ಎಚ್. ಡಿ. ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಗದ್ದಿಗೆ-ಮಾದಾಪುರ ಸರ್ಕಲ್‌ನಲ್ಲಿ ಸರಿಯಾದ ಮಾರ್ಗಸೂಚಿ ಹಾಗೂ ನಾಮಫಲಕಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮಾದಾಪುರದ ಈ ವೃತ್ತ ಎಚ್. ಡಿ. ಕೋಟೆ, ಮೈಸೂರು ಹಾಗೂ ಗದ್ದಿಗೆಗೆ ಸಂಪರ್ಕ ಕಲ್ಪಿಸುವ ವೃತ್ತವಾಗಿದ್ದು, ಜನರು ಎಚ್. ಡಿ. ಕೋಟೆಯಿಂದ ಮೈಸೂರು, ಹುಣಸೂರು, ಗದ್ದಿಗೆ ಹಾಗೂ ಹಾಸನಕ್ಕೂ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಇಂತಹ ವೃತ್ತದಲ್ಲಿ ಯಾವುದೇ ನಾಮಫಲಕಗಳಾಗಲಿ, ಸೂಚನಾಫಲಕಗಳಾಗಲಿ ಇಲ್ಲದಿರುವುದು ಪ್ರಯಾಣಿಕರಿಗೆ ಗೊಂದಲವನ್ನುಂಟು ಮಾಡುತ್ತಿದೆ. ಅಲ್ಲದೆ ಈ ವೃತ್ತ ಮೈಸೂರು-ಮಾನಂದವಾಡಿ ಮುಖ್ಯರಸ್ತೆಗೆ ಸಂಪರ್ಕ ಹೊಂದಿದ್ದು, ಸೂಚನಾಫಲಕಗಳಿಲ್ಲದಿರುವುದರಿಂದ ಇಲ್ಲಿ ಆಗಾಗ್ಗೆ ಅಪಘಾತಗಳಾಗುತ್ತಿವೆ. ಇನ್ನು ಈ ವೃತ್ತಕ್ಕೆ ಸರಿಯಾದ ವಿದ್ಯುತ್ ದೀಪಗಳನ್ನು ಅಳವಡಿಸದಿರುವುದರಿಂದ ರಾತ್ರಿಯ ವೇಳೆ ಈ ವೃತ್ತದ ಬಳಿ ಸಂಚರಿಸಲು ಕಷ್ಟವಾಗುತ್ತಿದೆ. ಅಲ್ಲದೆ ಈ ವೃತ್ತದ ಸಮೀಪದಲ್ಲಿಯೇ ಮದ್ಯದಂಗಡಿಯೂ ಇದ್ದು, ಕುಡಿದು ವಾಹನ ಚಲಾಯಿಸುವವರು ಏಕಾಏಕಿ ಮುಖ್ಯ ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತಗಳಾಗುತ್ತಿವೆ. ಆದ್ದರಿಂದ ಸಂಬಂಧಪಟ್ಟವರು ಈ ಸರ್ಕಲ್‌ಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಜತೆಗೆ ಸೂಚನಾಫಲಕಗಳನ್ನೂ ಅಳವಡಿಸಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ