ಚಾಮರಾಜನಗರ: ಇದೇ ಆಗಸ್ಟ್.10ರಂದು ಭರಚುಕ್ಕಿ ಜಲಪಾತದಲ್ಲಿ ಕಲರ್ ಪುಲ್ ಜಲಪಾತೋತ್ಸವ ನಡೆಸಲು ಚಾಮರಾಜನಗರ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
ಭಾರೀ ಮಳೆಯಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು, ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಇದಲ್ಲದೇ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯದಿಂದಲೂ ನೀರನ್ನು ಬಿಟ್ಟಿದ್ದು, ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ,
ಈ ಹಿನ್ನೆಲೆಯಲ್ಲಿ ಕಾವೇರಿ ಹಾಗೂ ಕಪಿಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ತನ್ನ ವ್ಯಾಪ್ತಿಯುದ್ದಕ್ಕೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಭರಚುಕ್ಕಿ ಜಲಪಾತ ರಭಸವಾಗಿ ಧುಮ್ಮಿಕ್ಕುತ್ತಿದ್ದು, ನೋಡುಗರ ಮೈನವಿರೇಳಿಸಿದೆ. ಈ ಹಿನ್ನೆಲೆಯಲ್ಲಿ ಇದೇ ಆಗಸ್ಟ್.10ರಂದು ಚೆಲುವ ಚಾಮರಾಜನಗರ ಎಂಬ ಪರಿಕಲ್ಪನೆಯಡಿ ಜಿಲ್ಲೆಯ ಪ್ರವಾಸೋದ್ಯಮವನ್ನು ಪ್ರಗತಿಯತ್ತ ಕೊಂಡೊಯ್ಯಲು ಭರಚುಕ್ಕಿ ಜಲಪಾತೋತ್ಸವ ನಡೆಸಲು ಚಾಮರಾಜನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಸ್ವಚ್ಛಂದ ಪ್ರಕೃತಿ ನಡುವೆ ರಭಸವಾಗಿ ಧುಮ್ಮಿಕ್ಕುತ್ತಿರುವ ಭರಚುಕ್ಕಿ ಜಲಪಾತದಲ್ಲಿ ಜಲಪಾತೋತ್ಸವ ಆಯೋಜನೆಗೆ ಸಿದ್ಧತೆ ಕೈಗೊಂಡಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.
ಈ ಜಲಪಾತೋತ್ಸವವನ್ನು ನಾಲ್ಕನೇ ಬಾರಿಗೆ ಆಯೋಜನೆ ಮಾಡಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ.