Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನಾ ಕಂಡ ಬಾಬ್ ಮಾರ್ಲಿ: ಮನವೆಲ್ಲವೂ ಬಯಲಾಗಿದೆ

ಮತ್ತೊಬ್ಬರ ಸಂಸ್ಕೃತಿ ಕೀಳಾಗಿ ಕಾಣುವವರ ಕಣ್ಣೆರೆಸುವ ನಾಟಕ

              • ಬಿ.ಆರ್.ಶ್ರುತಿ

ಇತ್ತೀಚೆಗೆ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರ ತಲುಪಿದಾಗ ಸಭಾಂಗಣದ ಹೊರಗೆ ಅಲ್ಲಲ್ಲಿ ‘ಬಾಡಿಗೆಗೆ ಮನೆ ಬೇಕಿದೆ’ ಅಂತ ಬರೆದು ನೇತು ಹಾಕಿದ ಬೋರ್ಡುಗಳು ಕಂಡವು. ಇದೇಕೆ ಕಲಾಕ್ಷೇತ್ರದಲ್ಲಿ ಹೀಗೆ ಹಾಕಿದ್ದಾರೆ ಎಂದುಕೊಳ್ಳುತ್ತಾ, ‘ಬಾಬ್ ಮಾರ್ಲಿ ಫಂ ಕೋಡಿಹಳ್ಳಿ ‘(ನಾಟಕ)ಯನ್ನು ಕಾಣಲು ಹೊರಟೆ.

ಮೊದಲಿಗೆ ರಂಗದ ಮೇಲೆ ಕೇಳಿಬಂದದ್ದು ನನ್ನನ್ನು ಕಾಡಿದ ಎನ್.ಕೆ. ಹನುಮಂತಯ್ಯನವರ ಮಾಂಸದಂಗಡಿಯ ನವಿಲು ಸಂಕಲನದ ಪದ್ಯ. ಪದ್ಯ ಓದುವ ಹುಡುಗಿ ಮತ್ತು ಹಾಡುವ ಬಾಬ್ ಮಾರ್ಲಿಯ ನಡುವಿನ ಮಾತುಕತೆಗಳಲ್ಲಿ ಶುರುವಾದ ನಮ್ಮ ಗುರುತು ಮತ್ತು ಅದನ್ನು ಮುಚ್ಚಿಟ್ಟುಕೊಳ್ಳುವ ಅನಿವಾರ್ಯಕ್ಕೆ ದೂಡುವ ಸಮಾಜ, ಹಿಂದಿನದನ್ನೆಲ್ಲ ಮುಚ್ಚಿಟ್ಟ ಮಾತ್ರಕ್ಕೆ ಆ ನೋವುಗಳನ್ನು ಮರೆಯಲಾಗದ ಹಿಂಸೆ, ಎಲ್ಲವನ್ನೂ ಹೇಳಿಕೊಂಡು ಹಗುರಾಗಲೂ ಆಗದ ಅಪನಂಬಿಕೆಗಳು, ಅಂತಃಕರಣವಿಲ್ಲದ ಕಿವಿಗಳು, ಮತ್ತೊಬ್ಬರ ಆಹಾರ ಮತ್ತು ಆಚರಣೆಗಳನ್ನು ಕೀಳಾಗಿ ಕಂಡು ತಮ್ಮದು ಮಾತ್ರ ಸಂಸ್ಕೃತಿ, ಸಂಸ್ಕಾರ ಎಂದುಕೊಳ್ಳುವವರ ಬೂಟಾಟಿಕೆಗಳನ್ನು ತೆರೆದಿಡುತ್ತಾ ಹೋಗುತ್ತದೆ.

ಮನೆ ಖಾಲಿ ಮಾಡಬೇಕೆಂಬ ಬೆದರಿಕೆ ಬಂದ ರಾತ್ರಿ, ಹೇಗೂ ಮರುದಿನ ಮನೆ ಖಾಲಿ ಮಾಡಿ ಹೊರಡಬೇಕಿರುವಾಗ ಅಷ್ಟು ದಿನಗಳಿಂದ ಒಂದೇ ಮನೆಯಲ್ಲಿದ್ದ ಮೂವರು ತಮ್ಮ ತಮ್ಮ ಕತೆಗಳನ್ನು ಹೇಳಿಕೊಂಡು ಬಯಲಾಗುತ್ತಾರೆ. ಸ್ವೀಟ್ ಕವರಿನಲ್ಲಿ ಶೀಕ್ ಕಬಾಬ್ ತರುವ, ಕಮಿಡಿಯನ್ ಆಗುವ ಕನಸಿನ ರೀಲ್ ಮಾಡುವ ಹುಡುಗ ಗೆಳೆಯರೊಂದಿಗೆ ಬಾಲ್ಯದಲ್ಲಿ ಬೇರೆಯವರ ಮನೆಯ ಹೊರಗೆ ಕುಳಿತು ಟಿವಿ ನೋಡುವ ದೃಶ್ಯ ನಮ್ಮ ಬಾಲ್ಯದ ಒಂದು ನೆನಪನ್ನು ಕಣ್ಣುಂದೆ ತರುತ್ತದೆ. ಮಿಂಚುಹುಳದ ಮಿಂಚಿನ ಮೋಹಿ ಹುಡುಗನ ಮಿಂಚುಹುಳ ಹಿಡಿಯುವ ಅಭ್ಯಾಸವೇ ಹೇಗೆ ಅವನ ಬಾಲ್ಯದ ಕರಾಳ ನೆನಪಾಗಿ ಕಾಡುತ್ತದೆ ಎಂದು ಹೇಳಿಕೊಳ್ಳುವಾಗ, ಆ ಮೂರು ಪಾತ್ರಗಳ ಅಭಿನಯ ಪ್ರೇಕ್ಷಕರನ್ನು ಸೆಳೆದಿಡುತ್ತದೆ.

ತನ್ನ ಹೆಸರಿನೊಂದಿಗೆ ಊರಿನ ಹೆಸರನ್ನೂ ಹೇಳಿಕೊಳ್ಳುವ ಬಾಬ್ ಮಾರ್ಲಿಗೆ ಆ ಊರು ಗುರುತಾಗಿ ಕೊಟ್ಟಿರುವುದು ಹಿಂಸೆ, ಶೋಷಣೆ ಮತ್ತು ನೋವನ್ನಷ್ಟೇ ಊರೆಂಬುದು ಎಲ್ಲರಿಗೂ ಮತ್ತೆ ಮತ್ತೆ ನೆನಪಿಸಿಕೊಂಡು ಮಧುರ ಬಾಲ್ಯವನ್ನು ಮೆಲುಕು ಹಾಕಿಸುವ ನೆನಪುಗಳ ಜೋಳಿಗೆಯೇ ಆಗಿರುವುದಿಲ್ಲ. ಮತ್ತೆ ಮತ್ತೆ ಬರೆ ಹಾಕುವ ಕೆಂಡದಂತಹ ಸುಡುವ ಗತವನ್ನು ಮೆಲುಕು ಹಾಕಲಾಗಲಿ, ಮತ್ತೊಬ್ಬರೆದುರಿಗೆ ದನಿ ಬಿಚ್ಚಿ ಬಯಲಾಗುವುದಾಗಲಿ, ದೀಪದ ಬಳಿ ಹೋಗಿ ಪತಂಗ ತನ್ನ ಅರ್ಧ ಸುಟ್ಟಿರುವ ರೆಕ್ಕೆಯನ್ನೇ ಮತ್ತೆ ಸುಟ್ಟುಕೊಳ್ಳುವಂತಹ ಸಂಕಟ. ಕವಿತೆ ಓದುವ ಹುಡುಗಿ ಅಸ್ಪೃಶ್ಯ’ ಎಂಬ ಪದ ಓದಿದಾಗಲೆಲ್ಲ ಅವನೊಮ್ಮೆ ಮಿಡುಕುತ್ತಾನೆ. ಅವನ ಕತೆಯನ್ನು ಬಿಚ್ಚಿಡುವಾಗ, ಅವನ ಒಪ್ಪಿಗೆಯಿಲ್ಲದೆಯೂ ಬಲವಂತವಾಗಿ ಎಳೆದೊಯ್ಯುವುದನ್ನು ತಡೆಯದ ಲಕ್ಷ್ಮೀದೇವಿ ಟೀಚರ್ ಮಾಡಿದ್ದನ್ನು ಒಂದು ಪಾತ್ರವಾಗಿಯೂ ಮಾಡಲಾರೆ ಎನ್ನುವ ಅವಳ ನಡೆ, ಚಿಕ್ಕ ಹುಡುಗನನ್ನು ಎಳೆದೊಯ್ದು ಬಲವಂತವಾಗಿ ಕುಳುವಾಡಿ ಕೆಲಸ ಮಾಡೆಂದು ಒಂದು ವೃತ್ತದೊಳಗೆ ಅವನನ್ನು ಸೀಮಿತಗೊಳಿಸುವ ಕ್ರೌರ್ಯಕ್ಕೆ ಮನಸ್ಸು ಮರುಗುತ್ತದೆ, ಅವನ ನೋವು ನಮ್ಮ ನೋವಾಗುತ್ತದೆ. ಚಂದ್ರ ನೀನಾಸಂ ಬಾಬ್ ಮಾರ್ಲಿಯ ಪಾತ್ರದಲ್ಲಿ ಜೀವಿಸಿದ್ದಾರೆ. ಆ ಮಗುವಿನ ಅಳು, ನಿರಾಕರಣೆಯ ನಡುವೆಯೂ ತಾವು ಹೇಳಿದಂತೆ ಅವನು ಕೇಳಬೇಕೆನ್ನುವ ಪ್ಯೂಡಲ್ ಮನಸ್ಥಿತಿಗಳ ಕುರಿತು ಆಕ್ರೋಶ ಹುಟ್ಟಿಸುತ್ತದೆ.

ನಾಳೆ ಮನೆ ಖಾಲಿ ಮಾಡಬೇಕು, ಇನ್ನು ಮಲಗೋಣ ಎಂದು ಮೂವರೂ ಮಲಗಿದಾಗ, ಅಯ್ಯೋ ಇವಳ ಕತೆ ಕೇಳದೆಯೇ ನಾಟಕ ಮುಗಿದು ಬಿಡುತ್ತೇನೋ ಎಂದುಕೊಳ್ಳುವಷ್ಟರಲ್ಲಿ ಹುಡುಗ ಹಳದಿ ಕಕ್ಕೆ ಹೂವಿನ ಬಗ್ಗೆ ಕೇಳಿ ಅವಳೊಳಗಿನ ಕತೆಯನ್ನು ತೆರೆಯುತ್ತಾನೆ. ಅವಳ ಊರು, ಆ ಉತ್ಸವ, ಆ ಕುಣಿತ, ಆ ತಮಟೆ ಸದ್ದು, ಆ ಹೂವುಗಳು ಎಂದು ಚಂದವಾಗಿ ಶುರುವಾದ ಅವಳ ಕತೆಯಲ್ಲೂ ದುಃಖ ಮಡುಗಟ್ಟಿ ನಮ್ಮೆದೆಗೆ ತಾಕುತ್ತದೆ. ಊರ ಚಿನ್ನದ ಕೊಕ್ಕಿನ ಹದ್ದುಗಳು ಹರಿದು ತಿಂದ ಅವಳ ಅಮ್ಮನ ಬದುಕು ಅವಳನ್ನು ಕಾಡುತ್ತದೆ. ಗುರುತ್ವದ ವಿಮೋಚನಾ ವೇಗಕ್ಕಿಂತಲೂ ಹೆಚ್ಚಿನ ವೇಗ ಬೇಕಾಗುವ ಊರಿನಿಂದ, ಗುರುತುಗಳಿಂದ ಕಳಚಿಕೊಳ್ಳುವ ಆ ಶಕ್ತಿಯೇ ಅವಳ ಜೀವಚೈತನ್ಯ. ಕುಣಿತ, ಆ ಕೈಗಳ ಚಲನೆ, ಪರದೆಯ ಮೇಲೆ ಮೂಡುವ ನೆರಳು, ಅವಳು ಕಂಡಿದ್ದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತವೆ.

ಮುಂದುವರಿದಿದ್ದೇವೆ ಎಂದುಕೊಳ್ಳುವ ಸಮಾಜದಲ್ಲಿ ಈಗಲೂ ತುಂಬಿರುವ ಅಸಹಿಷ್ಣುತೆ, ಆಹಾರ ಕುರಿತ ಸಾಂಸ್ಕೃತಿಕ ರಾಜಕಾರಣ, ರಕ್ತಮಾಂಸಗಳಿಂದಾದ ಮನುಷ್ಯರ ನಡುವೆ ಜಾತಿ ಕುರಿತಾದ ಮೇಲುಕೀಳು ಎಂಬ ಪೂರ್ವಗ್ರಹಗಳು, ಹಿಂದಿ ಭಾಷೆಯ ಹೇರಿಕೆ, ಅಂಚಿಗೆ ತಳ್ಳಲ್ಪಟ್ಟವರ ಆಚರಣೆಗಳ ಕುರಿತ ಅಸಹನೆ, ಗುರುತನ್ನು ತೆರೆದಿಡಲಾಗದ ಅಸಹಾಯಕತೆಗೆ ತಳ್ಳುವ, ತಿನ್ನುವುದು, ಉಡುವುದು, ಮಾತನಾಡುವುದರಲ್ಲೂ ಏಕರೂಪ ಸಂಸ್ಕೃತಿಯನ್ನು ಹೇರುವ ಹುನ್ನಾರಗಳು ಎಲ್ಲವನ್ನೂ ಬಾಬ್ ಮಾರ್ಲಿ ನಾಟಕ ಬಯಲಾಗಿಸುತ್ತದೆ.

ಉಸಿರೊಂದು ಕೊಳಲ ಹುಡುಕಿದೆ ಅನ್ನುವುದು ಅಂಚಿಗೆ ತಳ್ಳಲ್ಪಟ್ಟ ಮತ್ತು ದನಿ ಇಲ್ಲದ ಸಮುದಾಯಗಳ ಅಸ್ಮಿತೆಯ ಹುಡುಕಾಟದ ರೂಪಕದಂತೆನಿಸುತ್ತದೆ. ಆ ಮೂವರ ಮನವೆಲ್ಲವೂ ಬಯಲಾಗುತ್ತಾ ಪ್ರೇಕ್ಷಕರ ಮನಸ್ಸು ಭಾರವಾಗುತ್ತದೆ. “ನನ್ನ ಜಾಗ ಬೇರೆ ಅಲ್ಲವೇ?” ಎಂದು ಬಾಬ್ ಮಾರ್ಲಿ ಕೇಳುವಾಗ ಒಂದು ಸಮಾಜವಾಗಿ ನಮ್ಮ ತಲೆತಗ್ಗುತ್ತದೆ. ಇಡೀ ನಾಟಕದಲ್ಲಿ ಮೂರೂ ಪಾತ್ರಗಳು ರಂಗದ ಮೇಲೆ ಇರುತ್ತವೆ, ಮೊದಲಿನಿಂದ ಕೊನೆಯವರೆಗೆ ಒಂದೇ ಹುಮ್ಮಸ್ಸಿನಿಂದ ನಟಿಸಿದ್ದಾರೆ. ನಾಟಕದ ಆರಂಭದಿಂದಲೂ ಸೆಳೆಯುವ ಬಾಬ್ ಮಾರ್ಲಿ ಫಂ ಮಿಲ್ಟಿವೇ ಹಾಡುವ ಮನವೆಲ್ಲವೂ ಬಯಲಾಗಿದೆ ಹಾಡನ್ನು ಗುನುಗುತ್ತಲೇ ಇದ್ದೇನೆ. ಇಂತಹ ನಾಟಕವನ್ನು ರಂಗದ ಮೇಲೆ ತಂದದ್ದಕ್ಕೆ ನಿರ್ದೇಶಕರಿಗೂ, ನಟರಿಗೂ ಹ್ಯಾಟ್ಸಾಫ್ ಹೇಳಲೇಬೇಕು.

ಆ.10ಕ್ಕೆ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ಪ್ರದರ್ಶನ ನಿರ್ದಿಗಂತ, ಜಂಗಮ, ಅರಿವು ರಂಗದ ಸಹಯೋಗದಲ್ಲಿ ‘ಕೋಡಿಹಳ್ಳಿಯಿಂದ ಬಾಬ್ ಮಾರ್ಲಿ (ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ)’ ನಾಟಕ ಪ್ರದರ್ಶನವನ್ನು ಆ.10 ರಂದು ಸಂಜೆ 7ಕ್ಕೆ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ನಾಟಕವು ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

Tags: