ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 68,450 ಎಚ್‌ಐವಿ ಸೋಂಕಿನ ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕರ್ನಾಟಕವನ್ನು ಎಚ್‌ಐವಿ ಮುಕ್ತ ರಾಜ್ಯವನ್ನಾಗಿಸಬೇಕು ಎಂದು ಸರ್ಕಾರ ಸೋಂಕಿನ ನಿಯಂತ್ರಣಕ್ಕೆ ಎಷ್ಟೇ ಜಾಗೃತಿ ಮೂಡಿಸಿದರೂ ವರ್ಷದಿಂದ ವರ್ಷಕ್ಕೆ ಎಚ್ ಐವಿ ಪ್ರಕರಣಗಳು ಹೆಚ್ಚಾಗುತ್ತಿವೆ.
1986ರಲ್ಲಿ ದೇಶದಲ್ಲಿ ಮೊದಲ ಎಚ್‌ಐವಿ ಸೋಂಕು ಪತ್ತೆಯಾಗಿತ್ತು. ಅದೇ ಸಂದರ್ಭದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮವಹಿಸಿ ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲಿ ಇಂದು ಇಷ್ಟರ ಮಟ್ಟಿಗೆ ಈ ಸೋಂಕು ಹರಡುತ್ತಿರಲಿಲ್ಲ.
ವಿಶ್ವದ ಎಚ್‌ಐವಿ ಸೋಂಕಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಕರ್ನಾಟಕದಲ್ಲಿಯೇ 2.28 ಲಕ್ಷ ಮಂದಿ ಸೋಂಕಿತರಿರು ವುದು ಆಘಾತಕರ ಸಂಗತಿ.
ಲೈಂಗಿಕ ಕ್ರಿಯೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಈ ಸೋಂಕನ್ನು ತಡೆಗಟ್ಟಬಹುದು ಎಂದು ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ, ಎಚ್‌ಐವಿ ಸೋಂಕಿನಿಂದ ಗುಣಮುಖರಾಗಲು ಯಾವುದೇ ಔಷಧ ಲಭ್ಯವಿಲ್ಲ ಎಂದು ಜನರಿಗೆ ಮನದಟ್ಟು ಮಾಡಿಸಿದ್ದರೂ ಜನರು ಎಚ್ಚೆತುಕೊಳ್ಳುತ್ತಿಲ್ಲ. ಇನ್ನು ಮುಂದಾದರೂ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತರಾಗಿ ಸೋಂಕಿನ ನಿಯಂತ್ರಣಕ್ಕೆ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕಿದೆ.
-ಹೊ.ನಂ. ಅಂಕರಾಜು, ಮೈಸೂರು.