2013ರಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನಿಂದ ಬೇರ್ಪಡಿಸಿ ನೂತನ ತಾಲ್ಲೂಕಾಗಿ ಸರಗೂರನ್ನು ಘೋಷಿಸಿದರು.
ಸರಗೂರು ತಾಲ್ಲೂಕು ಕೇಂದ್ರವಾಗಿ ಒಂಬತ್ತು ವರ್ಷಗಳೇ ಕಳೆದಿದ್ದರೂ ಒಂದು ಪರಿಪೂರ್ಣ ತಾಲ್ಲೂಕ್ಕಾಗಿ ರೂಪುಗೊಂಡಿಲ್ಲ. ಅಲ್ಲದೆ ಸರಗೂರಿನಲ್ಲಿ ಒಂದು ತಾಲ್ಲೂಕಿನಲ್ಲಿ ಇರಬೇಕಾದ ಅಧಿಕಾರಿ ವರ್ಗವಿಲ್ಲ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಮೂಲಸೌಕರ್ಯ ಕೊರತೆ ತಾಂಡವವಾಡುತ್ತಿದೆ. ಇನ್ನು ತಾಲ್ಲೂಕಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳೂ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ.
ಸರಗೂರು ತಾಲ್ಲೂಕು ಆಗಿದ್ದರೂ ಇಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸೇರಿದಂತೆ ಅನೇಕ ಇಲಾಖೆಗಳೇ ಇಲ್ಲದೆ ಜನರು ಎಲ್ಲ ಕೆಲಸ ಕಾರ್ಯಗಳಿಗೂ ಎಚ್.ಡಿ. ಕೋಟೆಗೆ ಅಲೆಯಬೇಕಾಗಿದೆ. ಹೀಗಾದರೆ ತಾಲ್ಲೂಕು ಅಭಿವೃದ್ದಿ ಯಾಗುವುದಾದರೂ ಹೇಗೆ? ಪ್ರಸ್ತುತ ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿಯಾಗಿದ್ದು, ತಾವೇ ಘೋಷಿಸಿದ ಸರಗೂರು ತಾಲ್ಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ ಅಭಿವೃದ್ಧಿ ಮಾಡಬೇಕಿದೆ.
-ಸಿ.ನಿಂಗರಾಜು, ಹಳೇಹೆಗ್ಗುಡಿಲು, ಸರಗೂರು ತಾ.