ಮೈಸೂರಿನ ಜಯಪ್ರಕಾಶ್ ಈ ಹಿಂದೆ ‘ಜಮಾನ’ ಎಂಬ ಚಿತ್ರದ ಮೂಲಕ ಹೀರೋ ಆಗಿದ್ದರು. ಜಾಕಿ ಶ್ರಾಫ್, ಆಕರ್ಷ, ಸ್ವಾತಿ ಮುಂತಾದವರು ನಟಿಸಿದ್ದ ಈ ಚಿತ್ರವು ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಇದೀಗ ಜಯಪ್ರಕಾಶ್ ಅಲಿಯಾಸ್ ಜೆಪಿ, ಸದ್ದಿಲ್ಲದೆ ‘ಭಗೀರಥ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ.
‘ಭಗೀರಥ’ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿದೆ. ಈ ಹಂತದಲ್ಲಿ ಚಿತ್ರಕ್ಕೊಂದು ಪ್ರಮೋಷನಲ್ ಹಾಡು ಬೇಕು ಎಂದು ಚಿತ್ರತಂಡಕ್ಕೆ ಅನಿಸಿದೆ. ಸರಿ, ನಟ ಜಯಪ್ರಕಾಶ್ ಮತ್ತು ನಿಸರ್ಗ ಅಪ್ಪಣ್ಣ ಹಾಗೂ ರೂಪಶ್ರೀ ಜೊತೆಗೆ ‘ಮಾವ ಮಾವ …’ ಎಂಬ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಭಗೀರಥ’ ಚಿತ್ರವನ್ನು ನಿರ್ದೇಶಿಸಿರುವವರು ರಾಮ್ ಜನಾರ್ಧನ್. ‘ಬಾಯ್‍ಫ್ರೆಂಡ್’ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ಅವರು, ಆ ನಂತರ ‘ಅಂಜದಿರು’ ಮತ್ತು ‘ಸ್ವಯಂಕೃಷಿ’ ಎಂಬ ಇನ್ನೆರಡು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಇದೀಗ ‘ಭಗೀರತ’ ಚಿತ್ರವನ್ನು ಹೆಚ್ಚು ಸದ್ದುಗದ್ದಲವಿಲ್ಲೆ ಮುಗಿಸಿ, ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ‘’ಭಗೀರಥ’ ಎಂಬ ಹೆಸರೇ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದು. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನವಾರ ಚಿತ್ರ ಸೆನ್ಸಾರ್ ಮುಂದೆ ಬರಲಿದೆ. ಈ ಪ್ರಮೋಷನಲ್ ಹಾಡಿನ ಚಿತ್ರೀಕರಣ ಕೆ.ಆರ್.ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡನ್ನು ಬರೀ ಪ್ರಚಾರಕ್ಕೆ ಮಾತ್ರವಲ್ಲ, ಚಿತ್ರದಲ್ಲೂ ಇರುತ್ತದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡನ್ನು ಸದ್ಯದಲ್ಲೇ ಹಾಡಲಿದ್ದಾರೆ’ ಎಂದು ರಾಮ್ ಜನಾರ್ಧನ್ ಹೇಳಿದರು.
ನಾಯಕ ಜೆಪಿ ಮಾತನಾಡಿ, ‘ಯಾವುದಕ್ಕೂ ಹೆದರದ ಮತ್ತು ಅಪಾರ ಇಚ್ಛಾಶಕ್ತಿ ಇರುವ ಮನುಷ್ಯನ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತು’ ಎಂದರು.
‘ಭಗೀರಥ’ ಚಿತ್ರದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿದೆ.
‘ಭಗೀರಥ’ ಚಿತ್ರವನ್ನು ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ. ಭೈರಪ್ಪ ಹಾಗೂ ಕೆ. ರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.