ಮಂಡ್ಯ : ಸಾಕಷ್ಟು ವಿರೋಧದ ನಡುವೆಯೂ ಕೂಡ ಸರ್ಕಾರ ಮಂಡ್ಯ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಮುಂದಾಗಿದೆ. ಅಕ್ರಮಗಣಿಗಾರಿಕೆಯಿಂದ ಸಾವಿರಾರೂ ಕೋಟಿ ನಷ್ಟವಾಗುವುದರ ಜೊತೆಗೆ KRS ಜಲಾಶಯಕ್ಕೆ ಅಪಾಯದ ಭೀತಿ ಇದೆ. ಹೀಗಾಗಿ ಟ್ರಯಲ್ ಬ್ಲಾಸ್ಟ್ ಮಾಡುವುದು ಬೇಡ ಎಂದು ರೈತ ಮುಖಂಡರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಟ್ರಯಲ್ ಬ್ಲಾಸ್ಟ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಈ ವಿವಾದದ ಬೆನ್ನಲ್ಲೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಧ್ಯಪ್ರವೇಶ ಮಾಡಿದ್ದು, ಬೇಬಿಬೆಟ್ಟ ಆಸ್ತಿ ಮೈಸೂರು ಅರಮನೆಗೆ ಸೇರಿದೆ. ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ನಡೆಸಬೇಡಿ ಎಂದು ಅಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರ ಬರೆದಿದ್ದಾರೆ.
ಬೇಬಿ ಬೆಟ್ಟದ ಅಮೃತ ಮಹಲ್ ಕಾವಲ್ ನ ಸರ್ವೆ ನಂಬರ್ ೧ ರ ೧೬೨೩ ಎಕರೆ ಅರಮನೆಗೆ ಸೇರಿದ ಆಸ್ತಿ. ಈ ಆಸ್ತಿಯನ್ನ ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. KRS ಡ್ಯಾಂ ಸಮೀಪವಿರುವ ನಮ್ಮ ಖಾಸಗಿ ಜಮೀನಿನಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಹಕ್ಕು ಯಾರಿಗೂಇಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
KRS ಅಣೆಕಟ್ಟು ಬಳಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ಗೆ ಅವಕಾಶ ನೀಡಬಾರದು. ಮೈಸೂರು ಸಂಸ್ಥಾನವಿದ್ದ ಸಮಯದಲ್ಲೆ ಭಾರತ ಸರ್ಕಾರ ಈ ಆಸ್ತಿಯನ್ನು ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಂದೆಗೆ ನೀಡಿದ್ದು, ನನ್ನ ಪತಿ ೨೦೧೩ ರ ಡಿಸೆಂಬರ್ ೧೦ ರಂದು . ಈ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯವರಿಗೆ ಅರ್ಜಿ ಸಲ್ಲಿಸಿದರೂ ಕೂಡ ನಾನ ಕಾರಣಗಳನ್ನ ಹೇಳುತ್ತಾ ಖಾತೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ ಬೇಬಿಬೆಟ್ಟ ಕಾವಲ್ ನ ಸರ್ವೆ ನಂ ೧ ರ ಪ್ರದೇಶವನ್ನ ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದೇನೆ ಎಂದು ಪತ್ರದಲ್ಲಿ ಪ್ರಮೋದಾ ದೇವಿ ತಿಳಿಸಿದ್ದಾರೆ.