Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬಿಚ್ಚೆದೆಯ ರಿಂಗ್ ಮಾಸ್ಟರ್ ದಾಮೂ ಧೋತ್ರೆ

  • ಪಂಚು ಗಂಗೊಳ್ಳಿ

1927ರಲ್ಲಿ ಶಾಂಘಾಯ್‌ಯಲ್ಲಿ ಒಂದು ಸರ್ಕಸ್ ನಡೆಯುತ್ತಿತ್ತು. ಒಬ್ಬ ಪತ್ರಕರ್ತ ಆ ಸರ್ಕಸ್ ಕಂಪೆನಿಯ ರಿಂಗ್ ಮಾಸ್ಟರನ್ನು ಸಂದರ್ಶಿಸಲು ಬಂದಿದ್ದಾನೆ. ಆದರೆ, ರಿಂಗ್ ಮಾಸ್ಟರ್ ಒಂದು ಬೋನಿನೊಳಗಿದ್ದಾನೆ. ಪತ್ರಕರ್ತ ಅವನ ಸಂದರ್ಶನ ಮಾಡಬೇಕಿದ್ದರೆ ಆ ಬೋನಿನೊಳಗೆ ಹೋಗಬೇಕು. ಬೋನಿನೊಳಗೆ ರಿಂಗ್ ಮಾಸ್ಟರ್ ಒಬ್ಬನೇ ಕುಳಿತಿಲ್ಲ. ಅವನ ಜೊತೆಗೆ ಐದು ಹುಲಿ ಹಾಗೂ ನಾಲ್ಕು ಚಿರತೆಗಳಿವೆ! ಪತ್ರಕರ್ತ ಆ ರಿಂಗ್ ಮಾಸ್ಟರ್ ಮೇಲೆ ಸಂಪೂರ್ಣ ಭರವಸೆ ಇಟ್ಟು, ಬೋನಿನೊಳಗೆ ಹೋಗಿ, ಬೋನಿನ ಬಾಗಿಲು ಮುಚ್ಚಿಕೊಂಡು, ಅವನ ಸಂದರ್ಶನ ಮಾಡಿ ಕ್ಷೇಮವಾಗಿ ಹೊರ ಬರುತ್ತಾನೆ. ಆ ರಿಂಗ್ ಮಾಸ್ಟರ್ ಭಾರತದವನು, ಹೆಸರು ದಾಮೋದರ್‌ ಗಂಗಾರಾಮ್ ಧೋತ್ರೆ, ಸರ್ಕಸ್ ಇತಿಹಾಸದಲ್ಲಿ ದಾಮೋದರ್ ಗಂಗಾರಾಮ್ ಧೋತ್ರೆ ಒಂದು ದಂತ ಕಥೆ. ಆದರೆ, ಆ ಹೆಸರು ಈಗ ಯಾರಿಗೂ ನೆನಪಿರಲಿಕ್ಕಿಲ್ಲ.

ದಾಮೂ ಧೋತ್ರೆ 1902ರ ಆಗಸ್ಟ್ 31ರಂದು ಪೂನಾದ ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವನು. ಅವನ ಸೋದರ ಮಾವ ತುಕಾರಾಮ್ ಗಣಪತ್ ಶೆಲಾರ್ ‘ಶೆಲಾರ್ ರಾಯಲ್ ಸರ್ಕಸ್’ ಎಂಬ ಹೆಸರಿನ ಒಂದು ಸರ್ಕಸ್ ಕಂಪೆನಿಯನ್ನು ನಡೆಸುತ್ತಿದ್ದನು. ಆಗ 10 ವರ್ಷ ಪ್ರಾಯದ ಬಾಲಕನಾಗಿದ್ದ ದಾಮೂ ಮಾವ ಪ್ರಾಣಿಗಳನ್ನು ಪಳಗಿಸುತ್ತಿದ್ದುದನ್ನು ಬಹಳ ಹತ್ತಿರದಿಂದ ನೋಡುತ್ತಿದ್ದನು. ಒಂದು ದಿನ ಒಂದು ಬೋನು ತೆರೆದಿತ್ತು. ಬಾಲಕ ದಾಮೂ ಅದರೊಳಗೆ ಹೋಗಿ ಅದರೊಳಗಿದ್ದ ಪ್ರಾಣಿಯನ್ನು ಶಾಂತವಾಗಿರಿಸಿ ಕೆಲ ಹೊತ್ತು ನೋಡಿಕೊಂಡನು. ಅದನ್ನು ನೋಡಿದ ಅವನ ಮಾವ ದಾಮೂ ಒಬ್ಬ ಸಹಜ ಪ್ರಾಣಿ ಟೈನರ್ ಎಂಬುದನ್ನು ಮನಗಂಡು ಅಂದಿನಿಂದ ಅವನಿಗೆ ತರಬೇತಿ ನೀಡಲು ಪ್ರಾರಂಭಿಸಿದನು.

1912ರಲ್ಲಿ ದಾಮೂ ಶಾಲೆಯನ್ನು ಬಿಟ್ಟು, ಮುಂದಿನ ನಾಲ್ಕು ವರ್ಷಗಳ ಕಾಲ ಮಾವನ ಸರ್ಕಸ್ ಕಂಪೆನಿಯೊಂದಿಗೆ ಊರೂರು ಸುತ್ತಿದನು. ಆಗ ಅವನಿಗೆ ಅಮ್ಮನ ನೆನಪು ಕಾಡಲು ಶುರುವಾಗಿ ಮನೆಗೆ ಹಿಂತಿರುಗಿದನು. ಆದರೆ, ಅವನ ಮನಸ್ಸೆಲ್ಲಸರ್ಕಸ್‌ನಲ್ಲಿತ್ತು. ತಾನು ಸರ್ಕಸ್ ಮಾಡಿಯೇ ತನ್ನತಂದೆ-ತಾಯಿಯನ್ನು ಸಾಕಬೇಕು ಎಂದು ಬಯಸಿದ ಅವನು ಪೂನಾದಲ್ಲಿ ಸೈಕಲ್ ಸರ್ಕಸ್ ಮಾಡಿ ದುಡಿಯಲು ಪ್ರಾರಂಭಿಸಿದನು. ಅದರಲ್ಲಿ ಅವನು ಸಾಕಷ್ಟು ಹೆಸರು ಮಾಡಿದನು. ಪತ್ರಿಕೆಗಳು ಅವನನ್ನು ಅದ್ಭುತ ಬಾಲಕ ಎಂದು ವರ್ಣಿಸಿ ವರದಿಗಳನ್ನು ಬರೆದವು. ಅವನಿಗೆ 22 ವರ್ಷ ಪ್ರಾಯವಾದಾಗ ಮೋಟಾರ್ ಸೈಕಲ್‌ ಸ್ಟಂಟ್ ಕೆಲಸಕ್ಕಾಗಿ ‘ಇಝಾಕೋಸ್ ರಷಿಯನ್ ಸರ್ಕಸ್’ ಎಂಬ ಒಂದು ರಷಿಯನ್ ಸರ್ಕಸ್ ಕಂಪೆನಿಗೆ ಅರ್ಜಿ ಹಾಕಿದನು. ಅಲ್ಲಿ ಅವನಿಗೆ ಕೆಲಸ ಸಿಕ್ಕಿತು. ಅದರಲ್ಲಿ ಸೇರಿಕೊಂಡು, ತಾನು ಮೋಟಾರ್ ಸೈಕಲ್ ಸ್ಟಂಟಿಗಿಂತಲೂ ಚೆನ್ನಾಗಿ ಪ್ರಾಣಿಗಳನ್ನು ಪಳಗಿಸುತ್ತೇನೆ ಎಂದು ಆ ಸರ್ಕಸ್ ಕಂಪೆನಿಯ ಮಾಲೀಕನಿಗೆ ಮನವರಿಕೆ ಮಾಡಿಕೊಟ್ಟು ರಿಂಗ್ ಮಾಸ್ಟರ್ ಆದನು.

ಮುಂದೆ, ಅದೇ ಸರ್ಕಸ್ ಕಂಪೆನಿ ಜೊತೆ ಅವನು ಚೀನಾಕ್ಕೆ ಹೋಗಿ ಬಹಳ ದೊಡ್ಡ ಹೆಸರು ಮಾಡಿದನು. ಆಗ ರಿಂಗ್ ಮಾಸ್ಟರುಗಳು ರಕ್ಷಣೆಗಾಗಿ ರಕ್ಷಾ ಕವಚ ತೊಟ್ಟು ಅದರ ಮೇಲೆ ಮೈತುಂಬಾ ಬಟ್ಟೆ ಧರಿಸಿ, ಕೈಯಲ್ಲಿ ಚಾಟಿ ಅಥವಾ ಗನ್ ಹಿಡಿದುಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ದಾಮೂ ಅದ್ಯಾವುದೂ ಇಲ್ಲದೆ ತಲೆಗೆ ಮಹಾರಾಷ್ಟ್ರದ ಸಾಂಪ್ರದಾಯಿಕ ಪಗಡಿ, ಸೊಂಟಕ್ಕೆ ಪ್ಯಾಂಟು ಮತ್ತು ಬರೀ ಎದೆಯಲ್ಲಿ ರಿಂಗನ್ನು ಪ್ರವೇಶಿಸುವಾಗ ಜನ ಆಶ್ಚರ್ಯಚಕಿತರಾಗಿ ಹೋ ಎಂದು ಉದ್ಧರಿಸುತ್ತಿದ್ದರು! ಅವನು ಪ್ರಾಣಿಗಳನ್ನು ನಿಯಂತ್ರಿಸುತ್ತಿದ್ದ ರೀತಿಯನ್ನು ನೋಡಿ ಹುಚ್ಚೆದ್ದು ಕುಣಿಯುತ್ತಿದ್ದರು. ಹುಲಿಯ ಬೆನ್ನ ಮೇಲೆ ಆಡೊಂದು ಸವಾರಿ ಮಾಡುವುದು ನಡೆಸುತ್ತಿದ್ದ ಪ್ರದರ್ಶನಗಳಲ್ಲಿ ಅತ್ಯಂತ ದಾಮೂ ಪ್ರಸಿದ್ಧವಾದುದಾಗಿತ್ತು. ದಾಮೂ ಅಕ್ಷರಶಃ ರಿಂಗಿನ ಮಾಸ್ಟರಾಗಿ ಪ್ರಾಣಿಗಳನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುತ್ತಿದ್ದನು.

ಮುಂದಿನ ದಿನಗಳಲ್ಲಿ ದಾಮೂಗೆ ರಷಿಯನ್ ಸರ್ಕಸ್ ಕಂಪೆನಿಗಳು ತನ್ನ ಸಾಹಸಗಳಿಗೆ ಬಹು ಚಿಕ್ಕದಾಗಿ ಕಂಡು, ಒಂದು ಫ್ರೆಂಚ್ ಸರ್ಕಸ್ ಕಂಪೆನಿಯನ್ನು ಸೇರಿ, 1939ರ ಜನವರಿಯಲ್ಲಿ ಯುರೋಪಿಗೆ ಹೋದನು. ಯುರೋಪಿಗೆ ಬಂದಾಗ ದಾಮೂ ಅಲ್ಲಿ ಒಬ್ಬ ಅಪರಿಚಿತನಾಗಿದ್ದ. ಆದರೆ, ಸ್ವಲ್ಪವೇ ಕಾಲದಲ್ಲಿ ಯುರೋಪಿನಲ್ಲೂ ರಿಂಗ್ ಮಾಸ್ಟರಾಗಿ ಖ್ಯಾತಿ ಗಳಿಸಿದನು. ಆದರೆ, ಅಷ್ಟರಲ್ಲಿ 1940ರಲ್ಲಿ 2ನೇ ಮಹಾಯುದ್ಧ ಪ್ರಾರಂಭಗೊಂಡು ಇಡೀ ಯುರೋಪನ್ನು ಆವರಿಸಿ, ಸರ್ಕಸ್‌ಗಳು ನಿಷೇಧಿಸಲ್ಪಟ್ಟವು. ನಂತರ ದಾಮೂ ಅಮೆರಿಕಾದ ಪ್ರಸಿದ್ದ ‘ರಿಂಗ್ಲಿಂಗ್ ಬ್ರದರ್ಸ್ ಸರ್ಕಸ್ ಕಂಪೆನಿ ಸೇರಿ, ಅಮೆರಿಕಕ ಹೋದನು. ಆಗ ರಿಂಗ್ಲಿಂಗ್ ಬ್ರದರ್ಸ್ ಸರ್ಕಸ್ ಕಂಪೆನಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಹೆಸರುವಾಸಿ ಸರ್ಕಸ್ ಕಂಪೆನಿಯಾಗಿತ್ತು. ಅಷ್ಟರ ತನಕ ಅಮೆರಿಕನರು ದಾಮು ಮಾಡುವಂತಹ ನಿರ್ಭೀತ ಪ್ರದರ್ಶನಗಳನ್ನು ನೋಡಿರಲಿಲ್ಲ. ಹಾಗಾಗಿ, ದಾಮೂ ಅಮೆರಿಕಾದಲ್ಲೂ ಅಪಾರ ಜನಪ್ರೀತಿ ಗಳಿಸಿದನು. ಆದರೆ, 1941ರಲ್ಲಿ ಅಮೆರಿಕವೂ ಯುದ್ಧ ರಂಗವನ್ನು ಪ್ರವೇಶಿಸಿದ ಕಾರಣ ಅಲ್ಲಿಯೂ ಸರ್ಕಸ್ ಕಂಪೆನಿಗಳು ನಿಷೇಧಿಸಲ್ಪಟ್ಟವು.

ಆಗ, ದಾಮೂ ಅಮೆರಿಕಸೇನೆಯನ್ನು ಸೇರಿದನು. ಅಮೆರಿಕಸೇನೆ ದಾಮೂವಿನ ಜನಪ್ರಿಯತೆಯನ್ನು ಚೆನ್ನಾಗಿ ಬಳಸಿಕೊಂಡಿತು. ದಾಮೂ ಚಿರತೆ, ಜಾಗ್ವಾರ್ ಮೊದಲಾದ ಸರ್ಕಸ್ ಪ್ರಾಣಿಗಳನ್ನು ತನ್ನೊಂದಿಗಿರಿಸಿಕೊಂಡು ಅಮೆರಿಕದಲ್ಲಿ ಪ್ರವಾಸ ಮಾಡಿ ಸೇನೆಗೆ ಧನ ಸಂಗ್ರಹ ಮಾಡಿಕೊಟ್ಟನು. 1945ರಲ್ಲಿ ಯುದ್ಧ ಮುಗಿದ ನಂತರ ರಿಂಗ್ಲಿಂಗ್ ಬ್ರದರ್ಸ್ ಸರ್ಕಸ್ ಕಂಪೆನಿ ಪ್ರದರ್ಶನವನ್ನು ಪುನಃ ಶುರು ಮಾಡಿದಾಗ, ದಾಮೂ ಕೆಲ ವರ್ಷಗಳ ಕಾಲ ಅದರಲ್ಲಿ ಕೆಲಸ ಮಾಡಿದನು. ಆದರೆ, ನಂತರ ಅವನ ಆರೋಗ್ಯದಲ್ಲಿ ಏರುಪೇರಾಗಿ 1949ರಲ್ಲಿ ರಿಂಗ್ಲಿಂಗ್ ಕಂಪೆನಿ ಬಿಟ್ಟು ಯುರೋಪಿಗೆ ವಾಪಸಾದನು. ಎರಡು ವರ್ಷಗಳ ನಂತರ ಅವನ ಆರೋಗ್ಯ ಇನ್ನೂ ಹದಗೆಟ್ಟು, 1953ರ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ವಾಪಸಾಗಬೇಕಾಯಿತು. ಅದೇ ಹೊತ್ತಿಗೆ ದಾಮೂವಿನ ಹೆಂಡತಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿ, ದಾಮೂ ಮನೆಗೆ ಬರುವ ಮೊದಲೇ ತೀರಿಕೊಂಡಳು. ನಂತರ, ದಾಮೂವಿನ ಅಸ್ತಮಾ ಕಾಯಿಲೆ ಉಲ್ಬಣಿಸಿ ಅವನು ಸರ್ಕಸ್ ಕೆಲಸವನ್ನು ಸಂಪೂರ್ಣವಾಗಿ ಬಿಡಬೇಕಾಗಿ ಬಂದಿತು. ಆದರೆ, ಸರ್ಕಸ್ ಅವನ ರಕ್ತದೊಳಕ್ಕೆ ಎಷ್ಟು ಆಳವಾಗಿ ಪ್ರವೇಶಿಸಿತ್ತು ಅಂದರೆ, ಸರ್ಕಸಿನಿಂದ ದೂರವಾಗಲು ಸಾಧ್ಯವಾಗದೆ ಅವನು ರಿಂಗ್ ಮಾಸ್ಟರುಗಳಿಗೆ ತರಬೇತಿ ನೀಡಲು ಶುರು ಮಾಡಿದನು.

1971ರಲ್ಲಿ ‘ಇಂಟರ್ನೇಷನಲ್ ಸರ್ಕಸ್ ಹಾಲ್ ಆಫ್ ಫೇಮ್’ಗೆ ದಾಮೂ ಧೋತ್ರೆ ಹೆಸರು ಸೇರಿಸಲ್ಪಟ್ಟಿತು. ದಾಮೂ ಆ ಪಟ್ಟಿಯಲ್ಲಿ ಹೆಸರಿರುವ ಏಕೈಕ ಭಾರತೀಯ ರಿಂಗ್ ಮಾಸ್ಟರ್. ಎರಡು ವರ್ಷಗಳ ನಂತರ 1973ರ ಜನವರಿ 23ರಂದು ದಾಮೂ ತೀರಿಕೊಂಡನು. ಅದರ ನಂತರ ಭಾರತದಲ್ಲಿ ಇನ್ನೊಬ್ಬ ದಾಮೂ ಹುಟ್ಟಲಿಲ್ಲ. ಸರ್ಕಸ್ ಕಲೆ ಅಳಿವಿನತ್ತ ಸರಿಯುತ್ತಿರುವುದರಿಂದ ಮತ್ತು ಸರ್ಕಸ್‌ ಗಳಲ್ಲಿ ಪ್ರಾಣಿಗಳ ಬಳಕೆ ನಿಷೇಧವಿರುವುದರಿಂದ ಭಾರತದಲ್ಲಿ ಇನ್ನೊಬ್ಬ ದಾಮೂಧೋತ್ರೆ ಹುಟ್ಟಲುಸಾಧ್ಯವೂ ಇಲ್ಲ. ದಾಮೂವಿನ ಹುಟ್ಟೂರುಪೂನಾದಲ್ಲಿ ಅವನ ಗೌರವಾರ್ಥ ಅವನ ಪ್ರತಿಮೆಯೊಂದನ್ನು ನಿಲ್ಲಿಸುವ ಪ್ರಯತ್ನಗಳು ನಡೆದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

 

1912ರಲ್ಲಿ ದಾಮೂ ಶಾಲೆಯನ್ನು ಬಿಟ್ಟು, ಮುಂದಿನ ನಾಲ್ಕು ವರ್ಷ ಕಾಲ ಮಾವನ ಸರ್ಕಸ್ ಕಂಪೆನಿಯೊಂದಿಗೆ ಊರೂರು ಸುತ್ತಿದನು. ಆಗ ಅವನಿಗೆ ಅಮ್ಮನ ನೆನಪು ಕಾಡಲು ಶುರುವಾಗಿ ಮನೆಗೆ ಹಿಂತಿರುಗಿದನು. ಆದರೆ, ಅವನ ಮನಸ್ಸೆಲ್ಲ ಸರ್ಕಸ್‌ನಲ್ಲಿತ್ತು. ತಾನು ಸರ್ಕಸ್ ಮಾಡಿಯೇ ತನ್ನ ತಂದೆ-ತಾಯಿಯನ್ನು ಸಾಕಬೇಕು ಎಂದು ಬಯಸಿದ ಅವನು ಪೂನಾದಲ್ಲಿ ಸೈಕಲ್ ಸರ್ಕಸ್ ಮಾಡಿ ದುಡಿಯಲು ಪ್ರಾರಂಭಿಸಿದನು. ಅದರಲ್ಲಿ ಅವನು ಸಾಕಷ್ಟು ಹೆಸರು ಮಾಡಿದನು. ಪತ್ರಿಕೆಗಳು ಅವನನ್ನು “ಅದ್ಭುತ ಬಾಲಕ’ ಎಂದು ವರ್ಣಿಸಿ ವರದಿಗಳನ್ನು ಬರೆದವು.

Tags: