Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವ ಶಕ್ತಿ ಕಾವೇರಿ ತಾಯಿ ನೀಡುತ್ತಾಳೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮಂಡ್ಯ: ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹರ್ಷ ವ್ಯಕ್ತಪಡಿಸಿದರು.

ಸೋಮವಾರ ಕೆ.ಆರ್.ಎಸ್ ಅಣೆಕಟ್ಟಿಗೆ ಬಾಗಿನ ಸಮರ್ಪಿಸಿ, ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜುಲೈ ತಿಂಗಳಿನಲ್ಲಿ ಪ್ರತಿ ದಿನ 1 ಟಿಎಂಸಿಯಂತೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ ಎಂದು ಹೇಳಿದರು.

ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ

ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು, ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ. ಸ್ವರ್ಣಗೌರಿ ಹಬ್ಬದ ದಿನ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಿದಂತೆ ಶುಭಗಳಿಗೆಯ ಅಭಿಜಿನ್ ಲಗ್ನದಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಾಗಿದೆ ಎಂದರು.

ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯ ಅವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದಿದೆ ಆದ ಕಾರಣ ನೀರು ಅವರಿಗೆ ಹೋಗಿದೆ. ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅವರಿಗೆಲ್ಲ ಈಗ ತಕ್ಕ ಉತ್ತರ ಸಿಕ್ಕಿದೆ. ಮೇಲೆ ಇರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎನ್ನುವುದು ಗೊತ್ತಿರುವುದಿಲ್ಲ ಎಂದು ಹೇಳಿದರು.

ಮಳೆ ಇದೇ ರೀತಿ ಉತ್ತಮವಾಗಿ ಬಂದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಈ ವರ್ಷ ನೀಡಬಹುದು. ಕಳೆದ ವರ್ಷ 223 ತಾಲ್ಲೂಕುಗಳಲ್ಲಿ ಬರ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ಟೀಕೆ ಮಾಡಿದರು. ಆದರೂ ನಾವು ಜನಪರವಾಗಿ ಕೆಲಸ ಮಾಡಿದೆವು. ಏಕೆಂದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಯಾರನ್ನೂ ನಾನು ಟೀಕೆ ಮಾಡುವುದಿಲ್ಲ. ನಮ್ಮ ಕೆಲಸ ಗಳು ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತವೆ ಎಂದು ಹೇಳಿದರು.

Tags:
error: Content is protected !!