Mysore
23
scattered clouds
Light
Dark

ಮನುಜ ಮತ, ವಿಶ್ವಪಥದೆಡಗೆ ಯುವಸಮೂಹ ಸಾಗಲಿ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು/ಟಿ.ನರಸೀಪುರ:  ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವುದು ಕುವೆಂಪು ಅವರ ಆಶಯವಾಗಿತ್ತು. ಮನುಜ ಮತ, ವಿಶ್ವಪಥ ಎಂಬ ಅವರ ಚಿಂತನೆಯನ್ನು ನಮ್ಮ ಯುವಸಮೂಹ ತುರ್ತಾಗಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ  ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಯಾಚೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ರಾಷ್ಟ್ರಕವಿ ಕುವೆಂಪು ರವರ ಚಿತಾಭಸ್ಮ ಸ್ಮಾರಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು‌.

ಬುದ್ಧ, ಬಸವ, ಅಂಬೇಡ್ಕರ್ ಸಾಲಿನಲ್ಲಿ ಮೇರು ವ್ಯಕ್ತಿತ್ವವುಳ್ಳ ಕುವೆಂಪು ಅವರನ್ನು ನೋಡಬೇಕಿದ್ದು ಕುವೆಂಪು ಅವರ ಚಿಂತನೆ ಎಲ್ಲರಿಗೂ ಅಗತ್ಯವಿದೆ ಎಂದು ಹೇಳಿದರು.

ವೈಚಾರಿಕತೆ, ವೈಜ್ಞಾನಿಕತೆ ನೆಲೆಗಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ರಾಷ್ಟ್ರಕವಿ ಕುವೆಂಪು ಅವರ ಚಿತಾಭಸ್ಮ ಸ್ಮಾರಕ ಭವನದಲ್ಲಿ ಉತ್ಕೃಷ್ಟ ಚಿಂತನೆಗಳು ಹಾಗೂ ಕಾರ್ಯಕ್ರಮಗಳು ಜರುಗಲಿ. ಈ ಭಾಗದಿಂದ ರಾಜ್ಯದ ಉದ್ದಗಲಕ್ಕೂ ಪಸರಿಸಲಿ ಎಂದು ನುಡಿದರು.

ಭೌದ್ಧಿಕವಾಗಿ ನಾವು ಎಚ್ಚರವಾಗದಿದ್ದರೆ ಶ್ರೇಣಿಕೃತ ವ್ವಸಸ್ಥೆಯಲ್ಲಿ ಪಾತಾಳಕ್ಕೆ ತಳ್ಳಲಿದ್ದಾರೆ. ಕುವೆಂಪು ಅವರ ವಿಚಾರಧಾರೆ ಜೀವಂತ ಉಳಿಸಿ ಶೂದ್ರ ಸಮಾಜವನ್ನು ಕತ್ತಲಿನಿಂದ ಬೆಳಕಿಗೆ ಕರೆತಂದು ವಿಶ್ವಮಾನವರನ್ನು ಸೃಷ್ಟಿ ಮಾಡುವ ಮೂಲಕ ಮನುಷ್ಶ ಸಮಾಜ ಉಳಿಸಲು ಈ ಕ್ಷೇತ್ರ ಪ್ರೇರಣೆಯಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ರೀಯಾಯಿತಿ ದರದಲ್ಲಿ ಬಿತ್ತನೆ ಭತ್ತವನ್ನು ಸಾಂಕೇತಿಕವಾಗಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನಿಲ್ ಬೋಸ್, ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಶೇಖರ್, ಸರೋಜಮ್ಮ, ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಚಲುವರಾಜು, ರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾಗಾಂದನಾಥಸ್ವಾಮೀಜಿ, ಸ್ಮಾರಕಕ್ಕೆ ನಿವೇಶನ ದಾನ ಮಾಡಿದ ವೈ.ಎನ್.ಶಂಕರೇಗೌಡ, ಹಿರಿಯ ಮುಖಂಡರಾದ ವಜ್ರೇಗೌಡ, ಮುಖಂಡರಾದ ಮುನವರ್ ಪಾಷ, ವೀಣಾ ಶಿವಕುಮಾರ್, ಚನ್ನಕೇಶವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.