Mysore
31
few clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಕೊನೆಗೂ ಶುರುವಾಯ್ತು ಯಶ್‍ ಅಭಿನಯದ ‘ಟಾಕ್ಸಿಕ್‍’

‘ಕೆಜಿಎಫ್‍ 2’ ಚಿತ್ರ ಬಿಡುಗಡೆಯಾಗಿ ಎರಡೂವರೆ ವರ್ಷಗಳಾಗಿವೆ. ಆ ಚಿತ್ರದ ನಂತರ ಮುಂದೇನು ಎಂಬ ಪ್ರಶ್ನೆಗೆ, ‘ಟಾಕ್ಸಿಕ್‍’ ಎಂದು ಯಶ್‍ ಈಗಾಗಲೇ ಉತ್ತರಿಸಿದ್ದಾರೆ. ಆದರೆ, ಈ ಚಿತ್ರದ ಮುಹೂರ್ತ ಯಾವಾಗ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಈಗ ಕೊನೆಗೂ ಉತ್ತರ ಸಿಕ್ಕಿದ್ದು, ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.

‘ಟಾಕ್ಸಿಕ್‍’ ಚಿತ್ರದ ಅಧಿಕೃತ ಘೋಷಣೆ ಜನವರಿ 08ರಂದು ಆಗಿತ್ತು. ಆದರೆ, ಚಿತ್ರೀಕರಣ ಯಾವಾಗಿನಿಂದ ಪ್ರಾರಂಭ ಎಂದು ಚಿತ್ರತಂಡ ಹೇಳಿರಲಿಲ್ಲ. ಹೀಗಿರುವಾಗಲೇ, ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಲಂಡನ್‍ನಲ್ಲಿ ಶುರುವಾಗಿದೆ ಮತ್ತು ಬಹುತೇಕ ಚಿತ್ರೀಕರಣ ಸದ್ದಿಲ್ಲದೆ ಆಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅದೆಲ್ಲ ಸುಳ್ಳು ಎಂದು ಮುಹೂರ್ತ ಮಾಡುವ ಮೂಲಕ ಚಿತ್ರತಂಡ ಘೋಷಿಸಿದೆ.

‘ಟಾಕ್ಸಿಕ್‍’ ಚಿತ್ರಕ್ಕಾಗಿ ಬೆಂಗಳೂರಿನ ಎಚ್‍.ಎಂ.ಟಿ ಫ್ಯಾಕ್ಟರಿಯಲ್ಲಿ ವಿಶೇಷ ಸೆಟ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲೇ ಚಿತ್ರದ ಮುಹೂರ್ತ ಸಹ ನಡೆದಿದೆ. ಸಾಮಾನ್ಯವಾಗಿ, ಗಣ್ಯರನ್ನು ಕರೆಸಿ ಕ್ಯಾಮೆರಾ ಸ್ವಿಚ್ ಆನ್‍ ಮಾಡುವುದು ಮತ್ತು ಕ್ಲಾಪ್ ಮಾಡಿಸುವುದು ವಾಡಿಕೆ. ಆದರೆ, ಈ ಚಿತ್ರಕ್ಕೆ ಲೈಟ್ ಬಾಯ್‍ ಒಬ್ಬರಿಂದ ಕ್ಲಾಪ್‍ ಮಾಡಿಸಲಾಗಿದೆ.

‘ಟಾಕ್ಸಿಕ್‍’ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ.

ಚಿತ್ರದಲ್ಲಿ ಯಶ್‍ ಜೊತೆಗೆ ಯಾರೆಲ್ಲಾ ನಟಿಸುತ್ತಾರೆ ಎಂಬ ವಿಷಯವನ್ನು ಚಿತ್ರತಂಡದವರು ಘೋಷಿಸಿಲ್ಲ. ಇದಕ್ಕೂ ಮುನ್ನ ಚಿತ್ರದ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದಲ್ಲದೆ ಶ್ರುತಿ ಹಾಸನ್‍, ಸಾಯಿಪಲ್ಲವಿ, ಕರೀನಾ ಕಪೂರ್‍, ನಯನತಾರಾ ಸೇರಿದಂತೆ ಸಾಕಷ್ಟು ನಟಿಯರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಅಂತಿಮವಾಗಿ ಯಾರೆಲ್ಲಾ ಚಿತ್ರದಲ್ಲಿ ಇರುತ್ತಾರೆ ಎಂಬುದನ್ನು ಚಿತ್ರತಂಡದವರು ಇನ್ನಷ್ಟೇ ಘೋಷಿಸಬೇಕು.

ಇನ್ನು, ಇದಕ್ಕೂ ಮೊದಲು 2025ರ ಏಪ್ರಿಲ್‍ 10ರಂದು ಬಿಡುಗಡೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇನ್ನು ಅಂದುಕೊಂಡ ದಿನಾಂಕಕ್ಕೆ ಕೇವಲ ಎಂಟು ತಿಂಗಳುಗಳು ಇರುವುದರಿಂದ, ಚಿತ್ರ ತಡವಾಗಿ ಶುರುವಾಗುತ್ತಿರುವುದರಿಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅದೇ ದಿನ ಪ್ರಭಾಸ್‍ ಅಭಿನಯದ ‘ದಿ ರಾಜಾ ಸಾಬ್‍’ ಚಿತ್ರ ಬಿಡುಗಡೆ ಆಗುತ್ತಿರುವುದರಿಂದ ಅಂದು ಚಿತ್ರ ಬಿಡುಗಡೆ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

Tags:
error: Content is protected !!