Mysore
30
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

‘ಭೈರಾದೇವಿ’ ಗೆಲ್ಲದಿದ್ದರೆ ಚಿತ್ರರಂಗದಿಂದ ದೂರ; ರಾಧಿಕಾ ಘೋಷಣೆ

ಅಕ್ಟೋಬರ್‍ 03ರಂದು ಬಿಡುಗಡೆಯಾಗುತ್ತಿರುವ ತಮ್ಮ ನಿರ್ಮಾಣದ ಮತ್ತು ನಟನೆಯ ‘ಭೈರಾದೇವಿ’ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ ಚಿತ್ರರಂಗದಿಂದ ದೂರ ಸರಿಯುವುದಾಗಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

‘ಭೈರಾದೇವಿ’ ಚಿತ್ರದ ಟ್ರೇಲರ್‍ ಶನಿವಾರ ರಾತ್ರಿ ಮಂತ್ರಿ ಮಾಲ್‍ನಲ್ಲಿ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಹಲವು ವಿಷಯಗಳನ್ನು ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, ಚಿತ್ರ ಗೆಲ್ಲದಿದ್ದರೆ ಇದೇ ತಮ್ಮ ಕೊನೆಯ ಚಿತ್ರವಾಗಲಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ರಾ‍ಧಿಕಾ, ‘ನಿರ್ದೇಶಕ ಶ್ರೀಜೈ ಕಥ ಹೇಳಿದಾಗಲೇ, ಈ ಸಿನಿಮಾ ಗೆದ್ದರೆ, ಪ್ರೇಕ್ಷಕರಿಗೆ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೇನೆ ಎಂದು ಅವರಿಗೆ ಹೇಳಿದ್ದೆ. ಇದು ಇಷ್ಟವಾದರೆ, ಸಿನಿಪಯಣ ಮುಂದುವರೆಸುತ್ತೇನೆ. ಇಲ್ಲವಾದರೆ, ನಾನು ನಟನೆ ಮಾಡಿದ ಕೊನೆಯ ಸಿನಿಮಾ ಇದಾಗಿರುತ್ತದೆ’ ಎಂದು ಘೋಷಿಸಿದರು.

‘ಭೈರಾದೇವಿ’ ಚಿತ್ರ ಮಾಡುವಾಗ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರಂತೆ. ‘ಈ ಚಿತ್ರಕ್ಕಾಗಿ ಹಲವು ತೊಂದರೆಗಳನ್ನು ಅನುಭವಿಸಿದ್ದೇನೆ. ಬರೀ ನಾನಷ್ಟೇ ಅಲ್ಲ, ಈ ಹಾಡಿನ ಹಿಂದೆ ಹಲವರ ಶ್ರಮ ಇದೆ. ಅಘೋರಿ ಗೆಟಪ್‍ ಹಾಕಿಕೊಂಡು ಹೆಣ್ಮಕ್ಕಳು ಅಳೋರು. ಮೈ ಉರಿಯುತ್ತಿದೆ ಎಂದು ಹೇಳುತ್ತಿದ್ದರು. ತುಂಬಾ ಸಮಸ್ಯೆ ಎದುರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಸಿನಿಮಾ ನೋಡಿ ಪ್ರೋತ್ಸಾಹಿಸಿ, ಆಶೀರ್ವಾದ ಮಾಡಿದರೆ, ಇನ್ನಷ್ಟು ಚಿತ್ರಗಳನ್ನು ಮಾಡಬಹುದು’ ಎಂದರು.

ಹಾಡಿನ ಸಮಯದಲ್ಲಿ ತಾವು ಎದುರಿಸಿದ ಸಮಸ್ಯೆ ಕುರಿತು ಮಾತನಾಡಿದ ರಾಧಿಕಾ, ‘ಕಾಳಿ ಹಾಡಿನ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನನಗೆ ಬಹಳ ಸುಸ್ತಾಗುತ್ತಿತ್ತು. ಮೊದಲ ದಿನ ಚಿತ್ರೀಕರಣ ಮಾಡುವಾಗ ನಡೆಯೋಕೆ, ಎದ್ದು ನಿಲ್ಲೋಕೂ ಆಗುತ್ತಿರಲಿಲ್ಲ. ಆ ಗೆಟಪ್‍ ಹಾಕಿದ ತಕ್ಷಣ ತಲೆ ಎತ್ತೋಕೂ ಆಗುತ್ತಿರಲಿಲ್ಲ. ಕೊನೆಗೆ ನಮ್ಮ ತಂಡದವರು ಅಲ್ಲೇ ಇದ್ದ ಒಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆದರು. ಆ ನಂತರ ಚಿತ್ರೀಕರಣ ಶುರು ಮಾಡಿದೆವು’ ಎಂದರು.

Tags:
error: Content is protected !!