ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರೀಕ್ಷಾರ್ಥ ಚಾಲನೆ ನೀಡಿದ್ದಾರೆ.
ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ನೀರಾವರಿ ಸಚಿವನಾಗಿರುವ ನನಗೆ ಇಂತಹ ನೂರು ಯೋಜನೆಯನ್ನು ಮಾಡುವ ಶಕ್ತಿಯನ್ನು ದೇವರು ನೀಡಿದ್ದಾನೆ. ಇನ್ನು ಹಲವಾರು ಯೋಜನೆಗಳನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಈ ಯೋಜನೆಗೆ ರೈತರು ಹತ್ತಾರು ಎಕರೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಆ ರೈತರಿಗೆಲ್ಲಾ ಏನು ಪರಿಹಾರ ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅನ್ನದಾತರಿಗೆ ಆಶ್ವಾಸನೆ ನೀಡಿದರು.





