ಇತ್ತೀಚೆಗೆ ನಡೆದ ‘ ಲಾಫಿಂಗ್ ಬುದ್ಧ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಆ ಚಿತ್ರದ ನಿರ್ಮಾಪಕ ರಿಷಭ್ ಶೆಟ್ಟಿ ಸಹ ಹಾಜರಿದ್ದರು. ಈ ಸಂದರ್ಭದಲ್ಲಿ ‘ಕಾಂತಾರ – ಅಧ್ಯಾಯ 1’ ಎಲ್ಲಿಯವರೆಗೂ ಬಂತು ಎಂಬ ಪ್ರಶ್ನೆಯೂ ಕೇಳಿಬಂತು. ಅದಕ್ಕೆ ಉತ್ತರಿಸಿದ್ದ ರಿಷಭ್ ಶೆಟ್ಟಿ, ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದು ಹೇಳಿದ್ದರು.
ಹೀಗಿರುವಾಗಲೇ, ರಿಷಭ್ ಶೆಟ್ಟಿ ಕಡೆಯಿಂದ ಒಂದು ಅಪ್‍ಡೇಟ್ ಬಂದಿದೆ. ತಮ್ಮ ಎಕ್ಸ್ ಖಾತೆ ಮೂಲಕ ರಿಷಭ್, ಕಲರಿಪಯಟ್ಟು ಕಲಿಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಚಿತ್ರಕ್ಕಾಗಿ ಕುದುರೆ ಸವಾರಿಯನ್ನು ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಪ್ರಾಚೀನ ಸಮರಕಲೆಯಾದ ಕಲರಿಪಯಟ್ಟು ಕಲಿಯುತ್ತಿದ್ದು, ‘ಕಾಂತಾರ – ಅಧ್ಯಾಯ 1’ರಲ್ಲಿ ಕಲೆ ಪ್ರದರ್ಶಿಸಲಿದ್ದಾರೆ.
ಮೂಲಗಳ ಪ್ರಕಾರ, ಕಳೆದ ಒಂದು ವರ್ಷದಿಂದ ರಿಷಭ್, ಈ ಕಲೆಯನ್‍ನು ಕಲಿಯುತ್ತಿದ್ದಾರಂತೆ. ಕೇರಳದಿಂದ ಒಂದು ತಂಡ ಬಂದು ರಿಷಭ್‍ಗೆ ಕಲರಿಪಯಟ್ಟು ಕಲಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಸಾಹಸ ದೃಶ್ಯಗಳಲ್ಲಿ ಕಲರಿಪಯಟ್ಟು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.
ರಿಷಭ್ ಶೆಟ್ಟಿ ಕಳೆದ ಕೆಲವು ತಿಂಗಳುಗಳಿಂದ ‘ಕಾಂತಾರ – ಅಧ್ಯಾಯ 1’ ಚಿತ್ರಕ್ಕಾಗಿ ಕುಂದಾಪುರ ಬಳಿ ಬೀಡು ಬಿಟ್ಟಿದ್ದಾರೆ. ಈ ಕುರಿತು ಕೆಲವು ತಿಂಗಳುಗಳ ಹಿಂದೆ ಮಾತನಾಡಿದ್ದ ಅವರು, ‘ಚಿತ್ರಕ್ಕಾಗಿ ಕುಂದಾಪುರ ಬಳಿ ದೊಡ್ಡ ಸ್ಟುಡಿಯೋ ಮಾಡಿ, ಅಲ್ಲಿ ಸೆಟ್‍ಗಳನ್ನು ಹಾಕಿ ಚಿತ್ರೀಕರಣ ಮಾಡುತ್ತಿದ್ದೇವೆ. ಹೊರಾಂಗಣ, ಒಳಾಂಗಣ ಎಲ್ಲವೂ ಅಲ್ಲೇ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿ, ಆ ನಂತರ 8 ಕೆಜಿ ತೂಕ ಇಳಿಸಿದ್ದೇನೆ. ಈ ಚಿತ್ರಕ್ಕಾಗಿ ಕಲರಿಪಯಟ್ಟು ಕಲಿಯುತ್ತಿದ್ದೇನೆ. 100ಕ್ಕೂ ಹೆಚ್ಚು ದಿನಗಳ ಚಿತ್ರೀಕರಣವಾಗಲಿದೆ. ಕನ್ನಡದಲ್ಲಿ ಚಿತ್ರೀಕರಣ ಮಾಡಿ, ಆ ನಂತರ ಬೇರೆಬೇರೆ ಭಾಷೆಗಳಿಗೆ ಡಬ್ ಮಾಡುತ್ತೇನೆ. ಈ ವರ್ಷ ಚಿತ್ರೀಕರಣ ಮುಗಿಯುತ್ತದೆ. ಬಿಡುಗಡೆ ಮುಂದಿನ ವರ್ಷ ಆಗುತ್ತದೆ’ ಎಂದು ಹೇಳಿದ್ದರು.
‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ. ಇನ್ನು, ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.