ಅಪ್ಪ-ಅವ್ವ ಕಳೆದುಹೋದ ಮಗನನ್ನು ಹುಡುಕಿ ಬರುತ್ತಾರೆ. ಅಪ್ಪ-ಅವ್ವನನ್ನು ನೋಡಿದ ಮಗ ಓಡಿ ಹೋಗುತ್ತಾನೆ. ಮಧ್ಯೆ ಒಂದು ಕಂದಕ ಹಾಗೆಯೇ ಇದೆ. ಅಪ್ಪ-ಅವ್ವನನ್ನು ನೋಡಿ ಓಡಿ ಹೋಗುವಂತೆ ಮಾಡಿದ್ದು, ಅದೇನು? ‘ಅನ್ನ’.
ಅಕ್ಕಿ ಮೂಟೆಯನ್ನು ಮುಟ್ಟುವ ಬಸವರಾಜು… ಒಂದು ಹಿಡಿ ಅನ್ನಕ್ಕೆ ಒಂದು ಕಡೆ ಮೂಟೆ ಮೂಟೆ ಪೇರಿಸಿರುವ ಅಕ್ಕಿ ಮೂಟೆ… ಮತ್ತೊಂದೆಡೆ ತುತ್ತು ಅನ್ನ ತಿನ್ನುವುದಕ್ಕೆ ಹಂಬಲಿಸುವ ಗುಡಿಸಲುಗಳು… ಇದರ ಮಧ್ಯೆ ನಡೆಯುವುದೇ ‘ಅನ್ನ’ ಸಿನೆಮಾ.
ಹನೂರು ಚನ್ನಪ್ಪ ಅವರ ಕತೆಯನ್ನು ನಿರ್ದೇಶಕ ಇಸ್ಲಾಹುದ್ದೀನ್ ಸಿನೆಮಾ ಮಾಡಿದ್ದಾರೆ. ಅನ್ನಕ್ಕಾಗಿ ಅಷ್ಟು ಆಸೆ ಪಡುವ ಪರಿಸ್ಥಿತಿ ಇಂದು ಇಲ್ಲ. ಆದರೆ ಇಲ್ಲಿಯತನಕ ಬರುವುದಕ್ಕೆ ಒಂದು ವರ್ಗ ಪಟ್ಟಪಾಡು, ಅದರ ದಾರುಣತೆಯನ್ನು ತೆರೆದಿಡುವ ಅನ್ನ ಸಿನೆಮಾ ನೋಡಿದ ಪ್ರೇಕ್ಷಕರನ್ನು ಅಲ್ಲಾಡಿಸಿಬಿಡುತ್ತದೆ. ಸಂಪತ್ ಮೈತ್ರೇಯ ಮತ್ತು ಪದ್ಮಶ್ರೀ ಅವರು ಸಿನಿಮಾದಲ್ಲಿ ಪಾತ್ರಗಳಲ್ಲಿ ಜೀವಿಸಿಬಿಟ್ಟಿದ್ದಾರೆ ಎನ್ನುವಂತಿದೆ. ಸಿನೆಮಾದುದ್ದಕ್ಕೂ ಯಾವ ಪಾತ್ರವೂ ಕಪ್ಪು ಬಿಳುಪಾಗಿರದೇ ಅಪಟ ಮನುಷ್ಯರಾಗಿ ಕಾಣಿಸುವುದರಿಂದ ಇದು ಭಿನ್ನವಾಗಿ ಕಾಣುತ್ತದೆ. ಬಹುತೇಕ ಚಾಮರಾಜನಗರ ಭಾಗದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿರುವುದು ಅಲ್ಲಿನ ಭಾಷಾ ಸೊಗಡನ್ನು ಅದು ಇರುವ ಹಾಗೆಯೇ ಅನುಭವಕ್ಕೆ ಬರುತ್ತದೆ. ‘ನನ್ನ ಮಗ ಮಾದೇವ ಚಿನ್ನ ಕೇಳಿಲ್ಲ ಬೆಳ್ಳಿ ಕೇಳಿಲ್ಲ. ಅನ್ನ ಕೇಳ ಅದ್ದೂ ಕೊಡಕ್ಕಾಗಿಲ್ಲ’ ಅಂತ ಹೇಳುವ ತಂದೆಯ ಮಾತು’, ‘ನೀನು ಆಟ ಸಾಮಾನು ತೆಕ್ಕೊಟ್ಟಿದ್ರೆ ಒಯ್ದಿದ್ದಾ ಮಗ’ ಎನ್ನುವ ತಾಯಿಯ ಮಾತು ಎಂಥವರನ್ನೂ ಸಂಕಟಕ್ಕೆ ಒಯ್ಯುತ್ತದೆ. ಒಂದೇ ದೃಶ್ಯದಲ್ಲಿ ಮಗನನ್ನು ಕಳೆದುಕೊಂಡ ಇಬ್ಬರು ತಾಯಿಯರು ಬದುಕಿನ ಸಂದಿಗ್ಧತೆಯನ್ನು ಎದುರಿಗಿಟ್ಟರೆ, ಎಲ್ಲಿಗೆ ಹೋಗಬೇಕು ಎನ್ನುವ ಮಾದೇವನ ಆಯ್ಕೆಯ ಸಂಕಟದಲ್ಲಿ ಬಡತನ ದಾರುಣತೆ ಅನುಭವಕ್ಕೆ ಬರುತ್ತದೆ. ಅನ್ನ ಕೊಡಲಿಕ್ಕಾಗದೇ ತನ್ನ ಮಗನನ್ನೇ ಬೇಡುವ ಅಪ್ಪ-ಅವ್ವ ನೋಡುಗರನ್ನು ಕಾಡುತ್ತಲೇ ಇರುತ್ತಾರೆ. ಅನ್ನಕ್ಕಾಗಿ ಅಪ್ಪ-ಅವ್ವನನ್ನೆ ಬಿಟ್ಟು ಓಡಿ ಹೋಗುವ ಮಾದೇವನಿಗೆ ಅವರ ಮೇಲೆ ಅಪಾರ ಪ್ರೀತಿಯಿದೆ. ಅವರನ್ನು ನೆನಪಿಸಿಕೊಂಡು ಅಳುತ್ತಾನೆ. ಆದರೆ ಅವರ ಬಳಿ ಹೋಗಲಾರ. ಇಂಥ ಮಾದೇವರು ನಮ್ಮ ಸುತ್ತಲೂ ಕಾಣುತ್ತಾರೆ.
-ಚಿತ್ರಾ ವೆಂಕಟರಾಜು, ಚಾಮರಾಜನಗರ