Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಪಶ್ಚಿಮ ಘಟ್ಟಗಳ ಆಕ್ರೋಶ, ಆಕ್ರಂದನ

ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ ಸಂಭವಿಸಿ ನಾಲ್ಕು ಗ್ರಾಮಗಳು ಕೊಚ್ಚಿಹೋಗಿ ಹೇಳಹೆಸರಿಲ್ಲದಂತಾಗಿವೆ. ಸಾವು- ನೋವುಗಳ ಸಂಖ್ಯೆಯ ಗತಿ ಏರುತ್ತಲೇ ಇದೆ. ಈ ಊಹೆಗೂ ನಿಲುಕದ ಜಲಾಘಾತದ ಒಳಸುಳಿಯನ್ನು ಅರಿಯುವ ಪ್ರಯತ್ನಕ್ಕೆ ಪೂರಕವಾಗಿ ವಿಜ್ಞಾನ ಲೇಖಕ, ಪರಿಸರ ತಜ್ಞ ನಾಗೇಶ ಹೆಗಡೆ ಅವರು ‘ಆಂದೋಲನ’ ದಿನ ಪತ್ರಿಕೆಗೆ ನೀಡಿದ ಸಂದರ್ಶನ ಇಲ್ಲಿದೆ.

      ನಾಗೇಶ ಹೆಗಡೆ

ಪ್ರಶ್ನೆ: ಜಡಿಮಳೆ, ಭೂಕುಸಿತದ ಪ್ರಳಯಾಂತಕ ವರದಿಗಳು ಬರುತ್ತಿವೆಯಲ್ಲ
ಇವು ನೈಸರ್ಗಿಕವೆ ಅಥವಾ ಮನುಷ್ಯರ ಕೃತ್ಯದ ಫಲವೆ?

ನಾಗೇಶ ಹೆಗಡೆ: ಇವೆಲ್ಲ ಮನುಷ್ಯರ ಕೃತ್ಯದಿಂದಾಗಿಯೇ ಸಂಭವಿಸುತ್ತಿರುವ ನೈಸರ್ಗಿಕ ಸಂಕಷ್ಟಗಳು. ಈ ಮಾತನ್ನು ವಿಶ್ವಸಂಸ್ಥೆಯ ಐಪಿಸಿಸಿ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಎಲ್ಲ ರಾಷ್ಟ್ರಗಳ ನೇತಾರರೂ ಇದನ್ನು ಒಪ್ಪಿಕೊಂಡಿದ್ದಾರೆ. ಇವನ್ನು ಹೇಗೆ ಎದುರಿಸ ಬೇಕು, ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಎಲ್ಲ ರಾಷ್ಟ್ರಗಳೂ ತಂತಮ್ಮ ಕಾರ್ಯಸೂಚಿ ಯನ್ನೂ ಘೋಷಣೆ ಮಾಡಿವೆ. ಭಾರತವೂ ಕೂಡ.

ಪ್ರಶ್ನೆ: ಈ ಪಾಟಿ ಜಡಿಮಳೆಗೆ ಮನುಷ್ಯ ಹೇಗೆ ಕಾರಣ?

ನಾಗೇಶ ಹೆಗಡೆ: ಇದು ಈಗಿನದಲ್ಲ; ಕಳೆದ 50 ವರ್ಷಗಳಿಂದ ಸಮಸ್ತ ಭೂಮಂಡಲದ ಜನರು ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್ ಮುಂತಾದ ಪಳೆಯುಳಿಕೆ ಇಂಧನಗಳನ್ನು ಅಪಾರ ಪ್ರಮಾಣದಲ್ಲಿ ಸುಡುತ್ತ ಬಂದಿದ್ದಾರೆ. ಸುಧಾರಿತ ದೇಶಗಳು, ಅಂದರೆ ಯುರೋಪ್, ಅಮೆರಿಕ, ಸೋವಿಯತ್ ರಾಷ್ಟ್ರಗಳು ಅತಿ ದೊಡ್ಡ ಪ್ರಮಾಣದಲ್ಲಿ ಸುಡುತ್ತಿವೆ. ಅದೇ ಹಾದಿಯಲ್ಲಿ ಹೊರಟ ಚೀನಾ ಈಗ ಇತರೆಲ್ಲ ದೇಶಗಳಿಗಿಂತ ಜಾಸ್ತಿ ಸುಡುತ್ತಿದೆ. ನಾವೇನೂ ಕಮ್ಮಿ ಇಲ್ಲ. ಚೀನಾ, ಅಮೆರಿಕ ಬಿಟ್ಟರೆ ನಮ್ಮದು ಮೂರನೆಯ ಕ್ರಮಾಂಕ! ಹೀಗೆ ಹೊಗೆ ಎದ್ದು ಇಡೀ ಭೂಮಿಯನ್ನು ಸುತ್ತುವರಿದಾಗ ಅದರಲ್ಲಿನ ಇಂಗಾಲ, ಸಾರಜನಕದ ಭಸ್ಮಗಳು, ಮೀಥೇನ್ ಅನಿಲ ಮತ್ತು ಗಾಳಿಯಲ್ಲಿನ ತೇಲುಕಣಗಳು ಎಲ್ಲವುಗಳಿಂದಾಗಿ ವಾಯುಮಂಡಲ ಬಿಸಿಯಾಗುತ್ತಿದೆ. ಸಮುದ್ರ ಮತ್ತು ನೆಲ ಕೂಡ ಬಿಸಿಯಾಗುತ್ತಿದೆ. ಈ ಬಿಸಿಯಿಂದಾಗಿ ಮೋಡಗಳ ಸಾಂದ್ರತೆ ಹೆಚ್ಚುತ್ತಿದೆ. ಮಳೆಯ ಪ್ರಮಾಣ ಹೆಚ್ಚುತ್ತಿದೆ.

ಪ್ರಶ್ನೆ: ಮಳೆಸುರಿತ ಹೆಚ್ಚಾಗುತ್ತಿದೆ ಸರಿ, ಆದರೆ ಸೆಕೆಗಾಲ, ಬರಗಾಲವೂ ಹೆಚ್ಚುತ್ತಿವೆಯಲ್ಲ?

ನಾಗೇಶ ಹೆಗಡೆ: ಅದಕ್ಕೆ ಕಾರಣವಿಷ್ಟೆ. ಸಮುದ್ರದಲ್ಲಿನ ಉಷ್ಣಪ್ರವಾಹಗಳ ಚಲನೆ ಎರಾಬಿರಿ ಆಗುತ್ತಿದೆ. ಹಿಂದೆಲ್ಲ ಅವು ಒಂದೇ ಹದದಲ್ಲಿದ್ದಾಗ ಋತುಮಾನಗಳ ಚಲನೆಯೂ ಸರಿಯಾಗಿಯೇ ಇತ್ತು. ಈಗ ಎಲ್ಲವೂ ನಿಯಂತ್ರಣ ತಪ್ಪಿವೆ. ಹಾಗಾಗಿ ಚಂಡಮಾರುತಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚುತ್ತಿದೆ. ಅರಣ್ಯಕ್ಕೆ ತಂತಾನೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಹಿಮಪಾತ, ಹಿಮಕುಸಿತಗಳು ಹೆಚ್ಚುತ್ತಿವೆ. ಬೇಸಿಗೆ, ಬರಗಾಲವೂ ತೀವ್ರವಾಗುತ್ತಿವೆ.

ಪ್ರಶ್ನೆ: ನಮ್ಮ ದೇಶದಲ್ಲಷ್ಟೇ ಈ ಸಂಕಷ್ಟಗಳು ತೀರಾ ಹೆಚ್ಚಾಗುತ್ತಿವೆಯೆ?

ನಾಗೇಶ ಹೆಗಡೆ: ಹಾಗೇನಿಲ್ಲ. ಎಲ್ಲ ರಾಷ್ಟ್ರಗಳಲ್ಲೂ ಹೆಚ್ಚುತ್ತಿದೆ. ಅಮೆರಿಕದಲ್ಲಿ ನಂಬಲಸಾಧ್ಯ ರೀತಿಯಲ್ಲಿ ನಿಸರ್ಗ ಪ್ರಕೋಪ ಹೆಚ್ಚುತ್ತಿದೆ. ಅಲ್ಲಿ ಉಷ್ಣಗೋಳ ನಿರ್ಮಾಣವಾಗುತ್ತಿದೆ. ಹಿಮದ ಜಡಿಪಕಳೆಗಳ ಬಿರುಗಾಳಿಯೇ ಬೀಸುತ್ತಿದೆ. ಯುರೋಪಿನಲ್ಲಿ ಹಿಮದಲ್ಲಿ ನಿಂತ ಸೂಚಿಪರ್ಣಿ ವೃಕ್ಷಗಳಿಗೂ ಬೆಂಕಿ ಹೊತ್ತಿಕೊಳ್ಳುತ್ತಿದೆ. ಆಸ್ಟ್ರೇಲಿಯಾದಲ್ಲಿ ಕಾಡಿನ ಬೆಂಕಿ ನಗರಗಳಿಗೂ ಆವರಿಸುತ್ತಿದೆ. ಅಮೆಝಾನ್ ಅರಣ್ಯದ ಬೆಂಕಿಯ ತೀವ್ರತೆ ಎಷ್ಟಿದೆ ಎಂದರೆ ಅದು ಹೀರಿಕೊಳ್ಳುತ್ತಿದ್ದ ಇಂಗಾಲಕ್ಕಿಂತ ಅಲ್ಲಿಂದ ಹೊರಕ್ಕೆ ಹೊಮ್ಮುವ ಇಂಗಾಲದ ಪ್ರಮಾಣವೇ ಹೆಚ್ಚಾಗಿದೆ. ಈಚಿನ ದುಬೈ ಮಹಾಮಳೆಯನ್ನು ನೆನಪಿಸಿಕೊಳ್ಳಿ. ಅಂಥ ಸುದ್ದಿಗಳು ನಮ್ಮ ಪೈಮ್‌ ಟೈಮ್ ಟಿವಿ ವಾರ್ತೆಗಳಲ್ಲಿ ಬರುವುದೇ ಇಲ್ಲ. ಸಾವಿನ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಅಂಥ ಪ್ರಾಕೃತಿಕ ದುರಂತಗಳು ನಮ್ಮಲ್ಲಿ ವರದಿಯಾಗುತ್ತವೆ. ಬಹಳಷ್ಟು ದೇಶಗಳಲ್ಲಿ ಜನಸಾಂದ್ರತೆ ಕಡಿಮೆ ಇದೆ. ಇಡೀ ಆಸ್ಟ್ರೇಲಿಯಾ ಜನಸಂಖ್ಯೆ ನಮ್ಮ ದಿಲ್ಲಿಯ ಜನಸಂಖ್ಯೆಗಿಂತ ಕಡಿಮೆ ಇದೆ. ನಮ್ಮ ದೇಶದಲ್ಲಿ ಸಂಕಷ್ಟ ಹೆಚ್ಚುತ್ತಿರುವಂತೆ ಭಾಸವಾಗುತ್ತಿದೆ. ಏಕೆಂದರೆ ಇಲ್ಲಿ ಎಲ್ಲೆಲ್ಲೂ ಜನರಿದ್ದಾರೆ! ಚೀನಾದಲ್ಲೂ ಇಷ್ಟೇ ಜನಸಾಂದ್ರತೆ ಇದೆ; ಆದರೆ ಅಲ್ಲಿನ ಮಾಧ್ಯಮಗಳು ತಮ್ಮ ದೇಶದ ಸಂಕಷ್ಟಗಳನ್ನು ಟಾಂಟಾಂ ಮಾಡುವುದಿಲ್ಲ. ನಮ್ಮಲ್ಲಿ ಸುದ್ದಿಯ ಸಾಂದ್ರತೆಯೂ ಏಕರೂಪವಾಗಿಲ್ಲ. ಬಿಸಿಗಾಳಿಯಿಂದ ಈ ವರ್ಷ ಇಡೀ ದೇಶದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರೂ, ದಿಲ್ಲಿಯ ಒಂದು ನೆಲಮಾಳಿಗೆಯಲ್ಲಿ ನೀರು ನುಗ್ಗಿ ಮೂವರು ನತದೃಷ್ಟರು ಅಸುನೀಗಿದ್ದೇ ದೊಡ್ಡ ಸುದ್ದಿಯಾಗುತ್ತದೆ. ಕಳೆದ ತಿಂಗಳಲ್ಲಿ ಆಸ್ಟ್ರೇಲಿಯಾದ ಆಚಿನ ಪಾಪುವಾ ನ್ಯೂಗಿನಿಯಲ್ಲಿ ಒಂದೇ ಭೂ ಕುಸಿತದಿಂದ ಸುಮಾರು 2,000ಕ್ಕೂ ಹೆಚ್ಚು ಜನರು ಅಸುನೀಗಿದರು. ಸತ್ತವರೆಲ್ಲ ಮೂಲನಿವಾಸಿಗಳು. ನಮ್ಮ ಪ್ರಪಂಚಕ್ಕೆ ಆ ಸುದ್ದಿ ಗೊತ್ತಾಗಿದೆಯೆ?

ಪ್ರಶ್ನೆ: ಜಡಿಮಳೆ, ಭೂಕುಸಿತದಂಥ ದುರ್ಘಟನೆ ಹಿಮಾಲಯ ಮತ್ತು ನಮ್ಮ ಪಶ್ಚಿಮ ಘಟ್ಟಗಳಲ್ಲೇ ಹೆಚ್ಚು ಏಕೆ?

ನಾಗೇಶ ಹೆಗಡೆ: ಹಿಮಾಲಯ ಎಂದರೆ ತೀರಾ ಈಚಿನ, ಅಂದರೆ ನಾಲ್ಕೂವರೆ ಕೋಟಿ ವರ್ಷಗಳ ಪರ್ವತಮಾಲೆ. ವೇಗವಾಗಿ ಬೆಳೆಯುತ್ತಿರುವ ಮಗುವಿನಂತೆ, ಈ ಕಡೆ ಭಾರತ, ಆ ಕಡೆ ರಷ್ಯನ್ ಭೂಖಂಡ ಎರಡೂ ಇದನ್ನು ಒತ್ತುತ್ತಿರುವುದರಿಂದ ಸದಾ ಬೆಳೆಯುತ್ತಲೇ ಇದ್ದು, ಅಲ್ಲಿ ಮನುಷ್ಯನ ಹಸ್ತಕ್ಷೇಪ ಇಲ್ಲದೆಯೂ ಹಿಮಕುಸಿತ, ಭೂಕುಸಿತ ಆಗುತ್ತಲೇ ಇರುತ್ತದೆ. ಇತ್ತ ಪಶ್ಚಿಮಘಟ್ಟ ತೀರಾ ಹಳಬ, ಮುನ್ನೂರು ಕೋಟಿ ವರ್ಷಗಳ ಮುದಿ, ಶಿಥಿಲ ಪರ್ವತ ಮಾಲೆ, ಸಮುದ್ರಗಳಿಂದ ಬರುವ ಬಿರುಗಾಳಿ, ಜಡಿಮಳೆ ಎರಡೂ ಇವನು ಒತ್ತುತ್ತಿವೆ. ಹಾಗಾಗಿ ಮನುಷ್ಯ ಹಸ್ತಕ್ಷೇಪ ಇಲ್ಲದೆಯೂ ಇಲ್ಲಿಯೂ ಗುಡ್ಡಗಳು ಜರಿಯುತ್ತವೆ. ಹಿಮಾಲಯ ಎಂದರೆ ಮಗು; ಪಶ್ಚಿಮಘಟ್ಟ ಎಂದರೆ ಅಜ್ಜ. ಇವೆರಡೂ ಎಂದು ಎಲ್ಲಿ ಬಿದ್ದು ಘಾಸಿ ಮಾಡಿಕೊಳ್ಳುತ್ತವೋ ಹೇಳುವಂತಿಲ್ಲ. ಈ ಮಧ್ಯೆ ಭೂಮಂಡಲ ಬಿಸಿಯಾಗುತ್ತಿದೆ. ದಿಢೀರ್ ಅಭಿವೃದ್ಧಿ ಸಾಧಿಸಬೇಕೆಂಬ ಹಪಾಹಪಿಯೂ ಇಲ್ಲಿ ಹೆಚ್ಚಾಗಿದೆ. ಅಂದರೆ ಡಬಲ್ ಒತ್ತಡ ನಮ್ಮಿಂದಲೂ ಆಗುತ್ತಿದೆ!

ಪ್ರಶ್ನೆ: ಅಭಿವೃದ್ಧಿಯ ಒತ್ತಡ ಎಂದರೆ ಏನು?

ನಾಗೇಶ ಹೆಗಡೆ: ಭಾರತದ ಮಟ್ಟಿಗೆ ಇದೊಂದು ವಿಷಪ್ರಳಯ. ಅನುಕೂಲಸ್ಥರು, ಅನುಕೂಲಸ್ಥರಿಗಾಗಿ ಇನ್ನಷ್ಟು ಮತ್ತಷ್ಟು ಅನುಕೂಲಗಳನ್ನು ಸೃಷ್ಟಿಮಾಡಿಕೊಳ್ಳುತ್ತ ಹೋಗುವುದೇ ನಮ್ಮ ದೇಶದಲ್ಲಿ ಅಭಿವೃದ್ಧಿ ಎಂಬಂತಾಗಿದೆ. ಇವರಿಗಾಗಿ ಹೆದ್ದಾರಿಗಳು, ವೇಗದ ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ಸುರಂಗ ಮಾರ್ಗಗಳು ಎಲ್ಲೆಲ್ಲೂ ಸೃಷ್ಟಿಯಾಗುತ್ತಿವೆ. ಇವರಿಗಾಗಿಯೇ ವಿಹಾರಧಾಮಗಳು, ಪ್ರವಾಸಿತಾಣಗಳು, ಅಲ್ಲಿ ಸಕಲ ಸೌಲಭ್ಯಗಳು ಅತಿ ಅವಸರದಲ್ಲಿ ರೂಪುಗೊಳ್ಳುತ್ತಿವೆ. ಇವರ ಸಂಪತ್ತನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಲೆಂದೇ ಎಲ್ಲೆಂದರಲ್ಲಿ ಕಲ್ಲು ಗಣಿ, ಖನಿಜ ಗಣಿ, ಅರಣ್ಯ ನಾಶ, ಕಾಲುವೆ, ಜಲಾಶಯ ನಿರ್ಮಾಣ, ಪವರ್‌ಹೌಸ್ ನಿರ್ಮಾಣ ಎಗ್ಗಿಲ್ಲದೆ ನಡೆಯುತ್ತಿವೆ. ಇದರಿಂದ ಶ್ರಮಿಕರಿಗೆ ಕೆಲಸ ಸಿಗುತ್ತದಲ್ಲ ಎಂದು ನೀವು ಕೇಳಬಹುದು. ತೀರಾ ಅಲ್ಪ! ಹೆಚ್ಚಿನ ಪಾಲು ಬುಲ್ಲೋಝರ್, ಜೆಸಿಬಿ, ಕ್ರೇನ್‌ಗಳ ಮಾಲೀಕರಿಗೆ ಹೋಗುತ್ತದೆ. ಅಂಥ ಬೃಹತ್ ಯಂತ್ರಗಳ ಚಾಲಕರಿಗೆ ಕೆಲವೆಡೆ ನೌಕರಿ ಸಿಗುತ್ತದೆ ಹೌದು. ಅಲ್ಲಲ್ಲಿ ಚಹಾ ಅಂಗಡಿ, ಗುಟ್ಟಾ ಅಂಗಡಿಗಳು, ಲಿಕ್ಕರ್
ಶಾಪ್ ತಾತ್ಕಾಲಿಕವಾಗಿ ತಲೆ ಎತ್ತುತ್ತವೆ. ಅಷ್ಟೆ. ವಯನಾಡಿನಲ್ಲಿ 2018ರಲ್ಲಿ ಪೂತ್ತುಮಲಾ ಭೂಕುಸಿತ ಸಂಭವಿಸಿದಾಗ ಅಸುನೀಗಿದವರು, ಸಂಕಷ್ಟಕ್ಕೊಳಗಾದವರೆಲ್ಲ ಟೀ ಎಸ್ಟೇಟ್‌ನ ಕೂಲಿಕಾರರು.
(ಮುಂದುವರಿಯುತ್ತದೆ)

Tags: