Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗಣೇಶೋತ್ಸವದಲ್ಲಿ ಭಾವೈಕ್ಯತೆ ಮೆರೆದ ಯುವ ಶಕ್ತಿ

ಮಂಡ್ಯ: ನಗರದ ಶಂಕರನಗರದಲ್ಲಿನ ಶಂಕರನಗರ ಗೆಳೆಯರ ಬಳಗ ಹಾಗೂ ಡಾ. ಎಂ. ಬಿ. ಶ್ರೀನಿವಾಸ್ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಿದ್ದ 5ನೇ ವರ್ಷದ ಪುಷ್ಪಮಂಟಪೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನದಲ್ಲಿ ಮುಸ್ಲಿಂ ಯುವಕರು ರಕ್ತದಾನ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದು ಎಲ್ಲರ ಗಮನ ಸೆಳೆಯಿತು.

ಜಿಲ್ಲೆಯ ನಾಗಮಂಗಲದಲ್ಲಿ ಇತ್ತೀಚೆಗೆ ನಡೆದ ಗಣೇಶ ಉತ್ಸವದ ವೇಳೆ ಉಂಟಾದ ಘರ್ಷಣೆಯಲ್ಲಿ ಕೊಟ್ಯಂತರ ರೂ. ಮೌಲ್ಯದ ದಿನಬಳಕೆಯ ವಸ್ತುಗಳು ಬೆಂಕಿಗಾಹುತಿಯಾಗಿ ಜನಸಾಮಾನ್ಯರು ಪರದಾಡುವಂತಾಗಿದ್ದಲ್ಲದೆ, ಹಲವರು ಪೊಲೀಸ್ ಠಾಣೆಗೆ ಅಲೆಯಬೇಕಾದ ಸಂಕಷ್ಟದಲ್ಲಿ ಸಿಲುಕಿರುವ ಸನ್ನಿವೇಶದಲ್ಲಿ ಮಂಡ್ಯದ ಶಂಕರನಗರದ ಯುವಶಕ್ತಿ ಸೌಹಾರ್ದತೆ ಮೆರೆದಿರುವುದು ವಿಶೇಷವಾಗಿದೆ.

ಗಣೇಶೋತ್ಸವದಲ್ಲಿ ಏರ್ಪಡಿಸಿದ್ದ ರಕ್ತದಾನ ಅಭಿಯಾನದಲ್ಲಿ ಸಂಚಾರ ವಾಹನದಲ್ಲಿ 10ಕ್ಕೂ ಹೆಚ್ಚು ಮುಸ್ಲಿಂ ಯುವಕರು ಸೇರಿದಂತೆ 40ಕ್ಕೂ ಹೆಚ್ಚು ರಕ್ತದಾನಿಗಳಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ರಕ್ತ ಸಂಗ್ರಹಿಸಿಕೊಂಡರು. ಬಳಿಕ ಮಾತನಾಡಿದ ಡಾ. ಎಂ. ಬಿ. ಶ್ರೀನಿವಾಸ್ ಪ್ರತಿಷ್ಠಾನದ ವ್ಯವಸ್ಥಾಪಕ ರಾಹುಲ್, ಪ್ರಗತಿಪರ ಹೋರಾಟಗಾರ ಡಾ. ಎಂ. ಬಿ. ಶ್ರೀನಿವಾಸ್ ಸ್ಮರಣಾರ್ಥ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಗಣೇಶ ಪುಷ್ಪಮಂಟಪದಿಂದ ಸಾಕಷ್ಟು ಗೆಳೆಯರು ಒಗ್ಗೂಡಿ, ಒಮ್ಮತ ಬೆಸೆಯುವ ಕೆಲಸ ಮಾಡಲಾಗುತ್ತಿದೆ ಎಂದರು.

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಅನ್ಯ ಕೋಮುಗಳ ನಡುವೆ ಗಲಭೆ ನಡೆಯಿತು. ಆದರೆ ಇಲ್ಲಿ ಮುಸ್ಲಿಂ ಯುವಕರು, ಗಣೇಶ ಮಂಟಪದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದರು. ಶಾಸಕ ರವಿಕುಮಾರ್ ಗಣಿಗ ಅವರು ಪುಷ್ಪಮಂಟಪಕ್ಕೆ ಆಗಮಿಸಿ ಯುವಕರ ಸಾಮಾಜಿಕ ಸೇವಾ ಕಾರ್ಯವನ್ನು ಶ್ಲಾಸಿದರಲ್ಲದೆ, ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಜೀವಧಾರ ಟ್ರಸ್ಟ್ ಅಧ್ಯಕ್ಷ ನಟರಾಜು, ಮಿಮ್ಸ್ ರಕ್ತನಿಽ ಕೇಂದ್ರದ ರಫಿ, ರಾಜು, ಶಂಕರನಗರ ಗೆಳೆಯರ ಬಳಗದ ಪ್ರಮೋದ್, ಅಭಿಷೇಕ್, ಮಿತಿಲ್, ಲಖನ್, ತೇಜಸ್, ಶ್ರೀನಿವಾಸ್, ಶಿವರಾಜ್, ಧನುಷ್, ಮನೀಷ್, ಇಮ್ರಾನ್, ಸೋಹ್ರಬ್, ಹುಸೇನ್, ಹಿಮು, ಆಕಾಶ್, ಚರಂಜೀವಿ, ಸೂರ್ಯ, ಸೈಯದ್ ಜುನೈದ್, ಶಿವರಾಜ್, ಸೈಯದ್ ಮೊಯಿನ್, ಮೊಹಮ್ಮದ್ ಫೈಝನ್, ಹರ್ಷವರ್ಧನ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

 

Tags: