Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ಪರಂಪರೆ ಬಿಂಬಿಸುವ ವಸ್ತುಪ್ರದರ್ಶನ ಆಯೋಜನೆ: ಮಧು ಜಿ.ಮಾದೇಗೌಡ

ಮಂಡ್ಯ: ಕಲೆ, ಸಾಹಿತ್ಯ,ಸಂಸ್ಕೃತಿ, ಕೃಷಿ, ಪ್ರವಾಸೋದ್ಯಮ, ಕೈಗಾರಿಕೆ ಇತ್ಯಾದಿ ಕ್ಷೇತ್ರಗಳನ್ನು ಪ್ರತಿಬಿಂಬಿಸುವ ಮಾಹಿತಿ ಪೂರ್ಣ ಆಕರ್ಷಕವಾದ ಗುಣಮಟ್ಟದ ವಸ್ತುಪ್ರದರ್ಶನ ಅಯೋಜಿಸಲು ಅಗತ್ಯ ಕ್ರಿಯಾಯೋಜನೆ ಸಲ್ಲಿಸುವಂತೆ ವಸ್ತುಪ್ರದರ್ಶನ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಸ್ತುಪ್ರದರ್ಶನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಇಲಾಖೆ, ಸಂಘ-ಸಂಸ್ಥೆಗಳು, ನಿಗಮ ಮಂಡಳಿಗಳಿಗೆ ಪತ್ರ ಬರೆದು ವಸ್ತುಪ್ರದರ್ಶನದಲ್ಲಿ ಮಳಿಗೆ ತೆರೆಯಲು ಆಹ್ವಾನಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ತಿಳಿಸಿದರು.

ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಬೇಕು. ವಿವಾದಗಳಿಗೆ ಅಸ್ಪದವಿರಬಾರದು. ದೂಳು ರಹಿತ, ವಿಷಮುಕ್ತ ರಾಸಾಯನಿಕ ಮುಕ್ತ ಆಹಾರ, ಪ್ಲಾಸ್ಟಿಕ್ ಮುಕ್ತವಾಗಿ ಸಮ್ಮೇಳನವನ್ನು ಆಯೋಜಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸಾಹಿತಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಸುವರ್ಣ ಕರ್ನಾಟಕ ಸಂಭ್ರಮವನ್ನು ಪ್ರತಿಬಿಂಬಿಸುವ ಮಂಡ್ಯ ಜಿಲ್ಲೆಯ ಸಾಹಿತಿಗಳ ಬದುಕು-ಬರಹ-ಸಾಧನೆ ಪರಿಚಯಿಸುವ, ಕೃಷಿ ಮತ್ತು ಪ್ರವಾಸೋದ್ಯಮ ಮಳಿಗೆಗಳನ್ನು ತೆರೆಯಬೇಕು. ಸರ್ಕಾರ ಕಾರ್ಯಕ್ರಮ-ಯೋಜನೆಗಳ ಪ್ರದರ್ಶನವಾಗದೇ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಬೀರುವ ದಿಕ್ಕಿನಲ್ಲಿ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು, ವಿವಿಗಳು ಮತ್ತು ಕಾಲೇಜುಗಳಿಗೂ ಅವಕಾಶ ಕಲ್ಪಿಸಬೇಕು. ಚಿತ್ರಕಲೆ, ವ್ಯಂಗ್ಯಚಿತ್ರ, ಹಳೆಯ ನೋಟು-ನಾಣ್ಯಗಳು, ಜಾನಪದ ಪರಿಕರಗಳು, ಅಮೂಲ್ಯ ಪುಸ್ತಕಗಳು, ಆದಿವಾಸಿ ಸಂಸ್ಕೃತಿ ಬಿಂಬಿಸಲು ಮಳಿಗೆಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ವಸ್ತುಪ್ರದರ್ಶನ ಸಮಿತಿಯಡಿಯಲ್ಲಿ ವಿವಿಧ ಉಪ ಸಮಿತಿಗಳ ರಚಿಸಿ ಕಾರ್ಯಭಾರವನ್ನು ಹಂಚಿಕೆ ಮಾಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಕೆಳಕಂಡ ಉಪ ಸಮಿತಿಗಳನ್ನು ರಚಿಸಲಾಯಿತು.
– ಸರ್ಕಾರಿ ಇಲಾಖೆಗಳ ಯೋಜನೆ/ ಕಾರ್ಯಕ್ರಮಗಳು
– ವಾಣಿಜ್ಯ ಉದ್ದೇಶ
– ಆಹಾರ
– ಕೃಷಿಯನ್ನು ಪ್ರವಾಸೋದ್ಯಮದ ರೀತಿ ಉತ್ತೇಜಿಸುವುದು
– ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಉಪ ಸಮಿತಿ ರಚಿಸಲು ಸಮಿತಿ ತೀರ್ಮಾನಿಸಿತು.

ಸಮಿತಿಯ ಸದಸ್ಯ ಕಾರ್ಯದರ್ಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ, ಸಂಚಾಲಕ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ, ತೋಟಗಾರಿಕೆ ಉಪ ನಿರ್ದೇಶಕಿ ರೂಪಶ್ರೀ, ಕೃಷಿ ಇಲಾಖೆ ಉಪ ನಿರ್ದೇಶಕಿ ಮಾಲತಿ, ಸಮಿತಿಯ ಸದಸ್ಯರಾದ ಸತೀಶ್ ಜವರೇಗೌಡ, ಜಿ.ಶ್ರೀಹರ್ಷ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಬಾ ಸಾಹೇಬ್ ಸೇರಿದಂತೆ ಹಲವರು ಹಾಜರಿದ್ದರು.

Tags: