ಹನೂರು: ತಾಲೂಕಿನ ಪಾಲಾರ್ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಘಟನೆ ವಿವರ: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ 18 ಮನೆ ಮಂಜೂರಾಗಿದ್ದು ಎಲ್ಲಾ ಮನೆಯವರು ಆದಿಪಾಯ ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಬಿಡುಗಡೆಯಾಗಿದೆ. ಈ ವೇಳೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳನ್ನು ನೀವು ಮನೆಯ ಗೋಡೆ ಕಟ್ಟಬೇಡಿ ಎಂದು ಮಲೆ ಮಹದೇಶ್ವರ ವನ್ಯಜೀವಿ ವಲಯದ ವ್ಯಾಪ್ತಿಯ ಪಾಲಾರ್ ವಲಯದ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಜಪ್ಪ ಕಿರುಕುಳ ನೀಡಿ ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ ನಂತರ ನಿವಾಸಿಗಳೆಲ್ಲರೂ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18 ಸಾವಿರ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಪಾಲಾರ್ ಗ್ರಾಮದ ಫಲಾನುಭವಿ ಮುರುಗೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೂಸ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಲೋಹಿತ್, ಶಶಿಕುಮಾರ್ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿ ಭೋಜಪ್ಪ ರವರನ್ನು ಬುಧವಾರ ಸಂಜೆ 6 ಗಂಟೆಯ ವೇಳೆ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ . ಈ ಸಂಬಂಧ ಈಗಾಗಲೇ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಪೇದೆ ಗೌತಮ್, ಮಹಾಲಿಂಗ ಸ್ವಾಮಿ, ಮಹಾದೇವ ಸ್ವಾಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.