Mysore
27
haze

Social Media

ಗುರುವಾರ, 01 ಜನವರಿ 2026
Light
Dark

ಓದುಗರ ಪತ್ರ| ʼಆಂದೋಲನʼ ತಂಡಕ್ಕೆ ಅಭಿನಂದನೆಗಳು

‘ಆಂದೋಲನ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರಶ್ಮಿ ಕೋಟಿ ಸ್ವತಃ ಪ್ರಕೃತಿ ವಿಕೋಪ ಸಂಭವಿಸಿರುವ ವಯನಾಡಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಸಂಪೂರ್ಣ ಚಿತ್ರಣವನ್ನು ವರದಿಯ ರೂಪದಲ್ಲಿ ‘ಆಂದೋಲನ’ದ ಓದುಗರ ಮುಂದಿಟ್ಟಿದ್ದಾರೆ. ‘ಒಂದು ಶಿಬಿರ, ಯಾತನೆ ಸಾವಿರ’ ಎನುವ ಶೀರ್ಷಿಕೆಯೇ ಹೇಳುವಂತೆ ಅಲ್ಲಿನ ಜನರ ಗೋಳು ಮನಕಲಕುವಂತಿದೆ. ಆ ಶಿಬಿರಗಳಲ್ಲಿ ಎದುರುಗೊಂಡವರ ದುಃಖವನ್ನು ಕಂಡು, ಮರುಗಿ ಅದಕ್ಕೆ ಅಕ್ಷರರೂಪ ನೀಡಿ ಮನಕಲಕುವಂತೆ ವರದಿ ಮಾಡಿದ್ದಾರೆ.

‘ಆಂದೋಲನ’ ಪತ್ರಿಕೆಯ ತಂಡ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನ ‘ಇವರೇನಾದರೂ ನಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿರುವ ಸಂದೇಶ ತಂದಿದ್ದಾರೆಯೇ? ನಮ್ಮವರು ಜೀವಂತವಾಗಿರುವ ಮಾಹಿತಿ ನೀಡಲಿದ್ದಾರೆಯೇ?’ ಎಂದು ಎದುರು ನೋಡುವ ಸನ್ನಿವೇಶವನ್ನು ಸ್ವತಃ ಅನುಭವಿಸಿ ಅದನ್ನು ಓದುಗರ ಕಣ್ಣಿಗೆ ಕಟ್ಟುವಂತೆ ವರದಿ ಮಾಡಿದ್ದಾರೆ. ಒಬ್ಬ ಮಹಿಳಾ ಪತ್ರಕರ್ತರಾಗಿ ಭೂ ಕುಸಿತ ಹಾಗೂ ಪ್ರವಾಹದಂತಹ ಭೀಕರ ದುರಂತದ ಸ್ಥಳಕೇ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿರುವ ರಶ್ಮಿ ಕೋಟಿ ಅವರ ತಂಡವನ್ನು ಅಭಿನಂದಿಸುತ್ತೇನೆ. ಈ ಹಿಂದೆ ಇಂತಹ ಅವಘಡಗಳು, ವಿಪತ್ತುಗಳು ಸಂಭವಿಸಿದಾಗ ನೊಂದವರ ಪರವಾಗಿ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ದೇಣಿಗೆ ಸಂಗ್ರಹಿಸಿ ಸಹಾಯಹಸ್ತ ಚಾಚಿದ ಉದಾಹರಣೆಗಳು ಬಹಳಷ್ಟಿವೆ. ‘ಆಂದೋಲನ’ದ ಈ ಕಾಳಜಿಯನ್ನು ಅಭಿನಂದಿಸಲೇಬೇಕು.

-ಜಿ.ಕೆ.ಕುಲಕರ್ಣಿ, ಸರಸ್ವತಿಪುರಂ, ಮೈಸೂರು

Tags:
error: Content is protected !!