Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವೆನಿಸ್ ಚಿತ್ರೋತ್ಸವದಲ್ಲಿ ಡಾ. ಗಿರೀಶ್‍ ಕಾಸರವಳ್ಳಿ ಅವರಿಗೆ ವಿಶೇಷ ಗೌರವ

ಕನ್ನಡದ ಹೆಮ್ಮೆಯ ನಿರ್ದೇಶಕ ಡಾ. ಗಿರೀಶ್‍ ಕಾಸರವಳ್ಳಿ ನಿರ್ದೇಶನದ ಹಲವಾರು ಚಿತ್ರಗಳು ಜಗತ್ತಿನ ಹಲವು ಜನಪ್ರಿಯ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವುದರ ಜೊತೆಗೆ ಮನ್ನಣೆ ಪಡೆದಿದೆ. ಈಗ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’ ಚಿತ್ರವನ್ನು ಈಗಾಗಲೇ ಪ್ರಾರಂಭವಾಗಿರುವ ವೆನಿಸ್‍ ಅಂತಾರಾಷ್ಟ್ರೀಯ ಚಿತ್ರೋತ್ಸವ (ಆಗಸ್ಟ್ 28ರಿಂದ ಸೆಪ್ಟೆಂಬರ್ 07) ಚಿತ್ರದಲ್ಲಿ ಪ್ರದರ್ಶನ ಮಾಡುವುದರ ಜೊತೆಗೆ ಕಾಸರವಳ್ಳಿ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತಿದೆ.

ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದಿರುವ ವೆನಿಸ್ ಚಿತ್ರೋತ್ಸವದಲ್ಲಿ ‘ಘಟಶ್ರಾದ್ಧ’ ಚಿತ್ರವನ್ನು ವಿಶ್ವ ಸಿನಿಮಾದ ಒಂದು ಕ್ಲಾಸಿಕ್ ಚಿತ್ರ ಎಂದು ಪರಿಗಣಿಸಿ ಪ್ರದರ್ಶಿಸುತ್ತಿದೆ. ಸಾಮಾನ್ಯವಾಗಿ ಚಿತ್ರೋತ್ಸವದಲ್ಲಿ ಒಂದು ಚಿತ್ರಕ್ಕೆ ಎರಡು ಪ್ರದರ್ಶನಗಳಿದ್ದರೆ, ಈ ಚಿತ್ರದ ಮೂರು ಪ್ರದರ್ಶನಗಳಿವೆ. ಗಿರೀಶ್ ಕಾಸರವಳ್ಳಿಯವರನ್ನು ವಿಶೇಷ ಆಹ್ವಾನ ನೀಡಿ ಕರೆಸಿಕೊಳ್ಳುತ್ತಿದೆ. ಇದು ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸೆಪ್ಟೆಂಬರ್‍ 03ರಂದು ಮೊದಲ ಪ್ರದರ್ಶನ ಕಾಣುತ್ತಿದೆ.

ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚಿಗೆ ಪಡೆದಿದ್ದ ‘ಘಟಶ್ರಾದ್ಧ’, ಆ ವರ್ಷ ರಾಷ್ಟ್ರ್ರ ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ಘಟಾನುಘಟಿ ಚಿತ್ರನಿರ್ದೇಶಕರುಗಳಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನೆಗಲ್, ಅಡೂರ್ ಗೋಫಾಲಕೃಷ್ಣನ್, ಅರವಿಂದನ್, ಜಾನ್ ಅಬ್ರಹಾಂ, ಗಿರೀಶ್‌ ಕಾರ್ನಾಡ್ ಅವರ ಚಿತ್ರಗಳ ಜೊತೆ ಸ್ಪರ್ಧಿಸಿ ಸ್ವರ್ಣಪದಕ ಪಡೆದಿತ್ತು.

ಇದು ಕಾಸರವಳ್ಳಿ ನಿರ್ದೇಶನ ಮೊದಲ ಚಿತ್ರವಾಗಿದ್ದು, ಕೇವಲ 26ನೇ ವಯಸ್ಸಿನಲ್ಲಿ ಅವರು ಈ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರವನ್ನು ಕಟ್ಟಿಕೊಟ್ಟ ರೀತಿಗೆ ಅವರು ಸತ್ಯಜಿತ್ ರೇ, ಗೋಪಾಲಕೃಷ್ಣ ಅಡೂರ್‍ ಮುಂತಾದವರಿಂದೆ ಮೆಚ್ಚುಗೆ ಪಡೆದಿದ್ದರು. ಅಷ್ಟೇ ಅಲ್ಲ, ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಾದ, ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. ‘ಸೆಲ್ಯೂಲಾಯ್ದ್ ಮ್ಯಾನ್’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಪೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು.

ರಾಷ್ಟ್ರಪತಿಗಳ ಸ್ವರ್ಣ ಪದಕವಲ್ಲದೇ ಕರ್ನಾಟಕ ರಾಜ್ಯ ಪ್ರಶಸ್ತಿಯಲ್ಲಿ ಚಿನ್ನದ ಪದಕ ಗೆದ್ದ ‘ಘಟಶ್ರಾದ್ಧ’ ಚಿತ್ರವು ಡಾ. ಯು.ಆರ್.ಅನಂತಮೂರ್ತಿ ಅವರ ಸಣ್ಣಕತೆ ಆಧರಿಸಿತ್ತು. ಇತ್ತೀಚೆಗಷ್ಟೇ ನಿಧನರಾದ ಸದಾನಂದ ಸುವರ್ಣ ಈ ಚಿತ್ರವನ್ನು ನಿರ್ಮಿಸಿದ್ದರು. ಎಸ್. ರಾಮಚಂದ್ರ ಅವರ ಛಾಯಾಗ್ರಹಣ ಇದ್ದ ಈ ಚಿತ್ರಕ್ಕೆ ಬಿ.ವಿ.ಕಾರಂತರು ಸಂಗೀತ ಸಂಯೋಜಿಸಿದರೆ, ಕೆ.ವಿ. ಸುಬ್ಬಣ್ಣ ಕಲಾ ನಿರ್ದೇಶನ ಮಾಡಿದ್ದರು.

ಈ ಚಿತ್ರ 1978 ರಲ್ಲಿ ಬಿಡುಗಡೆಯಾಗಿ ರಾಜ್ಯಾದಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಚಿತ್ರ ಬಿಡುಗಡೆಯಾಗಿ 46 ವರ್ಷಗಳ ನಂತರ ‘ಘಟಶ್ರಾದ್ಧ’ ವೆನೀಸ್ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಈ ಪ್ರದರ್ಶನವಾಗುತ್ತಿರುವುದು ವಿಶೇಷ.

Tags: