‘ಉಸಿರೇ ಉಸಿರೇ’ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು ನಟ ಮತ್ತು ‘ಬಿಗ್ ಬಾಸ್’ ಖ್ಯಾತಿಯ ರಾಜೀವ್ ಹನು. ಆದರೆ, ಚಿತ್ರ ತಡವಾಗಿ ಬಿಡುಗಡೆಯಾಗಿ, ಬಹಳ ಬೇಗನೆ ಮಾಯವಾಯಿತು. ಆ ನಂತರ ರಾಜೀವ್ ಮುಮದಿನ ಹೆಜ್ಜೆ ಏನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಉತ್ತರ ಕೊಟ್ಟಿರುವ ರಾಜೀವ್, ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ರಾಜೀವ್ ಹನು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಘೋಷಣೆಯಾಗಿದೆ. ಚಿತ್ರಕ್ಕೆ ‘ಬೇಗೂರು ಕಾಲೋನಿ’ ಎಂದು ಹೆಸರಿಡಲಾಗಿದ್ದು, ಚಿತ್ರದ ಮೊದಲ ನಟ ಸಹ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ‘ರಾಜೀವ’ ಎಂಬ ಸಿನಿಮಾ ನಿರ್ದೇಶಿಸಿದ್ದ ‘ಫ್ಲೈಯಿಂಗ್ ಕಿಂಗ್’ ಮಂಜು ನಿರ್ದೇಶನದಲ್ಲಿ ‘ಬೇಗೂರು ಕಾಲೋನಿ’ ಚಿತ್ರವು ಮೂಡಿಬರುತ್ತಿದೆ. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮಂಜು, ಗಲ್ಲಿ ಶಿವ ಎಂಬ ಪ್ರಮುಖ ಪಾತ್ರದಲ್ಲೂ ಮಂಜು ನಟಿಸುತ್ತಿದ್ದಾರೆ. ಪಲ್ಲವಿ ಪರ್ವ ಮತ್ತು ಕೀರ್ತಿ ಭಂಡಾರಿ ನಾಯಕಿಯರಾಗಿ ಅಭಿನಯಿಸುತ್ತಿದ್ದು, ಪೋಸಾನಿ ಕೃಷ್ಣಮುರಳಿ, ರಾಜೀವ್ ಬೆಳವಾಡಿ, ಬಲ ರಾಜವಾಡಿ, ಸಯ್ಯದ್ ಸಲಾಂ, ಗಣೇಶ್ ನಾಯಕ್ ಮುಂತಾದವರು ನಟಿಸಿದ್ದಾರೆ.
‘ಬೇಗೂರು ಕಾಲೋನಿ’ ಚಿತ್ರದ ಚಿತ್ರೀಕರಣ ಸದ್ದಿಲ್‍ಲದೆ ಮುಗಿದಿದ್ದು, ಬೆಂಗಳೂರಿನ ಬೇಗೂರು, ಸರ್ಜಾಪುರ, ಅತ್ತಿಬೆಲೆ, ಬೊಮ್ಮನಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಪ್ರೊಡಕ್ಷನ್ ನಡಿ ಶ್ರೀನಿವಾಸ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿಂದೆ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ‘ಜೆಸಿ’ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಕಾರ್ತಿಕ್ ಈ ಚಿತ್ರದ ಛಾಯಾಗ್ರಹಕರು, ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ.