Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ದಸರಾ: ಕುಂಚ ಕಲಾ ವೈಭವಕ್ಕೆ ಕಾವಾ ಸಿದ್ಧತೆ

ಚಿರಂಜೀವಿ. ಸಿ

ಮೈಸೂರು: ದಸರಾ ಮಹೋತ್ಸವಕ್ಕಾಗಿ ಸಾಂಸ್ಕೃತಿಕ ನಗರಿ ಸಿಂಗಾರಗೊಳ್ಳುತ್ತಿದ್ದು, ಕಲೆಗಳ ತವರೂರಲ್ಲಿ ಕರ್ನಾಟಕ ಏಕೀಕರಣ ಇತಿಹಾಸ, ದಸರಾ ವೈಭವ, ಹೊರ ರಾಜ್ಯಗಳ ನವರಾತ್ರಿ ಆಚರಣೆಯ ಸಂಸ್ಕೃತಿ-ಪರಂಪರೆಯನ್ನು ಚಿತ್ರಕಲೆಯ ಮೂಲಕ ಪ್ರಸ್ತುತಪಡಿಸಲು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ (ಕಾವಾ) ಕಾಲೇಜು ಸಿದ್ಧತೆ ನಡೆಸಿದೆ.

ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿಯಿಂದ ಪ್ರತಿ ವರ್ಷ ನಗರದ ಕಲಾಮಂದಿರದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಾವಾ ಕಾಲೇಜಿನ ಆವರಣಕ್ಕೆ ಸ್ಥಳಾಂತರಗೊಳ್ಳಲಿದೆ. ಕಲಾ ಪ್ರದರ್ಶನದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಜಿಲ್ಲೆಯ ಹಿರಿ-ಕಿರಿಯ ಕಲಾವಿದರು ಬಣ್ಣಗಳ ಕುಂಚಗಳಲ್ಲಿ ದಸರೆಯ ಮೆರುಗನ್ನು ಹೆಚ್ಚಿಸುವ ತಯಾರಿಯಲ್ಲಿದ್ದಾರೆ. ಶಾಸಕ ತನ್ವೀರ್ ಸೇಠ್ ಸಲಹೆಯಂತೆ ದಸರಾ ಉಪ ಸಮಿತಿಯು ದಸರಾ ಕಲಾ ಪ್ರದರ್ಶನವನ್ನು ಕಾವಾ ಕಾಲೇಜಿ ನಲ್ಲಿ ನಡೆಸುವಂತೆ ತೀರ್ಮಾನಿಸಿದೆ.

ಚಿತ್ರಕಲೆಯಲ್ಲಿ ಮೂಡಿಬರಲಿದೆ ಕರ್ನಾಟಕ ಏಕೀಕರಣದ ಇತಿಹಾಸ: ಕರ್ನಾಟಕ ರಾಜ್ಯ ಉದಯಿಸಿ ೫೦ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭ, ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಮಹತ್ವ, ಬುಡಕಟ್ಟು ಸಂಸ್ಕೃತಿ ಇತ್ಯಾದಿಗಳ ಚಿತ್ರಕಲಾ, ಕ್ಯಾನ್ವಾಸ್ ಪೈಂಟಿಂಗ್, ಚಿತ್ರಕಲಾ ಮತ್ತು ಮಣ್ಣಿನ ಆಕೃತಿಗಳು ದಸರಾ ಉತ್ಸವದಲ್ಲಿ ಮೇಳೈಸಲಿದೆ.

ಹೊರ ರಾಜ್ಯಗಳ ನವರಾತ್ರಿ ಸೊಬಗು: ಜಿಲ್ಲೆಯ ಹಿರಿಯ ಕಲಾವಿದರು ಸೇರಿದಂತೆ ರಾಜ್ಯದ ೩೧ ಜಿಲ್ಲೆಗಳ ಕಲಾವಿದರು, ಒಡಿಶಾ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು, ರಾಜ್ಯಗಳ ಕಲಾವಿದರು ತಮ್ಮಲ್ಲಿನ ನವರಾತ್ರಿ ಆಚರಣೆ ವೈಭವದೊಂದಿಗೆ ಅಲ್ಲಿನ ಕಲಾವಿದರ ಕೈಚಳಕದಲ್ಲಿ ಸಾಂಪ್ರಾದಾಯಿಕ ಕಲೆಗಳು ಅರಳಲಿವೆ. ಸೆ. ೨೩ರಿಂದ ಅ. ೭ರವರೆಗೆ ನಡೆಯುವ ಕಲಾ ಪ್ರದರ್ಶನವು ವಿವಿಧ ವಿಭಾಗಗಳಲ್ಲಿ ನಡೆಯಲಿವೆ. ಸೆ. ೨೩ರಿಂದ ಅ. ೪ರವರೆಗೆ ರಾಜ್ಯದ ೧೦ ಮಂದಿ ಕಲಾವಿದರು ಭಾರತ ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಚಿತ್ರಕಲೆಯ ರೂಪ ನೀಡಲಿದ್ದಾರೆ. ಸೆ. ೩೦ರಿಂದ ಅ. ೪ರವೆರೆಗೆ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಚಿತ್ರಕಲಾ ಶಿಬಿರ ನಡೆಯಲಿದ್ದು, ಇದರಲ್ಲಿ ಕರ್ನಾಟಕ ಏಕೀಕರಣದ ಇತಿಹಾಸವನ್ನು ಕಲಾವಿದರು ೩೩ ಅಳತೆಯ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಲಿದ್ದಾರೆ. ಜೊತೆಗೆ ಮರದ ಆಕೃತಿಗಳಿಗೆ (ಇನ್ಲೆ ಕೇವ್) ಕಲಾ ಸ್ಪರ್ಶ ದೊರೆಯಲಿದೆ. ಅ. ೬ರಂದು ಜಿಲ್ಲೆಯ ನಾನಾ ಮೂಲಗಳ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಮತ್ತು ಮಣ್ಣಿನಲ್ಲಿ ಕಲಾಕೃತಿಗಳ ಶಿಲ್ಪಕಲೆ ಸ್ಪರ್ಧೆಯು ವಯಸ್ಸಿನ ಆಧಾರದಲ್ಲಿ ೩ ವಿಭಾಗಗಳಲ್ಲಿ ೨ ಅವಽಯಲ್ಲಿ ನಡೆಯಲಿದೆ. ೧ರಿಂದ ೪ನೇ ತರಗತಿವರೆಗೆ, ೫ರಿಂದ ೭ನೇ ತರಗತಿವರೆಗೆ ಮತ್ತು ೮ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ೧ ಸಾವಿರ ವಿದ್ಯಾರ್ಥಿಗಳು ಸ್ಪಽಸುವ ನಿರೀಕ್ಷೆ ಇದೆ ಎಂದು ಕಾಲೇಜಿನ ಉಪನ್ಯಾಸಕ ಬಿಂದುರಾಯ ಬಿರಾದಾರ್ ಮಾಹಿತಿ ನೀಡಿದರು.

ಸ್ಪರ್ಧೆಗೆ ಅರ್ಜಿ ಆಹ್ವಾನ: ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ವತಿಯಿಂದ ಆಯೋಜಿಸಿರುವ ಈ ಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತಿಪರ ಹಾಗೂ ಹವ್ಯಾಸಿ ಕಲಾವಿದರು ಪಾಲ್ಗೊಳ್ಳಬಹುದು. ಸೆ. 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. ಸಂ. ೯೮೪೪೫೯೫೫೬೮, ೯೮೪೪೦೮೨೫೭೯ ಸಂಪರ್ಕಿಸಬಹುದು.

ಕಲಾ ಪ್ರದರ್ಶನಕ್ಕೆ ಸಕಲ ಸಿದ್ಧತೆ: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ರಾಜ್ಯದಲ್ಲಿ ಹೆಗ್ಗಳಿಕೆ ಹೊಂದಿದ್ದರೂ ಕಾಲೇಜಿನ ಆವರಣದಲ್ಲಿ ದಸರಾ ಮಹೋತ್ಸವದಲ್ಲಿ ಕಲಾ ಪ್ರದರ್ಶನವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಮೊದಲ ಬಾರಿಗೆ ಕಾಲೇಜಿನ ಆವರಣದಲ್ಲಿ ಕಲಾ ಪ್ರದರ್ಶನ ನಡೆಯುತ್ತಿರುವುದು ಹೆಮ್ಮೆ ತಂದಿದೆ. ಪ್ರದರ್ಶನದ ಯಶಸ್ವಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. – ಎ. ದೇವರಾಜ್, ಡೀನ್, ಶ್ರೀ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು.

 

 

Tags: