Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜಿಲ್ಲೆಯ ರೈತರಿಗೆ ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ: ಕೆ ಮಾಲತಿ

ಮಂಡ್ಯ: ಜಿಲ್ಲೆಯಲ್ಲಿರುವ ಎಲ್ಲಾ ಭತ್ತ ಬೆಳೆಗಾರರಿಗೆ ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆಯ ಬಗ್ಗೆ ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕಿನ ಸರಿಸುಮಾರು 45,000 ಭತ್ತ ಬೆಳೆಯುವ ರೈತರಿಗೆ ಕಡಿಮೆ ಅವಧಿಯಲ್ಲಿ ಗುಂಪು ಕರೆ (Group Call)ಯ ಮೂಲಕ ಕೃಷಿ ಇಲಾಖೆ ಮಂಡ್ಯ ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಕೆ ಮಾಲತಿ ಅವರು ಮಾಹಿತಿ ನೀಡಿದರು.

ಅವರು ಇಂದು (ಆ.10) ಕೃಷಿ ಇಲಾಖೆಯಿಂದ ಎಲ್ಲಾ ಭತ್ತ ಬೆಳೆಗಾರರಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದೊಂದಿಗೆ “ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆ” ಬಗ್ಗೆ ಭತ್ತ ಬೆಳೆಯುವ ರೈತರಿಗೆ ಗುಂಪು ಕರೆ ಮಾಡಿ ಸಂವಾದ ನಡೆಸಿದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ ಜಲಾಶಯದಿಂದ ಕೃಷಿ ಬೆಳೆಗಳಿಗೆ ನೀರು ಬಿಡಲಾಗಿದೆ. ರೈತರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜಗಳನ್ನು (ಭತ್ತ, ರಾಗಿ. ದ್ವಿದಳ ಧಾನ್ಯ ಹಾಗೂ ಇತರೆ) ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಒಗಳ ಮುಖಾಂತರ ಸಹಾಯಧನದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಹಾಗೂ ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಜಿಲ್ಲೆಗೆ ಶಿಫಾರಸ್ಸು ಮಾಡಲಾದ ತಳಿಗಳನ್ನು ಮಾತ್ರ ಬಳಕೆ ಮಾಡಬೇಕಾಗಿ ತಿಳಿಸಿದರು.

ನಮ್ಮ ಮಂಡ್ಯ ಜಿಲ್ಲೆಯ ಭತ್ತದ ಇಳುವರಿ ಈಗಾಗಲೇ ರಾಜ್ಯದ ಸರಾಸರಿಗೆ ಹೋಲಿಸಿದರೆ ಜಿಲ್ಲೆ ಮತ್ತು ತಾಲ್ಲೂಕುಗಳ ಇಳುವರಿ ಕಡಿಮೆ ಇರುವುದು ಕಂಡಬಂದಿದ್ದು, ಇದಕ್ಕೆ ಮುಖ್ಯ ಕಾರಣಗಳು ಅತಿಯಾದ ಯೂರಿಯಾ ಬಳಕೆ. ಸಮತೋಲನ ಪೋಷಕಾಂಶಗಳನ್ನು ಬಳಕೆ ಮಾಡದೆ ಇರುವುದು ಹಾಗೂ ಯತ್ತೇಚ್ಚವಾಗಿ ನೀರನ್ನು ಹರಿಸುವುದರಿಂದ, ಮಣ್ಣಿನ ಸತ್ವ ಕಳೆದುಕೊಂಡಿದೆ. ನೀರನ್ನು ಎತ್ತೇಚ್ಚವಾಗಿ ಯಾವಾಗಲೂ ನಿಲ್ಲಿಸುವುದರಿಂದ ತಂಡ ಹೊಡೆಯುವ ಸಂಖ್ಯೆ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಜೊತೆಗೆ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಲ್ಲದೆ ಮಣ್ಣಿನಲ್ಲಿ ಸಾವಯವ ಅಂಶ, ಜಿಂಕ್, ಬೋರನ್ ಪೊಟ್ಯಾಷ್ ಕೊರತೆ ಕಂಡುಬಂದಿರುತ್ತದೆ. ಆದ್ದರಿಂದ ಇಳುವರಿ ಹೆಚ್ಚಿಸಲು ಜೈವಿಕ ಗೊಬ್ಬರಗಳು ಮತ್ತು ಲಘು ಪೋಷಕಾಂಶಗಳ ಬಳಕೆ ಮಾಡಬೇಕು ಎಂದರು.

ಜೈವಿಕ ಗೊಬ್ಬರಗಳಾದ ಅಶೋಸ್ಟೆರಿಲಂ, ಸೂಕ್ಷ್ಮಾಣು ಜೀವಿಗಳ ಸಮೂಹ ಒಳಗೊಂಡ ಜೀವಾಣು ಗೊಬ್ಬರ (ಜಿಂಕ್, ಬೋರಾನ್ ಮತ್ತು ಜಿಪ್ಪಂ) ಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಕಾಲಕಾಲಕ್ಕೆ ಭೂಮಿಗೆ ಸೇರಿಸಿ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ತಿಳಿಸಿದರು.

ತದ ನಂತರ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಆಶಾ ಎನ್ ಎನ್ ಅವರು ಮಾತನಾಡಿ ಅವೈಜ್ಞಾನಿಕ ಕೃಷಿ ಯಥೇಚ್ಛವಾದ ರಾಸಾಯನಿಕಗಳ ಬಳಕೆ, ಮಣ್ಣಿನ ಸವಕಳಿಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹಾಗಾಗಿ ಮಣ್ಣಿನ ಆರೋಗ್ಯ ರಕ್ಷಣೆಯ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ಬೇಕಾಗಿರುವ ಜೀವಾಣು ಗೊಬ್ಬರಗಳ ಉಪಯೋಗಗಳ ಅರಿವು ಮೂಡಿಸುವುದು ಅಗತ್ಯ ಎಂದರು.

ಜೈವಿಕ ಗೊಬ್ಬರಗಳು ಉಪಯುಕ್ತ ಸೂಕ್ಷ್ಮಾಣು ಜೀವಿಗಳನ್ನು ಒಳಗೊಂಡಿರುವ ಗೊಬ್ಬರಗಳಾಗಿದ್ದು, ಇವು ಗಿಡಗಳಿಗೆ ಪೋಷಕಾಂಷಗಳನ್ನು ಒದಗಿಸುವುದರ ಜೊತೆಗೆ ಗಿಡಗಳ ಬೆಳೆಗಳ ರೋಗ ಮತ್ತು ಕೀಟಗಳ ನಿರೋಧಕತೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಸಸ್ಯ ಬೆಳೆವಣಿಗೆಗೆ ಬೇಕಾಗಿರುವ ಸಸ್ಯ ಪ್ರಚೋದಕಗಳನ್ನು ಉತ್ಪಾದನೆ ಮಾಡುತ್ತದೆ. ಮಣ್ಣಿನ ರಚನೆಯಲ್ಲೂ ಹಾಗೂ ಮಣ್ಣಿನ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವುದರೊಂದಿಗೆ ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಬೇರೆ ಬೇರೆ ಜೈವಿಕ ಗೊಬ್ಬರಗಳನ್ನು ಉಪಯೋಗಿಸುವುದಕ್ಕಿಂತ ಸೂಕ್ಷ್ಮಾಣು ಜೀವಿಗಳ ಸಮೂಹವನ್ನೊಳಗೊಂಡ ಜೀವಾಣು ಗೊಬ್ಬರಗಳನ್ನು ಉಪಯೋಗಿಸುವುದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ. ಅದಕ್ಕೆ ತಗಲುವ ವೆಚ್ಚವನ್ನು ಉಳಿಸಬಹುದಾಗಿದೆ. ಶೇ. 25- 30 ರಷ್ಟು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ 10-15 % ಹೆಚ್ಚಿನ ಪೋಷಕಾಂಶಯುಕ್ತ ಇಳುವರಿಯನ್ನು ಜೈವಿಕಗೊಬ್ಬರಗಳನ್ನು ಉಪಯೋಗಿಸುವುದರ ಮೂಲಕ ಸಾಧಿಸಬಹುದು. ಇದರಿಂದ ಮಣ್ಣಿನ ಸಂರಕ್ಷಣೆಯ ಜೊತೆಗೆ ಮನುಕುಲದ ರಕ್ಷಣೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ವಿವಿಧ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪೆರಿಲಂ, ಪಿ.ಎಸ್.ಬಿ. ಕೆ.ಎಸ್.ಬಿ. ಮೈಕೋರೈಜಾ, ಅಜೋಲ್ಲಾ ಎನ್.ಪಿ.ಕೆ Consorita. Carried based/Powder / – Rs 100/ಕೆಜಿ, ದ್ರವರೂಪದ ಜೀವಾಣುಗೊಬ್ಬರ Rs 200/ ಕಿಟ್, ಬೀಜೋಪಚಾರ 10 ಗ್ರಾಂ / ಕೆ.ಜಿ ಬೀಜಕ್ಕೆ, ಮಣ್ಣಿಗೆ – 2 ಕೆ.ಜಿ / 100 ಕೆ.ಜಿ ಗೊಬ್ಬರದ ಜೊತೆ ಬೆರೆಸಿ ಎರಚುವುದು ಎಂದು ಜೈವಿಕ ಗೊಬ್ಬರಗಳು ಮತ್ತು ಅವುಗಳ ಸದ್ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಂಡ್ಯ ವಲಯ ಸಂಶೋಧನಾ ಕೇಂದ್ರ ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ ತಿಮ್ಮೇಗೌಡ ಅವರು ಮಾತನಾಡಿ ಭತ್ತದ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಭತ್ತದಲ್ಲಿ ಸುಸ್ಥಿರ ಇಳುವರಿಯನ್ನು ಪಡೆಯಲು ಎಕರೆಗೆ 4 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದು ಅಥವಾ ಹಸಿರೆಲೆ ಗೊಬ್ಬರ ಗಿಡಗಳಾದ ಸಂಜೆ, ಅಪ್ಪಣಿಗೆ, ಹುರುಳಿ ಇತ್ಯಾದಿಗಳನ್ನು ಮಣ್ಣಿಗೆ ಸೇರಿಸಬೇಕು ಎಂದರು.

ಈಗಾಗಲೇ ಮುಂಗಾರು ತಡವಾಗಿದ್ದು, ಯಾವುದೇ ಕಾರಣಕ್ಕು ದೀರ್ಘಾವಧಿ ತಳಿಗಳನ್ನು ಬೆಳೆಯಬಾರದು. ಮಧ್ಯಮಾವಧಿ ತಳಿಗಳನ್ನು ಆಗಸ್ಟ್ ಕೊನೆಯವರೆಗೂ ನಾಟಿ ಮಾಡಬಹುದು ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಿ ಮಾಡುವುದಾದರೆ 110-115 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಗಳನ್ನು ಬೆಳೆಯುವುದು ಎಂದು ತಿಳಿಸಿದರು.

ನಾಟಿ ತಡವಾದಲ್ಲಿ ಸಾಂಪ್ರದಾಯಿಕ ನಾಟಿ ಪದ್ದತಿಗೆ ಬದಲಾಗಿ ನೇರ ಬಿತ್ತನೆಯನ್ನು ಕೈಗೊಳ್ಳವುದು ಉತ್ತಮ. ನೇರ ಬಿತ್ತನೆಯನ್ನು ಡಂ ಸೀಡರ್ ಮುಖಾಂತರ ಅಥವಾ ಕೂರಿಗೆ ಬಿತ್ತನೆ ಮೂಲಕ ಕೈಗೊಳ್ಳಬೇಕು. 18-21 ದಿನದ ಪೈರುಗಳನ್ನು ಸಾಮಾನ್ಯ ಮಣ್ಣಿನಲ್ಲಿ ಹಾಗೂ 28-30 ದಿನದ ಪೈರುಗಳನ್ನು ಕ್ಷಾರ ಅಥವಾ ಚೌಳು ಭೂಮಿಯಲ್ಲಿ ನಾಟಿ ಮಾಡುವುದು ಸರಿಯಾದ ಕ್ರಮವಾಗಿದೆ ಎಂದರು.

ಖರ್ಚಿನಲ್ಲಿ ಶೀಘ್ರವಾಗಿ ನಾಟಿ ಮಾಡಲು ಯಂತ್ರ ಚಾಲಿತ ನಾಟಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಭತ್ತದ ಅಧಿಕ ಇಳುವರಿಗಾಗಿ ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ನಾಟಿ ಮಾಡುವುದಕ್ಕೆ ಮುಂಚಿತವಾಗಿ 38.5 ಕೆ.ಜಿ 10: 26 : 26. 35.1 ಕೆ.ಜಿ ಯೂರಿಯಾ ಮತ್ತು 62.5 ಕೆ.ಜಿ ಸೂಪರ್ ಪಾಸ್ಟೆಟ್‌ನ್ನು ಒದಗಿಸಬೇಕು.

ನಾಟಿ ಮತ್ತು ನೇರ ಬಿತ್ತನೆ ಭತ್ತದಲ್ಲಿ ನಾಟಿ ಮಾಡಿದ 5 ದಿನಗಳೊಳಗೆ ಅಥವಾ ಬಿತ್ತನೆ ಮಾಡಿದ 3 ದಿನಗಳ ಒಳಗಾಗಿ ಉಬಯ ಪೂರ್ವ ಕಳೆನಾಶಕಗಳನ್ನು ಸಿಂಪಡಿಸಬೇಕು. ನಾಟಿ ಮಾಡಿದ 10 ದಿನಗಳವರೆಗೆ ನೀರು ಇಂಗಿದ ಒಂದು ದಿನದ ನಂತರ 1 ಅಂಗುಲದಷ್ಟು ನೀರನ್ನು ಕೊಡುವುದು ಹಾಗೂ ತದನಂತರ ಕಟಾವಿಗೆ 10 ದಿನದವರೆಗೆ ನೀರು ಇಂಗಿದ ಒಂದು ದಿನದ ನಂತರ 2 ಅಂಗುಲದಷ್ಟು ನೀರನ್ನು ಕೊಡುವುದು ಸೂಕ್ತ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನೀತ, ದೀಪಕ್, ಪ್ರತಿಭಾ ಉಪಸ್ಥಿತರಿದ್ದರು.

Tags: