Mysore
22
broken clouds

Social Media

ಮಂಗಳವಾರ, 27 ಜನವರಿ 2026
Light
Dark

ಬಡ ರೈತರ ಜೀವನ ರಕ್ಷಣೆಯ ಜವಾಬ್ದಾರಿಯನ್ನೂ ಸರ್ಕಾರವೇ ಹೊರಲಿ

ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ನೀಲಿ ನಕ್ಷೆಯನ್ನು ಸಿದ್ದಪಡಿಸಿಕೊಂಡು ತೆರವು ಮುಂದಾಗಿದ್ದಾರೆ. ಕಾರ್ಯಾಚರಣೆಗೆ

ಆದರೆ, ಅರಣ್ಯ ಇಲಾಖೆಯ ಈ ತೆರವು ಕಾರ್ಯಾಚರಣೆಯಲ್ಲಿ ಕೇವಲ ಸಣ್ಣ ಸಣ್ಣ ರೈತರ ಭೂಮಿಗಳೇ ಗುರಿಯಾಗಿವೆಯೇ ಹೊರತು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಈ ತೆರವು ಕಾರ್ಯಾಚರಣೆಯಿಂದಾಗಿ ಕಾಡಂಚಿನಲ್ಲಿ 2-3 ಎಕರೆ ಭೂಮಿಯಲ್ಲಿ ಕೃಷಿ ಮಾಡುವ, ಮನೆಕಟ್ಟಿಕೊಂಡು ವಾಸಿಸುವ ಬಡಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ದಶಕಗಳಿಂದ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರ ಭೂಮಿಯನ್ನೂ ಸರ್ಕಾರ ಕಿತ್ತುಕೊಂಡರೆ ಅವರು ಜೀವನ ಸಾಗಿಸುವುದಾದರೂ ಹೇಗೆ? ಅಲ್ಲದೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ತೋಟಗಳಲ್ಲಿ ಬೆಳೆದಿರುವ ಗಿಡಮರಗಳನ್ನೂ ಬುಡಸಮೇತ ಕಡಿದುಹಾಕುತ್ತಿದ್ದಾರೆ.

ಇದರಿಂದಾಗಿ ಅನೇಕ ಬಡಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕಾಡನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಅದರ ನೆರಳಲ್ಲಿಯೇ ಜೀವನ ಕಟ್ಟಿಕೊಂಡಿರುವ ಜನರ ರಕ್ಷಣೆಯೂ ಅಷ್ಟೇ ಮುಖ್ಯ. ನೂರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ಬಿಟ್ಟು ಬಡ ರೈತರನ್ನು ಗುರಿಯಾಗಿಸಿಕೊಂಡು ತೆರವು ಕಾರ್ಯಾಚರಣೆ ಮಾಡುವುದು ಎಷ್ಟು ಸರಿ? ಸರ್ಕಾರ ಈ ಬಗ್ಗೆ ಗಮನಹರಿಸಿ ಬಡ ರೈತರ ಜೀವನದ ರಕ್ಷಣೆಯ ಜವಾಬ್ದಾರಿ ಹೊರಲಿ.

-ಎನ್.ಆರ್.ಚೇತನ, ಮೈಸೂರು.

Tags:
error: Content is protected !!