Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಣ್ಣು ಮಾರುವ ಚಿಕ್ಕಮರಮ್ಮಳಿಗೆ ಕಾಲು ನಡಿಗೆಯೇ ದೇವರು

ಚಳಿ, ಮಳೆ, ಬಿಸಿಲು.. ಏನೇ ಇದ್ದರೂ ಇವರ ಪಯಣ ಮಾತ್ರ ನಿರಂತರ. ಊರಿಂದೂರಿಗೆ ಮಾತ್ರ ಬಸ್ಸಿನಲ್ಲಿ ಓಡಾಡುವ ಚಿಕ್ಕಮರಮ್ಮ ಅವರದ್ದು ಊರಿನ ಒಳಗೆಲ್ಲಾ ಪಾದಯಾತ್ರೆಯಷ್ಟೇ. ದಿನಕ್ಕೆ ಹದಿನೈದು-ಇಪ್ಪತ್ತು ಕಿಲೋಮೀಟರ್ ಗಳು…ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ನಡೆದುಹೋಗುವ ಇವರ ದೈಹಿಕ ಮನೋಬಲ ಅಚ್ಚರಿಯ ವಿಷಯ

• ಸಿರಿ ಮೈಸೂರು
ದಿನವೂ ನಸುಕಿನ ಜಾವದಲ್ಲಿ, ಮೈಕೊರೆವ ಚಳಿ ಯಲ್ಲಿ, ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರುವಾಗ ಮನೆಯಿಂದ ಎದ್ದು ಹೊರಡುವ ಇವರು ಆನಂತರ ಮಾಡುವುದೆಲ್ಲಾ ನಗರ ಪರ್ಯಟನೆ. ಬದುಕಿನ ಸಂಧ್ಯಾಕಾಲದಲ್ಲಿ, ಮನೆಯಲ್ಲಿ ಕುಳಿತು ಕಾಲ ಹಾಕಿದರೆ ದಣಿದ ದೇಹಕ್ಕೆ ಕೊಂಚ ಆರಾಮ ಎನಿಸುವ ಈ ವಯಸ್ಸಿನಲ್ಲೂ ಇವರದ್ದು ಜೀವನೋಪಾಯದ ಸಲುವಾಗಿ ಬಿಡುವಿಲ್ಲದ ದಿನಚರಿ, ಆಕೆಯ ಮನಸ್ಸಿನಷ್ಟೇ ಮಾಗಿರುವ ಹಣ್ಣುಗಳು, ಜೀವನದ ಆಳ ಅಗಲ ಕಂಡ ಕಣ್ಣುಗಳು, ಮುಗ್ಧ ನಗು, ಆಕೆಯ ಅನುಭವಗಳ ಅಗಾಧತೆ ಯನ್ನು ಸಾರಿ ಹೇಳುವ ಮಾತುಗಳು. ಇವೆಲ್ಲವನ್ನೂ ತನ್ನೊಡಗೂಡಿಸಿ ಕೊಂಡಿರುವ ಅಪರೂಪದ ಹಾಗೂ ಸಾಮಾನ್ಯರಾಗಿಯೂ ಅಸಾಮಾನ್ಯರಾದ ವ್ಯಕ್ತಿ ಚಿಕ್ಕಮರಮ್ಮ.

ಇಲವಾಲದಿಂದಾಚೆಗೆ ಚಿಕ್ಕನಹಳ್ಳಿಯಲ್ಲಿರುವ ಚಿಕ್ಕಮರಮ್ಮ ಅವರ ಬದುಕು ಕೇಳಲೇಬೇಕಾದ ಕಥೆಯಂತಹದ್ದು. ಆ ಊರಿನಿಂದ ದಿನವೂ ಬೆಳಿಗ್ಗೆ ನಾಲ್ಕೂವರೆ ಗಂಟೆಗೇ ಬಸ್ಸನನ್ನೇರಿ ಮೈಸೂರಿನ ದಾರಿ ಹಿಡಿಯುವ ಚಿಕ್ಕಮರಮ್ಮ ಬಂದಿಳಿಯುವುದು ದೊಡ್ಡ ಗಡಿಯಾರದ ಬಳಿ. ಅಲ್ಲಿ ತನಗೆ ಬೇಕಾದ ಹಣ್ಣುಗಳನ್ನು ಬಹಳ ಆಸ್ಥೆಯಿಂದ ಆಯ್ದುಕೊಳ್ಳುತ್ತಾರೆ. ಆ ಹಣ್ಣುಗಳೇ ಆಕೆಗೆ ಜೀವನೋಪಾಯ. ಅಷ್ಟೂ ಹಣ್ಣುಗಳನ್ನು ಮಂಕರಿಯೊಂದಕ್ಕೆ ಹಾಕಿಕೊಂಡ ನಂತರ ಶುರುವಾಗುತ್ತದೆ ಇವರ ವ್ಯಾಪಾರ-ವಹಿವಾಟು, ಬೇಕಾದ ಕಡೆಗೆಲ್ಲಾ ಬಸ್ಸಿನಲ್ಲಿ ಹೋಗುವ ಚಿಕ್ಕಮರಮ್ಮ ಬಸ್ಸಿಳಿದ ನಂತರ ಮೈಲಿಗಟ್ಟಲೇ ನಡೆದೇ ಹಣ್ಣು ಬಿಕರಿ ಮಾಡುತ್ತಾರೆ. ಸೇಬು, ಬಾಳೆಹಣ್ಣು, ಸೀಬೆಕಾಯಿ, ಖರ್ಬೂಜ, ಮೂಸಂಬಿ, ದಾಳಿಂಬೆಯಂತಹ ಬಣ್ಣಬಣ್ಣದ ಹಣ್ಣುಗಳಲ್ಲಿ ಏನಿದೆ ಎಂದು ಕೇಳಿದರೆ ನಾವುಗಳು ?ಪ್ರೋಟೀನ್, ವಿಟಮಿನ್, ನ್ಯೂಟ್ರಿಯೆಂಟ್? ಎನ್ನುತ್ತೇವೆ. ಆದರೆ ಚಿಕ್ಕಮರಮ್ಮ ಮಾತ್ರ ಚಿಕ್ಕದಾಗಿ ‘ ಜೀವನ’ ಎನ್ನುತ್ತಾರೆ.

ಅಂದಹಾಗೆ ಚಿಕ್ಕಮರಮ್ಮನವರ ಕುಟುಂಬದ ಕಥೆ ಬಹಳ ಆಸಕ್ತಿದಾಯಕವಾದುದು. ಈಕೆ ಮೂಲತಃ ಹೆಳವ ‘ಎಂಬ ಜನಾಂಗಕ್ಕೆ ಸೇರಿದವರು. ಈ ಜನಾಂಗದವರು ಬದುಕು ನಡೆಸಲು ಏನು ಮಾಡುತಿದ್ದರು ಎಂಬುದೊಂದು ಸ್ವಾರಸ್ಯಕರ ಸಂಗತಿ. ತಾವು ಇದ್ದ ಹಳ್ಳಿ ಅಥವಾ ಪಟ್ಟಣದ ಜನರೆಲ್ಲಾ ಹೆಳವರಿಗೆ ಚಿರಪರಿಚಿತ. ಈಗ ಬದುಕಿರುವವರು ಮಾತ್ರವಲ್ಲದೆ ಹಿಂದೆ ಇದ್ದು ಹೋದವರ ಕಥೆಗಳೆಲ್ಲವೂ ಇವರಿಗೆ ತಮ್ಮದೇ ಎಂಬಷ್ಟು ಪರಿಚಿತ. ಇಷ್ಟೆಲ್ಲಾ ತಿಳಿದುಕೊಂಡು ಅವರು ಏನು ಮಾಡುತ್ತಿದ್ದರು? ಕಥೆ ಕಟ್ಟಿ ಹಾಡುತ್ತಿದ್ದರು. ಹೌದು..ಹೀಗೆ ಊರಿನ ಎಲ್ಲ ಕುಟುಂಬ ದವರ, ಎಲ್ಲ ತಲೆಮಾರಿನ ಕುಡಿಗಳ ಕಥೆಗಳೆಲ್ಲವನ್ನೂ ಜಾನಪದ ಹಾಡಿನಲ್ಲಿ ಹೇಳುವ ಕಲೆ ಹೆಳವರಿಗೆ ಸಿದ್ಧಿಸಿತ್ತು. ಇದನ್ನು ಕರತಲಾಮಲಕಗೊಳಿಸಿಕೊಂಡ ಈ ಜನಾಂಗದವರು ಇದನ್ನೇ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಯಾವುದಾದರೂ ಮನೆಯಲ್ಲಿ ಯಾರಾದರೂ
ಅಸುನೀಗಿದಾಗಲೋ ಅಥವಾ ಇನ್ಯಾವುದೋ ಸಂದರ್ಭದಲ್ಲೋ ಹೋಗಿ ಹಾಡನ್ನೆಲ್ಲಾ ಒಪ್ಪಿಸಿ ಬರುತ್ತಿದ್ದ ಹೆಳವರಿಗೆ ಅವರ ಮನೆಯವರು ಕೊಟ್ಟದ್ದೇ ಜೀವನೋಪಾಯ. ಹೀಗೆ ಆಗಿನ ಕಾಲದಲ್ಲಿ ಅವರ ಜೀವನ ಅವರ ಕಸುಬಿನಿಂದ ಹೇಗೋ ನಡೆಯುತ್ತಿತ್ತು. ಈ ವಿಶಿಷ್ಟ ಜನಾಂಗಕ್ಕೆ ಸೇರಿದವರು ಚಿಕ್ಕಮರಮ್ಮ. ತಮಗೆ ಬುದ್ಧಿ ತಿಳಿದಾಗಿನಿಂದಲೂ ಇದೇ ಕೆಲಸ ಮಾಡುತ್ತಾ ಬಂದಿರುವ ಚಿಕ್ಕಮರಮ್ಮ ಹಣ್ಣು ಮಾರಾಟ ಮಾಡುತ್ತಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ತಮ್ಮ ಮಕ್ಕಳ ಬದುಕನ್ನು ಕಟ್ಟಿಕೊಟ್ಟಿದ್ದಾರೆ, ತಮ್ಮ ಮಕ್ಕಳು ಮೊಮ್ಮಕ್ಕಳ ಬದುಕನ್ನು ಕಟ್ಟಿಕೊಡಲು ದಾರಿಮಾಡಿಕೊಟ್ಟಿದ್ದಾರೆ. ‘ದಿನಾ ಬೆಳಿಗ್ಗೆ ಎದ್ದು ಈಚೋದ್ರೆ, ಕೆಲ್ಸ ಮಾಡುದ್ರೆ ಅಲ್ಲೇನವ್ವಾ ಒಸೀನಾರಾ ಗಿಟ್ಟದು? ಇಲ್ಲ ಅಂದ್ರೆ ಯಾರ್ ಬತ್ತಾರೆ ಯೋಳಿ’ ಎನ್ನುತ್ತಾ ತಮ್ಮ ಕಥೆ ಹೇಳಿಕೊಳ್ಳುವ ಚಿಕ್ಕಮರಮ್ಮ ಒಂದು ಕ್ಷಣ ಸ್ವಾಭಿಮಾನ, ಸ್ವಾವಲಂಬನೆಯ ಕುರುಹಾಗಿ ಕಾಣುತ್ತಾರೆ. ಓದು-ಬರಹ ತಿಳಿಯದಿದ್ದರೂ ಬದುಕು ಬಂದಂತೆಲ್ಲಾ ಸ್ವೀಕರಿಸಿ ‘ನಾನಾ-ನೀನಾ ನೋಡೇಬಿಡ್ತೀನಿ’ ಎಂಬ ಅಚಲ ಛಲ ಹೊತ್ತು ನಿಂತು ನೋಡುವವರನನ್ನು ನಿಬ್ಬೆರಗಾಗಿಸುತ್ತಾರೆ.

ಚಳಿ, ಮಳೆ, ಬಿಸಿಲು..ಏನೇ ಇದ್ದರೂ ಇವರ ಪಯಣ ಮಾತ್ರ ನಿರಂತರ. ಊರಿಂದೂರಿಗೆ ಮಾತ್ರ ಬಸ್ಸಿನಲ್ಲಿ ಓಡಾಡುವ ಚಿಕ್ಕಮರಮ್ಮ ಅವರದ್ದು ಊರಿನ ಒಳಗೆಲ್ಲಾ ಪಾದಯಾತ್ರೆಯಷ್ಟೇ. ದಿನಕ್ಕೆ ಹದಿನೈದು-ಇಪ್ಪತ್ತು ಕಿಲೋಮೀಟರ್ ಗಳು. ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ನಡೆದುಹೋಗುವ ಇವರ ದೈಹಿಕ ಸಾಮರ್ಥ್ಯ ಅತೀವ ಆಶ್ಚರ್ಯ ತರಿಸಿದರೆ ಇವರ ಮನೋಬಲ ನಮ್ಮನ್ನು ಇನ್ನೂ ಹೆಚ್ಚು ನಿಬ್ಬೆರಗಾಗಿಸುತ್ತದೆ. ಕೆಲಸಕ್ಕೆಂದು ಸೂರ್ಯ ಹುಟ್ಟುವ ಮೊದಲೇ ಮನೆ ಬಿಡುವ ಇವರು ಮತ್ತೆ ಗೂಡಿಗೆ ಮರಳುವಾಗಗಾಗಲೇ ಬಹಳ ಸಮಯವಾಗಿರುತ್ತದೆ. ದುಡಿಮೆಯಲ್ಲೇ ದಿನ ಕಳೆದುಹೋಗಿರುತ್ತದೆ. ತಮ್ಮ ಕುಟುಂಬಕ್ಕಾಗಿ ಒಂದು ಹೆಜ್ಜೆ ಮುಂದೆಯೇ ಹೋಗಿ ತಮ್ಮ ಶ್ರಮವನ್ನೆಲ್ಲಾ ಖರ್ಚು ಮಾಡಿ ನಾಲ್ಕು ಕಾಸು ಸಂಪಾದಿಸುವ ಚಿಕ್ಕಮರಮ್ಮ ನಿಜವಾಗಿಯೂ ಇಂದಿನ ಪೀಳಿಗೆಗೆ ಸ್ವಾವಂಲಬನೆ ಹಾಗೂ ಛಲದ ಪಾಠ ಹೇಳಿಕೊಡಬಲ್ಲವರು. ಇಷ್ಟು ವರ್ಷ ಇಷ್ಟು ಕಷ್ಟಪಟ್ಟು ಸಂಪಾದಿಸಿಯೂ ಕೇವಲ ಆ ದಿನಕ್ಕಾಗುವಷ್ಟೇ ದುಡಿಮೆ ಬರುವ ಕಾರಣ ಚಿಕ್ಕಮರಮ್ಮ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತಲೇ ಇದ್ದಾರೆ. ಮಕ್ಕಳಿದ್ದಾರೆ. ಮನೆಯಲ್ಲಿ ಕೂತಿರ್ತೇನೆ. ಅವರೇ ತಂದು ಹಾಕಲಿ ಬಿಡು ಎಂಬ ಧೋರಣೆ ಮಾತ್ರ ಆಕೆಗೆಂದೂ ಬಂದೇ ಇಲ್ಲ. ‘ಕೈಲಾಗೋವರ್ಗೂ ಕೆಲ್ಸ ಮಾಡೇಕಲ್ವೇ ‘ಎಂದು ನಗುತ್ತಾ ನಿಜವಾಗಿಯೂ ಪರಿಶ್ರಮ ಎಂದರೇನು ಎಂದು ಹೇಳಿಕೊಡುತ್ತಾರೆ ಚಿಕ್ಕಮರಮ್ಮ.

sirimysuru18@gmail.com

Tags: