ಹಾಸನ: ಹಾಸನ ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿಂದು ಹಾಸನಾಂಬೆ ಜಾತ್ರೆ-2024ರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್ ಅವರು, ಹಾಸನದ ಆರಾಧ್ಯ ದೇವತೆಯಾದ ಹಾಸನಾಂಬ ದೇವಿಯ ಜಾತ್ರಾ ಹಾಗೂ ದರ್ಶನ ಮಹೋತ್ಸವವು ಅಕ್ಟೋಬರ್.24ರಿಂದ 11 ದಿನಗಳ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ತಾಯಿಯ ಉತ್ಸವದಲ್ಲಿ ಸುಮಾರು 13ರಿಂದ 15 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ, ಹಾಸನ ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸಿಇಓ ಪೂರ್ಣಿಮಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಹಾಸನಾಂಬೆ ತಾಯಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡಲಿದ್ದಾಳೆ. ಹಾಸನಾಂಬೆ ದೇವಿ ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಲಕ್ಷಾಂತರ ಜನರಿಗಿದೆ. ಆದ್ದರಿಂದ ಹಾಸನ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಜನರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ.