Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಹಾಲು ಮಾರುವ ಕಾಲೇಜು ಮೇಷ್ಟ್ರು

ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮಂಡ್ಯದ ಧರ್ಮೇಶ್

ಬಿ.ಟಿ.ಮೋಹನ್ ಕುಮಾರ್

ನಾಲ್ಕು ಪದವಿಗಳು ಮೂರು ಚಿನ್ನದ ಪದಕಗಳನ್ನು ಪಡೆದು ಖಾಸಗಿ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಮನೆ ಮನೆಗೆ ಹಾಲು ಹಾಕುವ ಕಾಯಕವನ್ನು ಮರೆಯದೆ ಮೊದಲು ತಾವೊಬ್ಬ ಕೃಷಿಕ ಎಂಬುದನ್ನು ಸಾಬೀತು ಮಾಡಿದ್ದಾರೆ ಎಚ್.ಪಿ. ಧರ್ಮೇಶ್.

ಮಂಡ್ಯದ ಸ್ವರ್ಣಸಂದ್ರ ಬಡಾವಣೆಯ ಎಇಟಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯನಿರ್ವಹಿಸುತ್ತಿರುವ ಮಂಡ್ಯದ ಹೊಸಹಳ್ಳಿ ಗ್ರಾಮದ ಪುಟ್ಟಸ್ವಾಮಿ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ ಎಚ್.ಪಿ.ಧರ್ಮೇಶ್ ಇಂದಿನ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಆದರ್ಶವಾಗಿದ್ದಾರೆ.

ಮೂಲತಃ ಕೃಷಿ ಕುಟುಂಬದವರಾಗಿದ್ದರೂ ಕೃಷಿ ಜತೆ ಜತೆಗೆ ಶ್ರದ್ಧೆಯಿಂದ ವ್ಯಾಸಂಗ ಮಾಡಿ ಬಿ.ಎ., ಬಿ.ಎಡ್., ಎಂ.ಎಡ್., ಕನ್ನಡ ಎಂ.ಎ., ಪದವಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ.

ನಿತ್ಯ ಸಚಿವ ಕೆ.ವಿ.ಶಂಕರಗೌಡರು ಸ್ಥಾಪಿಸಿರುವ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ಎಂ. ಎಡ್. ಪದವಿಯಲ್ಲಿ ಪ್ರಥಮ ರಾಂಕ್ ಗಳಿಸಿ ಮೂರು ಚಿನದ ಪದಕ ಹಾಗೂ ಎರಡು ನಗದು ಬಹುಮಾನಗಳನ್ನು ಪಡೆದಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ. ಇತಿಹಾಸದಲ್ಲಿ ರಾಜ್ಯಕ್ಕೇ 10ನೇ ಬ್ಯಾಂಕ್ ಹಾಗೂ ಕೆ-ಸೆಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಇವರ ಶೈಕ್ಷಣಿಕ ಜೀವನದ ಹೆಗ್ಗಳಿಕೆಯಾಗಿದೆ.

ಮಂಡ್ಯದ ಎಇಟಿ ಶಿಕ್ಷಣ ಮಹಾವಿದ್ಯಾಲಯ ದಲ್ಲಿ 2019ರಿಂದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುವ ವೇಳೆ ಆರ್ಥಿಕ ಸಬಲತೆಗಾಗಿ ಹೈನುಗಾರಿಕೆ ಪ್ರಾರಂಭ ಮಾಡಿ ದರು. ಅಂದಿನಿಂದ ಇಂದಿನವರೆಗೂ ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಯಿಂದ 8, ಸಂಜೆ 4.30ರಿಂದ 7 ಗಂಟೆಯವರೆಗೆ ಮನೆ ಮನೆಗಳಿಗೆ ಹಾಲು ಹಾಕುವ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. ಆ ಮೂಲಕ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.

ಹೈನುಗಾರಿಕೆ ಜತೆಗೆ ಭತ್ತ, ಕಬ್ಬು, ರಾಗಿ ಬೆಳೆ ಗಳನ್ನು ಬೆಳೆಯುವ ಮೂಲಕ ಕೃಷಿಕನಾಗಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಧರ್ಮೇಶ್, ನಾನೊಬ್ಬ ಉನ್ನತ ವ್ಯಾಸಂಗ ಮಾಡಿರುವವನು, ಇಂಥ ಕೆಲಸಗಳನ್ನು ನಾನು ಮಾಡಲಾರೆ ಎನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. 4 ಪದವಿ, ಚಿನ್ನದ ಪದಕಗಳು ಹಾಗೂ ಹಲವಾರು ಬಹುಮಾನ ಗಳನ್ನು ಪಡೆದಿದ್ದರೂ ಯಾವುದೇ ಮುಜುಗರ ವಿಲ್ಲದೆ ತಾವೇ ಮನೆ ಮನೆಗೆ ಹಾಲು ಹಾಕುವ ಮೂಲಕ ವಿಶಿಷ್ಟ ವ್ಯಕ್ತಿ ಅನಿಸಿದ್ದಾರೆ.

ಧರ್ಮೇಶ್ ಅವರು ಒಬ್ಬ ಆದರ್ಶ ಶಿಕ್ಷಕರಾಗಿದ್ದು, ಉತ್ತಮ ಜ್ಞಾನ ಭಂಡಾರ, ಗುಣ, ತಾಳ್ಮೆ, ಸಹಾನುಭೂತಿ, ಉತ್ಸಾಹ, ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳ ಕಲಿಕೆಯ ಹಾದಿಯನ್ನು ಬೆಳಗುವ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿನ ಪ್ರಾಮಾಣಿಕತೆ, ಜೀವನ ಕೌಶಲ, ನೈತಿಕತೆ, ಸೃಜನ ಶೀಲತೆ, ನಾವೀನ್ಯತೆ, ಸಮಗ್ರತೆ ಹಾಗೂ ಪರಿಶ್ರಮದಂತಹ ಮೌಲ್ಯಗಳು ದುಡಿ ಯುವ ಗುಣಗಳನ್ನು ವಿದ್ಯಾರ್ಥಿಗಳಿಗೂ ತುಂಬುತ್ತಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.
ಶಾರದಾ ರಮೇಶ್‌ ರಾಜು, ಅಧ್ಯಕ್ಷರು, ಎಇಟಿ ಶಿಕ್ಷಣ ಮಹಾವಿದ್ಯಾಲಯ.

ಕೃಷಿ ಕುಟುಂಬದಿಂದ ಬಂದ ನಾನು ಉನ್ನತ ವ್ಯಾಸಂಗ ಮಾಡಿ ಉಪನ್ಯಾಸಕನಾಗಿದ್ದರೂ ಚಿಕ್ಕ ವಯಸ್ಸಿನಿಂದ ರೂಢಿಸಿಕೊಂಡು ಬಂದ ಹೈನುಗಾರಿಕೆಯನ್ನು ಬಿಡಲು ಮನಸ್ಸು ಒಪ್ಪುತ್ತಿಲ್ಲ. ವೃತ್ತಿಯ ಜತೆಗೆ ಹೈನುಗಾರಿಕೆಯನ್ನೂ ಮಾಡುತ್ತಿರು ವುದು ನನ್ನ ಆರ್ಥಿಕ ಸಬಲತೆಗೆ ಸಹಕಾರಿಯಾಗಿದೆ.
ಎಚ್.ಪಿ.ಧರ್ಮೇಶ್

ಸಂಪದ್ಭರಿತವಾಗಿ ಪಾಠ ಬೋಧನೆ ಯನ್ನು ಮಾಡುತ್ತಾ ಜ್ಞಾನಕೋಶಗಳಿಂದ ವಿಷಯಗಳನ್ನು ಹೆಕ್ಕಿ, ಜೀವನ ಅನುಭವ ಗಳನ್ನು ಹಾಗೂ ದೈನಿಕ ವಿನೋದಗಳನ್ನು ಸೇರಿಸಿ ಪಾಠ ಬೋಧನೆ ಮಾಡುತ್ತಾರೆ. ಭಾಷಾಜ್ಞಾನದ ಪರಿಣತಿ, ವಿಜ್ಞಾನ, ತಂತ್ರಜ್ಞಾನ, ತತ್ವಶಾಸ್ತ್ರಗಳ ವಿಷಯಗಳ ಕುರಿತು ಮೌಲ್ಯಯುತ ಬೋಧನೆ ಮಾಡುತ್ತ ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಉತ್ಸಾಹವನ್ನು ತುಂಬಿ ಮಾರ್ಗದರ್ಶನ ನೀಡುತ್ತಾರೆ.
– ಎನ್.ಆದಿತ್ಯ ಭಾರದ್ವಾಜ್, ವಿದ್ಯಾರ್ಥಿ

Tags: