ಐದು ವರ್ಷಗಳ ಹಿಂದೆ ನಟ ದರ್ಶನ್ ಮೈಸೂರು ಮೃಗಾಲಯದಲ್ಲಿ ಒಂದು ಹುಲಿ ಮತ್ತು ಆನೆಯನ್ನು ದತ್ತು ಪಡೆಯುವುದರ ಜೊತೆಗೆ ಬೇರೆಯವರಿಗೂ ಪ್ರಾಣಿಗಳನ್ನು ದತ್ತು ಪಡೆಯುವುದಕ್ಕೆ ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ, ಹಲವು ನಟ-ನಟಿಯರು ಬೇರೆಬೇರೆ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದು ಸಾಕಿದರು. ಈಗ ಸಂಯುಕ್ತಾ ಹೊರನಾಡು ಸಹ ಅದೇ ದಾರಿ ಹಿಡಿದಿದ್ದಾರೆ.
ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಂಯುಕ್ತ ಹೊರನಾಡು, ಇದಕ್ಕೂ ಮೊದಲು ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಸಂಯುಕ್ತಾ, ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.
28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ ಮರಿಯನ್ನು ಸಂಯುಕ್ತಾ ದತ್ತು ಪಡೆದಿದ್ದು, ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟವಾಗಿದೆ. ಅದೇ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಸಂಯುಕ್ತಾ, ‘ಟೆಕೆಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಘಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕೆಯಾನ್ ಸಂಸ್ಥೆಯು ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ. ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ’ ಎಂದರು. ಈ ಸಂದರ್ಭದಲ್ಲಿ ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್, ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮುಂತಾದವರು ಹಾಜರಿದ್ದರು.
ಅಂದಹಾಗೆ, ಸುದೀಪ್ ಅಭಿನಯದ ‘ಮ್ಯಾಕ್ಸ್’ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ಸಂಯುಕ್ತ ನಟಿಸುತ್ತಿದ್ದಾರೆ.