ಮೈಸೂರಿನ ಶಿವರಾಮಪೇಟೆ ರಸ್ತೆಯ ಪಕ್ಕದಲ್ಲಿ ಹಣ್ಣಿನ ಅಂಗಡಿಯೊಂದಿದೆ. ಆಯಾಸದಿಂದ ಬಂದ ಗ್ರಾಹಕರಿಗೆಲ್ಲ ತಂಪನೆಯ ಪಾನೀಯವನ್ನು ನೀಡುತ್ತಾ ಬಂದಿರುವ ಇವರ ಹೆಸರು ರಾಮಕೃಷ್ಣ.
ಅಂಗಡಿ ತೆರೆದು, ಆಗಲೇ ನಾಲ್ಕು ವಸಂತಗಳು ಕಳೆದಿವೆ. ಈ ಮೊದಲು ಡಿಜಿಟಲ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅರವತ್ತು ವಾರದ ಹಿರಿಯ ವರ್ಷವಾದ ಮೇಲೆ ಪ್ರೆಸ್‌ನಲ್ಲಿ ಕೆಲಸ ಮಾಡಲಾಗದೆ, ಸುಮ್ಮನೆ ಮನೆಯಲ್ಲೂ ಕೂರಲಾಗದೆ, ಆದಾಯಕ್ಕೆ ಮುಂದೇನು ಮಾಡಬಹುದೆಂದು ಜೀವ ಚಡಪಡಿಸುತ್ತಿತ್ತು. ಒಂದು ದಿನ ತಾನೇಕೆ ಹಣ್ಣಿನಂಗಡಿ ತೆರೆಯಬಾರದು ಎಂದು ಯೋಚನೆ ಹೊಳೆದು, ಅಂಗಡಿ ತೆರೆದೇಬಿಟ್ಟರು. ಕಾಲಕ್ಕೆ ಅನುಗುಣವಾದ ಹಣ್ಣುಗಳಿಗೆ ಇವರ ಅಂಗಡಿಯಲ್ಲಿ ವಿಶೇಷ ಆದ್ಯತೆ, ಬೇಸಿಗೆಯಲ್ಲಿ ವ್ಯಾಪಾರ ಹೇಗೊ ಕುದುರುತ್ತದೆ. ಆದರೆ, ಮಳೆಗಾಲದಲ್ಲಿ ಗ್ರಾಹಕರ ಸ್ಪಂದನೆ ಹೇಗಿರುತ್ತದೆ ಎಂದು ಕೇಳಿದರೆ, ಲಾಭವಂತೂ ಇಲ್ಲ. ಆದರೆ ನಷ್ಟ ಆಗುವುದಿಲ್ಲ ಎಂಬ ಸಂತೃಪ್ತಿಯ ಉತ್ತರ. ವಿಜಯನಗರದಲ್ಲಿರುವ ತಮ್ಮ ಮನೆಯಿಂದ ಬೆಳಿಗ್ಗೆ ಬರುವಾಗಲೇ ಮಾರುಕಟ್ಟೆಯಿಂದ ಹಣ್ಣುಗಳನ್ನೆಲ್ಲ ತಂದು, ಒಂಬತ್ತು ಗಂಟೆಗೆ ತೆರೆದ ಅಂಗಡಿಯ ಕದ, ಮುಚ್ಚುವುದು ರಾತ್ರಿ ಹತ್ತು ಗಂಟೆಗೆ. ತಮ್ಮೊಂದಿಗೆ ಮತ್ತೊಬ್ಬ ಹುಡುಗ ನನ್ನು ಕೆಲಸಕ್ಕೆ ಜೊತೆಮಾಡಿಕೊಂಡಿದ್ದಾರೆ. ಒಂದುವೇಳೆ, ಅವರು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದರೆ ಸ್ವತಃ ರಾಮಕೃಷ್ಣ ಅವರೇ ಹಣ್ಣಿನ ರಸವನ್ನು ತಯಾರಿಸುತ್ತಾರೆ. ಹಣ್ಣಿನಂಗಡಿ ಅಂತಲ್ಲ ಎಲ್ಲ ಕೆಲಸಕ್ಕೂ ಅಡೆತಡೆಗಳಿವೆ, ನಾವದನ್ನು ಸಮರ್ಥವಾಗಿ ನಿಭಾಯಿಸಬೇಕು ಎಂಬ ಕಾಯಕ ತತ್ವವನ್ನು ಇವರ ಬಾಯಲ್ಲಿ ಕೇಳುವುದೇ ಚಂದ.