Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ತನ್ನ ಕುಟುಂಬದವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದ ವೃದ್ಧೆ; ತಿ.ನರಸೀಪುರ ಮೂಲದ 9 ಮಂದಿ ಸಾವು

ಮೈಸೂರು: ಎಲ್ಲರನ್ನೂ ನೀರು ಹೊತ್ತುಕೊಂಡು ಹೋಯ್ತು ಸ್ವಾಮಿ… ಮೂರು ಮನೆಗಳೂ ಕೊಚ್ಚಿ ಹೋಗಿ ತಾರಿಸಿದಂಗೆ ಮಟ್ಟವಾಯ್ತು… ಮೂರು ಮನೆಯ ಮಕ್ಕಳೂ ಇಲ್ಲ. ಮೊಮ್ಮಗಳನ್ನು ಬಿಟ್ಟರೆ ಬೇರಾರೂ ಸಿಕ್ಕಲಿಲ್ಲ …

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮಾಡಿ ವಯನಾಡು ಭೂ ಕುಸಿತ ದುರಂತದ ಸಂತ್ರಸ್ತರಾದ 70 ವರ್ಷ ವಯೋಮಾನದ ಮಹದೇವಿ ಅವರೊಂದಿಗೆ ಮಾತನಾಡಿದಾಗ ಕಣ್ಣೀರು ಹಾಕುತ್ತಲೇ, ಹೇಳಿದ ಮಾತುಗಳಿವು.


ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾಗಿರುವ ಮೂಲತಃ ಮೈಸೂರು ಜಿಲ್ಲೆಯ ತಿನರಸೀಪುರ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದ ಮಹದೇವಿ ಅವರು ತಮ್ಮ ಕುಟುಂಬದ ಎಲ್ಲ 9 ಜನರನ್ನೂ ಕಳೆದುಕೊಂಡಿದ್ದು, ಮೃತದೇಹಗಳನ್ನು ಗುರುತಿಸಲು ಶವಾಗಾರದ ಬಳಿ ಕಾಯುತ್ತಿದ್ದಾಗ ದೂರವಾಣಿಯಲ್ಲಿ ಏನಾಗಿದೆ ಎನ್ನುವ ಪ್ರಶ್ನೆ ಕೇಳುತ್ತಿದ್ದಂತೆ, ಕಣ್ಣೀರಿನ ಕಡಲಾದರು.

ಏನು ಹೇಳಲಿ ಸ್ವಾಮಿ? ಎಲ್ಲರೂ ನೀರಿನಲ್ಲಿ ಕೊಚ್ಚಿ ಹೋದ್ರು, ಮನೆ ಎಲ್ಲ ಹೋಯ್ತು. 18 ವರ್ಷ ಇದ್ದಾಗಲೇ ಈ ಊರಿಗೆ, ಒಂದೂವರೆ ವರ್ಷದ ಮಗನನ್ನು ಕಂಕುಳಲ್ಲಿ ಇಟ್ಟುಕೊಂಡು ಬಂದೆ. ಊರಲ್ಲಿ (ಉಕ್ಕಲಗೆರೆ)ಮನೆ, ಜಮೀನು ಇರಲಿಲ್ಲ. ಮಳೆ-ಗಾಳಿ ಇರಲಿಲ್ಲ.

ಹಿಟ್ಟು- ಬಟ್ಟೆಗೆ ತೊಂದರೆಯಾಗಿ ತೋಟಕ್ಕೆ ಬಂದೆವು. ಅಲ್ಲಿಂದ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡು ಬಂದಿದ್ದೆವು. ಕಾಫಿ ತೋಟದಲ್ಲೇ ಮೂರು ಮನೆ ಕಟ್ಟಿಕೊಂಡು ಮೂರು ಗಂಡು ಮಕ್ಕಳು ಚೆನ್ನಾಗಿದ್ದರು. ಮೊಮ್ಮಕ್ಕಳು ಕಾಲೇಜು ಹೋಗುತ್ತಿದ್ದರು. ಒಬ್ಬ ಮೊಮ್ಮಗಳ ಮೃತದೇಹವನ್ನು ಅಡಕೆ ಮರ ತಡೆ ಹಿಡಿದಿದ್ದರಿಂದ ಸಿಕ್ಕಿಕೊಂಡಿದ್ದರಿಂದ ಸಿಕ್ಕಿದೆ. ಉಳಿದವರು ಏನಾದರು ಎನ್ನುವುದೇ ಗೊತ್ತಾಗುತ್ತಿಲ್ಲ ಅನ್ನುತ್ತಲೇ ಗಳಗಳನೆ ಕಣ್ಣೀರಿಟ್ಟರು.

 

ಇನ್ಯಾರು ನನಗೆ ದಿಕ್ಕು…
ಸಿದ್ದರಾಮಯ್ಯ ಅವರು, ಮನೆನೂ ಹೋಯ್ತಾ ಎನ್ನುತ್ತಿದ್ದಂತೆ, ಹೌದು ಸ್ವಾಮಿ, ಮೂರು ಮನೆಗಳು ತಾರಸಿದಂಗೆ ಮಟ್ಟ ಆಗೋಯ್ತು. ಇನ್ಯಾರು ಸ್ವಾಮಿ ನನಗೆ ದಿಕ್ಕು ಅಂದಾಗ, ಸಿದ್ದರಾಮಯ್ಯ ಅವರು ಯೋಚನೆ ಮಾಡಬೇಡಿ, ಕರ್ನಾಟಕ ಸರ್ಕಾರ ನಿಮ್ಮೊಂದಿಗೆ ಇದೆ. ನಿಮಗೆ ಬೇಕಾದ ಎಲ್ಲಾ ನೆರವನ್ನೂ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

 

Tags: