Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಾಮುಂಡಿ ಕ್ರೀಡಾಂಗಣಕ್ಕೆ ಟ್ರಾನ್ಸ್‌ಪರೆಂಟ್‌ ಶೀಟ್‌!

ಮೈಸೂರು: ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದ ಚಾವಣಿಗೆ ಪಾರದರ್ಶಕ ಫೈಬರ್ ಶೀಟ್‌ಗಳನ್ನು ಅಳವಡಿಸಿ ಗ್ಲಾಸ್‌ಹೌಸ್ ಮಾದರಿಯ ಟ್ರಾನ್ಸ್‌ಪರೆಂಟ್ ಒಳಾಂಗಣ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಗುತ್ತಿದೆ.

ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಒಳಾಂಗಣ ಕ್ರೀಡೆಗಳು ವಿದ್ಯುತ್ ಬೆಳಕಿನ ಬದಲಿಗೆ ಸೂರ್ಯನ ಬೆಳಕಿನಲ್ಲಿಯೇ ನಡೆಯಲಿವೆ. ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದ ಚಾವಣಿ ಕಬ್ಬಿಣದ ತಗಡುಗಳಿಂದ ಮಾಡಿದ ಜಿಂಕ್ ಶೀಟ್‌ಗಳಿಂದ ಆವೃತವಾಗಿತ್ತು. ಮೋಡ ಮುಸುಕಿದಾಗ ಮತ್ತು ಮಳೆ ಬಂದಾಗ ಸ್ವಲ್ಪ ಏರುಪೇರಾಗುತ್ತಿತ್ತು. ಹೀಗಾಗಿ ಈ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಬೇಕಾದರೆ ದಿನದ ೨೪ ಗಂಟೆಗಳೂ ವಿದ್ಯುತ್ ದೀಪ ಬಳಕೆ ಮಾಡಲಾಗುತ್ತಿತ್ತು.

ಇದೀಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ೫ ಕೋಟಿ ರೂ. ವೆಚ್ಚದಲ್ಲಿ ಪಾರದರ್ಶಕ ಫೈಬರ್ ಶೀಟ್ ಗಳನ್ನು ಚಾವಣಿಗೆ ಅಳವಡಿಸುತ್ತಿದೆ. ಈಗಾಗಲೇ ಶೇ. ೯೫ರಷ್ಟು ಕೆಲಸ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮುಗಿದ ಕೂಡಲೇ ಕ್ರೀಡಾಪಟುಗಳ ಬಳಕೆಗೆ ಸಜ್ಜಾಗಲಿದೆ. ಒಟ್ಟಾರೆ ದಸರೆಯಲ್ಲಿ ಒಳಾಂಗಣ ಕ್ರೀಡಾಕೂಟವನ್ನು ಸೂರ್ಯನ ಬೆಳಕಿನಲ್ಲಿಯೇ ಆಯೋಜಿಸಲಾಗುತ್ತದೆ. ಇದರಿಂದ ಹಗಲಿನ ವೇಳೆ ವಿದ್ಯುತ್ ಬಳಕೆಗೆ ತಗಲುತ್ತಿದ್ದ ವೆಚ್ಚ ಮತ್ತಷ್ಟು ಕಡಿತಗೊಳ್ಳಲಿದೆ.

ಜರ್ಮನಿ ಮೂಲದ ಶೀಟ್: ಅಂತರ ರಾಷ್ಟ್ರೀಯ ಗುಣಮಟ್ಟದ ಟೆನ್‌ಸೈಲ್ ಮೆಮ್ರನ್ ಎಂಬ ಪಾರದರ್ಶಕ -ಬರ್ ಶೀಟ್‌ಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾ ಗಿದೆ. ಇದರ ಮೂಲಕ ಶೇ. ೫೦ರಷ್ಟು ಸೂರ್ಯನ ಬೆಳಕು ಹಾದು ಹೋಗುತ್ತದೆ. ಅಲ್ಲದೆ, ಈ ಅತ್ಯಾಧುನಿಕ ಶೀಟ್‌ಗಳ ಬಳಕೆಯಿಂದ ಮಳೆ ಬಂದಾಗ ಶಬ್ದ ಉಂಟಾಗುವುದಿಲ್ಲ.

ಯಾವ್ಯಾವ ಕ್ರೀಡೆಗಳಿಗೆ ಬಳಕೆ?: ಈ ಕ್ರೀಡಾಂಗಣದಲ್ಲಿ ವಾಲಿಬಾಲ್, ಬಾಸ್ಕೆಟ್ ಬಾಲ್, ಕರಾಟೆ, ಭಾರ ಎತ್ತುವ ಸ್ಪರ್ಧೆ, ದೇಹ ದಾರ್ಢ್ಯ ಸ್ಪರ್ಧೆ, ಚದುರಂಗ, ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ, ಕೆಲವೊಮ್ಮೆ ಕ್ರೀಡೆಗೆ ಸಂಬಂಽಸಿದ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ವಿದ್ಯುತ್ ದೀಪದ ಬಳಕೆಗಾಗಿ ಡೀಸೆಲ್ ಇಂಧನ ದಿಂದ ಜನರೇಟರ್ ವಿದ್ಯುತ್ ಉಪಯೋಗಿಸಲಾಗುತ್ತದೆ. ಇದಕ್ಕೆ ಗಂಟೆಗೆ ೫೦ ಲೀ. ಡೀಸೆಲ್ ಬೇಕಾಗುತ್ತದೆ. ಪಾರದರ್ಶಕ ಶೀಟ್‌ಗಳ ಬಳಕೆ ಯಿಂದ ಹಗಲಿನ ವೇಳೆ ಈ ವೆಚ್ಚ ತಗ್ಗಲಿದೆ.

ಲೀಕೇಜ್‌ಗೆ ಕಡಿವಾಣ: ಒಳಾಂಗಣ ಕ್ರೀಡಾಂಗಣಕ್ಕೆ ಲಕ್ಷಾಂತರ ರೂ. ವ್ಯಯಿಸಿ ಮರದ ನೆಲಹಾಸು ಅಳವಡಿಸಲಾಗಿದೆ. ಹಾಲಿ ಜಿಂಕ್ ಶೀಟ್‌ಗಳಿಂದ ಮಳೆ ನೀರು ಸೋರಿಕೆಯಾಗಿ ಮರದ ಮೇಲೆ ಬೀಳುತ್ತಿತ್ತು. ಇದರಿಂದ ನೆಲಕ್ಕೆ ಅಳವಡಿಸಿರುವ ಮರದ ಹಲಗೆಗಳು ಎದ್ದು ಹೋಗುವ ಸಾಧ್ಯತೆ ಇತ್ತು. ಆದರೆ, ಸದ್ಯ ಅಳವಡಿಸುತ್ತಿರುವ ಶೀಟ್‌ಗಳಿಂದ ಲೀಕೇಜ್ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಕ್ರೀಡಾಂಗಣವನ್ನು ಹೊರತುಪಡಿಸಿದರೆ ಈ ಮಾದರಿಯ ಅತ್ಯಾಧುನಿಕ ಫೈಬರ್ ಶೀಟ್ ಅಳವಡಿಸುತ್ತಿರುವ ರಾಜ್ಯದ ೨ನೇ ಕ್ರೀಡಾಂಗಣ ಇದಾಗಿದೆ. ದಸರಾ ಮಹೋತ್ಸವದಲ್ಲಿ ಇದನ್ನು ಬಳಕೆಗೆ ಮುಕ್ತಗೊಳಿಸಲಾಗುವುದು – ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

 

 

Tags: