- ಶಿವಾಜಿ ಗಣೇಶ್
ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯತ್ವ ಪಡೆದು ಅದರ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಇನ್ನು ಮುಕ್ತ ಅವಕಾಶ. ಸರ್ಕಾರಿ ನೌಕರರಿಗೆ ವಿಧಿಸಿದ್ದ ಈ ನಿಷೇಧವನ್ನು ತೆರವುಗೊಳಿಸಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರ ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಆರ್‌ಎಸ್‌ಎಸ್ ಚಟುವಟಿಕೆಯ ಮೇಲೆ ಕೇಂದ್ರ ಸರ್ಕಾರ ಮೂರು ಸಲ ನಿಷೇಧ ಹೇರಿತ್ತಾದರೂ, 1998ರಲ್ಲಿ ಅಧಿಕಾರಕ್ಕೆ ಬಂದು ಐದು ವರ್ಷ ಪೂರ್ಣಾವಧಿ ಸರ್ಕಾರ ನಡೆಸಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ನಿಷೇಧವನ್ನು ಹಿಂತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಷೇಧ ಹೇರಿತ್ತು. ಆಗಲೂ ವಾಜಪೇಯಿ ಅವರು ಈ ಬಗೆಗೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.
ಈ ಹಿಂದೆ ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ 1948ರಲ್ಲಿ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ಮತ್ತೆ ನಿಷೇಧ ಹಾಕಿದ್ದರು.
ಈಗ ಇದ್ದಕ್ಕಿದ್ದ ಹಾಗೆ ಮೋದಿ ಅವರು ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಇದ್ದ ನಿಷೇಧವನ್ನು ನಿಷೇಧವನ್ನು ಏಕೆ ಹಿಂತೆಗೆದುಕೊಂಡರು, ಅದಕ್ಕಿರುವ ಬಲವಾದ ಕಾರಣಗಳೇನು ಎನ್ನುವುದು ಈಗಿನ ಪ್ರಶ್ನೆ, ನಿಷೇಧ ಇರಲಿ ಬಿಡಲಿ ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಬದ್ಧರಾಗಿರುವ ಅನೇಕ ನೌಕರರು ಮೊದಲಿನಿಂದಲೂ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಅದರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಸತ್ಯ. ಆದರೆ ಹಿಂದುತ್ವ, ಹಿಂದೂ ರಾಷ್ಟ್ರ ನಿರ್ಮಾಣ ಆರ್‌ಎಸ್‌ಎಸ್‌ನ ಮೂಲ ಸಿದ್ಧಾಂತ. ಮೋದಿ ಅವರ ಈಗಿನ ನಿರ್ಧಾರದಿಂದ ಆರ್‌ಎಸ್‌ಎಸ್ ಪುಳಕಿತವಾದಂತೆ ಕಂಡು ಬಂದಿಲ್ಲ. ಆದರೆ ತಮ್ಮ ಸಿದ್ಧಾಂತ ಮತ್ತು ಸಂಘಟನೆಯ ಶಕ್ತಿಗೆ ಮೋದಿ ಸರ್ಕಾರ ತಲೆ ಬಾಗಿದೆ ಎನ್ನುವ ಸಂತೃಪ್ತಿಯಷ್ಟೆ.
ಮೋದಿ ಅವರ ಈ ನಿರ್ಧಾರ ದಿಢೀರ್ ನಿಲುವೇ ಅಥವಾ ರಾಜಕೀಯ ಲೆಕ್ಕಾಚಾರದ ನಿರ್ಧಾರವೇ ಎನ್ನುವುದು ಈಗ ಚರ್ಚಿತ ವಿಷಯ. ಆರ್‌ಎಸ್‌ಎಸ್ ಸ್ಥಾಪನೆಯಾಗಿ 2025ಕ್ಕೆ ನೂರು ವರ್ಷ. ಈ ಹಿನ್ನೆಲೆಯಲ್ಲೂ ಮೋದಿ ಸರ್ಕಾರ ಚಿಂತನೆ ಮಾಡಿರಲೂಬಹುದು. ಇದು ಆರ್‌ಎಸ್‌ಎಸ್‌ಗೆ ನೀಡಿರುವ ಕೊಡುಗೆ, ಸಂಘದ ಮೂಲಗಳು ಮತ್ತು ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಹೆಸರು ಹೇಳದೆ ಅವರ ಕಾರ್ಯವೈಖರಿ ಮತ್ತು ನಡವಳಿಕೆಯನ್ನು ಪರೋಕ್ಷವಾಗಿ ಟೀಕಿಸುತ್ತಾ ಬಂದುದನ್ನು ಗಮನಿಸಿದರೆ ಆರ್‌ಎಸ್‌ಎಸ್ ಮತ್ತು ಮೋದಿ ಅವರ ನಡುವಣ ಬಾಂಧವ್ಯ ಸರಿ ಇಲ್ಲ ಎನ್ನುವುದು ಸ್ಪಷ್ಟ.
ಭಾಗವತ್ ಅವರು ಬಹಿರಂಗವಾಗಿಯೇ ಟೀಕಿಸಿರುವುದರ ಉದ್ದೇಶ ಮತ್ತು ಹಿನ್ನೆಲೆಯನ್ನು ಮೋದಿ ಅವರು ಚೆನ್ನಾಗಿಯೇ ಅರ್ಥ ಮಾಡಿಕೊಂಡು ಇದುವರೆಗೆ ಆಗಿರುವ ಅನಾಹುತ ಮತ್ತು ಅಪಾರ್ಥಗಳನ್ನು ಸರಿ ಮಾಡಿಕೊಳ್ಳುವ ಕ್ರಿಯೆಯಲ್ಲಿ ತೊಡಗಿರುವುದು ಎದ್ದು ಕಾಣುತ್ತದೆ. ಮೋದಿ ಅವರು ತಮ್ಮನ್ನು ‘ದೇವದೂತ’ ಎನ್ನುವ ಅರ್ಥದಲ್ಲಿ ಮಾತನಾಡಿರುವುದನ್ನು ಭಾಗವತ್ ಅವರು ಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಬುದ್ಧಿ ಕಲಿಸಬೇಕೆನ್ನುವ ಕಾರಣದಿಂದ ಆರ್ ಎಸ್‌ಎಸ್ ಕಾರ್ಯಕರ್ತರು ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಲಿಲ್ಲ ಎಂಬುದಾಗಿ ಆರ್‌ಎಸ್ ಎಸ್‌ನ ಕೆಲವು ರಾಷ್ಟ್ರೀಯ ಮುಖಂಡರೇ ಹೇಳಿಕೊಂಡಿದ್ದಾರೆ. ಆರ್‌ಎಸ್‌ಎಸ್ ಲೋಕಸಭೆ ಚುನಾವಣೆಯಲ್ಲಿ ತಟಸ್ಥವಾಗಿದ್ದರಿಂದಲೇ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಸಂಖ್ಯಾ ಬಲವನ್ನು ಪಡೆಯಲಿಲ್ಲ ಎನ್ನುತ್ತಾರೆ. ಹಿಂದಿನ ಲೋಕಸಭೆಯಲ್ಲಿ ಬಿಜೆಪಿಗೆ ಇದ್ದ 303 ಸ್ಥಾನಗಳು ಈಗ 240 ಸ್ಥಾನಕ್ಕೆ ಇಳಿಯಬೇಕಾದರೆ ಮೋದಿ ಅವರಲ್ಲಿರುವ ‘ಅಹಂಕಾರ’ವೇ ಕಾರಣ ಎನ್ನುವುದು ಆರ್‌ಎಸ್‌ಎಸ್ ನಾಯಕರ ವಾದ.
ಆರ್‌ಎಸ್‌ಎಸ್ ಹಿಂದೂ ರಾಷ್ಟ್ರೀಯವಾದದ ಸಿದ್ಧಾಂತದಲ್ಲಿ ಕೆಲಸ ಮಾಡಿಕೊಂಡಿರುವ ಸ್ವತಂತ್ರ ಸಂಘಟನೆ. ಬಿಜೆಪಿಗೆ ಅದರ ಸಹಕಾರದ ಅಗತ್ಯವೇನೂ ಕಾಣುತ್ತಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಯೂ ಆರ್‌ಎಸ್‌ಎಸ್ ನಾಯಕರು ಬಿಜೆಪಿಯ ಜೊತೆ ಚುನಾವಣೆಯಲ್ಲಿ ಕೈಜೋಡಿಸದೆ ಹಿಂದೆ ಸರಿಯಲು ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆದರೆ ಸರ್ಕಾರ ಮತ್ತು ಪಕ್ಷವನ್ನು ನಿಜವಾದ ಅರ್ಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಸತ್ಯದ ಅರಿವಿದೆ. ನವೆಂಬರ್ ವೇಳೆಗೆ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಆರ್‌ಎಸ್‌ಎಸ್ ಜೊತೆಗೆ ಹಳಸಿ ಹೋಗಿರುವ ಸಂಬಂಧವನ್ನು ಸರಿಮಾಡಿಕೊಳ್ಳದಿದ್ದರೆ ಈ ನಾಲ್ಕೂ ರಾಜ್ಯಗಳ ಚುನಾವಣೆ ಫಲಿತಾಂಶ ವ್ಯತಿರಿಕ್ತವಾದರೆ ತಮ್ಮ ಕುರ್ಚಿಗೇ ಕಂಟಕವಾಗಬಹುದು ಎನ್ನುವ ಅಪಾಯದ ಅರಿವೂ ಅವರಿಗೆ ಇದ್ದಂತಿದೆ.
ಆರ್‌ಎಸ್‌ಎಸ್ ಚುಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದಕ್ಕೆ ಈಗ ಮುಕ್ತ ಸ್ವಾತಂತ್ರ್ಯವೇನೋ ಸಿಕ್ಕಿತು. ಆದರೆ ಇದರಿಂದ ಸರ್ಕಾರದ ಆಡಳಿತದ ಮೇಲೆ ಆಗುವ ಪರಿಣಾಮ ಮತ್ತು ದುಷ್ಟಪರಿಣಾಮಗಳೇನು? ಹಾಗೆಯೇ ಈ ನಿರ್ಧಾರದಿಂದ ಆರ್‌ಎಸ್‌ಎಸ್ ಸಂಘಟನೆಗೆ ಆಗುವ ಲಾಭಗಳೇನು ಎನ್ನುವುದನ್ನು ನೋಡಬೇಕಿದೆ. ನೌಕರರ ಮನಸ್ಸಿನಲ್ಲಾಗುವ ಈ ಬದಲಾವಣೆ ಸಂಘವನ್ನು ಮತ್ತು ಅದರ ಈ ಸಿದ್ಧಾಂತವನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿ ಸರ್ಕಾರದ ನಿರ್ಧಾರ ಸಹಜವಾಗಿಯೇ ನೆರವಾಗಲಿದೆ. ಹಾಗೆಯೇ ಆರ್‌ಎಸ್‌ಎಸ್ ಸರ್ಕಾರದ ಆಡಳಿತ ವ್ಯವಸ್ಥೆಯೊಳಗೆ ತನ್ನ ಕಬಂಧಬಾಹುವನ್ನು ಸಹಾಯಕವಾಗುವುದನ್ನು ತಳ್ಳಿಹಾಕಲಾಗದು. ಹೀಗಾಗುವುದರಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಬೆಳವಣಿಗೆ ಮತ್ತಷ್ಟು ಹಿಗ್ಗಲು ಮುಕ್ತ ಅವಕಾಶ ದೊರೆತಂತಾಗಲಿದೆ. ಇನ್ನು ಮುಂದೆ ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ…’ ಎಂದು ಆರಂಭವಾಗುವ ಸಂಘದ ಪ್ರಾರ್ಥನೆ ಹಲವು ಸರ್ಕಾರಿ ನೌಕರರ ಬಾಯಲ್ಲಿ ಗುನುಗಬಹುದು.
ಬಜೆಟ್ ತಾರತಮ್ಯ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿ ಒಂದು ವಾರ ಕಳೆಯಿತು. ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರದ ಊರುಗೋಲಾಗಿರುವ ಜನತಾದಳ (ಯು) ಆಡಳಿತವಿರುವ ಬಿಹಾರ ಮತ್ತು ತೆಲುಗು ದೇಶಂ ಪಕ್ಷದ ಆಡಳಿತದ ಆಂಧ್ರ ಪ್ರದೇಶಕ್ಕೆ ಕ್ರಮವಾಗಿ 59 ಸಾವಿರ ಕೋಟಿ ರೂ. ಮತ್ತು 15 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ನೀಡಿರುವುದು ಈಗ ‘ಇಂಡಿಯಾ ಮೈತ್ರಿಕೂಟ’ದ ರಾಜ್ಯಗಳ ಕಣ್ಣು ಕೆಂಪಗಾಗಿಸಿದೆ.
ಈ ತಾರತಮ್ಯವು ಪ್ರಧಾನಿ ಮೋದಿ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡಿರುವ ತಂತ್ರಗಾರಿಕೆ ಎನ್ನುವ ಟೀಕೆ ಎಲ್ಲೆಡೆ ಕೇಳಿ ಬರುತ್ತಿದೆ. ಈ ಟೀಕೆಯಲ್ಲಿ ಸತ್ಯ ಇಲ್ಲ ಎನ್ನಲಾಗದು. ಮೋದಿ ಅವರ ಮನವೊಲಿಸಿ ಗರಿಷ್ಟ ಪ್ರಮಾಣದ ಅನುದಾನವನ್ನು ಪಡೆಯುವಲ್ಲಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಯಶಸ್ವಿಯಾಗಿದ್ದಾರೆ. ಈ ಎರಡೂ ರಾಜ್ಯಗಳಿಗೆ ಭಾರಿ ಮೊತ್ತದ ಅನುದಾನ ನೀಡಿರುವುದರಿಂದ ಇನ್ನು ಮೋದಿ ಅವರ ಕುರ್ಚಿಗೆ ಯಾವ ಧಕ್ಕೆಯೂ ಬರಲಾರದು. ಯಾವುದೇ ಕಾರಣಕ್ಕೂ ಮೋದಿ ಅವರಿಗೆ ತೊಂದರೆ ಕೊಡುವ ರಾಜಕಾರಣದ ಅವಶ್ಯಕತೆಯೂ ಈ ಉಭಯ ನಾಯಕರಿಗೆ ಇಲ್ಲ. ಉಭಯ ನಾಯಕರೂ ಎಪ್ಪತ್ತೈದು ದಾಟಿರುವ ಈ ವಯಸ್ಸಿನಲ್ಲಿ ಜಿದ್ದಾ ಜಿದ್ದಿನ ರಾಜಕಾರಣ ಮಾಡುವ ಹಠಮಾರಿತನವೂ ಈಗ ಅವರಲ್ಲಿ ಉಳಿದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಕೇಂದ್ರದ ಈ ನೆರವಿನಿಂದ ತಮ್ಮ ರಾಜ್ಯಗಳನ್ನು ಅಭಿವೃದ್ಧಿ ಪಡಿಸಲು ಸುವರ್ಣಾವಕಾಶ ಸಿಕ್ಕಿದೆ ಎನ್ನುವ ತೃಪ್ತಿ ಇವರದ್ದು.
ಆದರೆ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಹೀಗೆ ತಾರತಮ್ಯ ಮಾಡಬಹುದೇ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಮಹಾರಾಷ್ಟ್ರ ಹಾಗೂ ದಕ್ಷಿಣ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ತೆರಿಗೆ ಹಣವನ್ನು ಗಮನಿಸಿದರೆ ಈ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿರುವುದು ಬೆಳಕಿನಷ್ಟೇ ನಿಚ್ಚಳ. ಜನಸಂಖ್ಯೆ ಮತ್ತು ದೊಡ್ಡದಾದ ಭೂ ಪ್ರದೇಶ ಹೊಂದಿರುವ ಮಾನದಂಡದ ಆಧಾರದ ಮೇಲೆ ಯಾವುದೇ ಸರ್ಕಾರವಿರಲಿ ಬಿಹಾರ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ಪಡೆಯುತ್ತಲೇ ಬಂದಿದೆ. ಆದರೂ ಅಲ್ಲಿ ಶಿಕ್ಷಣ, ಆರೋಗ್ಯ, ಮತ್ತಿತರೆ ಮೂಲಸೌಕರ್ಯಗಳ ಕೊರತೆಯಿಂದ ಬಡತನದಿಂದ ಹೊರಬರಲು ಆಗಿಲ್ಲ. ರಸ್ತೆ, ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೆಂದು 56 ಸಾವಿರ ಕೋಟಿ ರೂ. ಅನುದಾನವನ್ನು ನಿರಾಯಾಸವಾಗಿ ಈ ಬಾರಿ ಪಡೆದುಕೊಳ್ಳುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದುಳಿದಿರುವಿಕೆಗೆ ಯಾರು ಮತ್ತು ಏನು ಕಾರಣ ಎನ್ನುವುದನ್ನು ಅವಲೋಕನ ಮಾಡಬೇಕಿದೆ.
ಆಂಧ್ರ ಪ್ರದೇಶವು 2014ರಲ್ಲಿ ಇಬ್ಬಾಗವಾದ ಮೇಲೆ ತೆಲಂಗಾಣಕ್ಕೆ ಹೈದರಾಬಾದ್ ಮಹಾನಗರ ಸೇರಿದ್ದರಿಂದ ಆಂಧ್ರ ಪ್ರದೇಶ ರಾಜ್ಯ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ. ಜೊತೆಗೆ ಪ್ರತ್ಯೇಕ ರಾಜಧಾನಿಯನ್ನೂ ನಿರ್ಮಿಸಿಕೊಳ್ಳಬೇಕಿದೆ. ಹಾಗಾಗಿ ಹೊಸದಾಗಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು 15 ಸಾವಿರ ಕೋಟಿ ರೂ. ಅನುದಾನವನ್ನು ಈ ಬಜೆಟ್ಟಿನಲ್ಲಿ ಪಡೆಯುತ್ತಿದ್ದಾರೆ.
ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ನೀರಾವರಿ, ವಿದ್ಯುತ್, ಕುಡಿಯುವ ನೀರು ಮತ್ತು ಇತರೆ ಮೂಲಸೌಕರ್ಯಗಳ ಕಾರ್ಯಕ್ರಮಗಳಿಗೆ ಮುಂದುವರಿಸಿರುವ ನೆರವು ಬಿಟ್ಟರೆ ಬೇರಾವ ವಿಶೇಷ ಅನುದಾನಗಳನ್ನೂ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಬಜೆಟ್ಟಿನಲ್ಲಿ ನೀಡಿಲ್ಲವಾದ್ದರಿಂದ ಈಗ ಪ್ರಧಾನಿ ಮೋದಿ ಅವರು ಈ ಎಲ್ಲ ರಾಜ್ಯಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯಗಳ ರಾಜಧಾನಿಯಂತಹ ಮಹಾನಗರಗಳಲ್ಲಿ ಸಂಚಾರ ಒತ್ತಡ ಕಡಿಮೆ ಮಾಡಲು ಕೈಗೆತ್ತಿಕೊಂಡಿರುವ ಮೆಟ್ರೋ ರೈಲು ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ ಮತ್ತು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ಮತ್ತು ನಗರ ಹಾಗೂ ಗ್ರಾಮೀಣ ಭಾಗದ ಜನರ ಬದುಕನ್ನು ಉತ್ತಮಪಡಿಸುವ ಕಾರ್ಯಕ್ರಮ, ಕೃಷಿ ಹಾಗೂ ನೀರಾವರಿ ಯೋಜನೆಗಳ ವಿಸ್ತರಣೆಗೆ ಹಣವಿಲ್ಲದೆ ಕೊರಗುವಂತಾಗಿದೆ. ಇದರಿಂದ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ರಾಜ್ಯಗಳನ್ನು ನಿಸ್ತೇಜಗೊಳಿಸಿದಂತಾಗಲಿದೆ.
ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿಯನ್ನು ವಿರೋಧಿಸಿ ಕರ್ನಾಟಕ, ತಮಿಳುನಾಡು, ಕೇರಳ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಶನಿವಾರ ನಡೆದ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿರುವುದನ್ನು ಪ್ರಧಾನಿ ಮೋದಿ ಅವರು ಮುಕ್ತಮನಸ್ಸಿನಿಂದ ಗಂಭೀರವಾಗಿ ಪರಿಶೀಲಿಸಬೇಕಿದೆ.
ಕಟ್ಟಾ ಹಿಂದುತ್ವವಾದಿ ಮನಸ್ಸುಳ್ಳ ಸರ್ಕಾರಿ ನೌಕರರು ಇನ್ನು ಮುಂದೆ ಯಾವ ಸಂಕೋಚ ಮತ್ತು ಹೆದರಿಕೆ ಇಲ್ಲದೆ ಆರ್‌ಎಸ್‌ಎಸ್ ಬೈಠಕ್ ಮತ್ತು ಅದರ ಕವಾಯತು ಇತ್ಯಾದಿ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸುವುದಕ್ಕೆ ಯಾರ ಅಡ್ಡಿಯೂ ಇರಲಾರದು. ಇಂತಹವರು ತಮ್ಮ ಕಚೇರಿಗಳಲ್ಲೂ ಕೆಲಸ ಕಾರ್ಯದ ವೇಳೆ ಆರ್‌ಎಸ್‌ಎಸ್ ಸಿದ್ಧಾಂತ ಮತ್ತು ಅದರ ದಿನ ನಿತ್ಯದ ಬೆಳವಣಿಗೆ ಬಗೆಗೂ ಅವರಿವರ ಜೊತೆ ಲೋಕಾಭಿರಾಮವಾಗಿ ಚರ್ಚಿಸಲು ಅನುವು ಮಾಡಿಕೊಡಬಹುದು. ಹಾಗೆಯೇ ಆರ್‌ಎಸ್‌ಎಸ್ ವಿಚಾರವನ್ನು ನಂಬಿದವರ ಪರವಾಗಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಸಹಾಯ ಮಾಡಬಹುದು. ಸಂಘದ ವಿರೋಧಿಗಳ ಬೇಡಿಕೆಗಳನ್ನು ತಳ್ಳಿಹಾಕುವ ಮನಃಸ್ಥಿತಿ ನೌಕರರಲ್ಲಿ
ಬೆಳೆಯಬಹುದು.