಚಿತ್ರ ಪ್ರದರ್ಶನ ಉಪ ಸಮಿತಿಯ ವಿಶೇಷಾಧಿಕಾರಿ ಕೆ.ವಿ.ಪ್ರಭುಸ್ವಾಮಿ ಹೇಳಿದರು.

ಮೈಸೂರಿನಲ್ಲಿನ ಅನೇಕ ಸಂಸ್ಥೆಗಳ ಇತಿಹಾಸ, ಕೊಡುಗೆ, ಕಾರಣಕರ್ತರನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಈ ಬಾರಿ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. 31 ಜಿಲ್ಲೆಗಳಿಂದ ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಇದರ ಜೊತೆಗೆ ಮೈಸೂರು ಜಿಲ್ಲೆಯ 8 ಹಾಗೂ ಕಾರ್ಮಿಕ ಇಲಾಖೆ, ಸಾಮಾಜಿಕ ನ್ಯಾಯ ಸಮಿತಿಯಿಂದ ಸ್ತಬ್ದಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸೆ.27ರಂದು ಸ್ತಬ್ಧಚಿತ್ರಗಳನ್ನು ಅಧಿಕೃತವಾಗಿ ನಿಗದಿಪಡಿಸಲಾಗುವುದು.
• ಕೆ.ವಿ. ಪ್ರಭುಸ್ವಾಮಿ, ವಿಶೇಷಾಧಿಕಾರಿ, ದಸರಾ ಸ್ತಬ್ಧಚಿತ್ರ ಉಪ ಸಮಿತಿ.

Tags: