ಇದೇ ಜುಲೈ ತಿಂಗಳ 12 ರಿಂದ 31ರವರೆಗೆ ಅಂದರೆ 20 ದಿನಗಳ ಕಾಲ ಪ್ರತಿದಿನ ಒಂದು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿದೆ.
ರಾಜ್ಯದಲ್ಲಿ ಈಗ ತಾನೆ ಮಳೆ ಪ್ರಾರಂಭವಾಗಿದ್ದು, ಜಲಾಶಯಗಳಿಗೆ ಸ್ವಲ್ಪ ಮಟ್ಟಿಗೆ ನೀರು ಬರುತ್ತಿದೆ. ಇದುವರೆಗೂ ಯಾವುದೇ ಜಲಾಶಯಗಳು ಭರ್ತಿಯಾಗಿಲ್ಲ. ವಾಸ್ತವ ಪರಿಸ್ಥಿತಿ ಗೊತ್ತಿಲ್ಲದೆ ಕಾವೇರಿ ನೀರು ನಿಯಂತ್ರಣ ಸಮಿತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಇದೇ ರೀತಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಎಲ್ಲದಕ್ಕಿಂತಲೂ ಆಶ್ಚರ್ಯಕರ ಸಂಗತಿ ಎಂದರೆ, ತಮಿಳುನಾಡು ಸರ್ಕಾರ ಮೆಟ್ಟೂರು ಜಲಾಶಯದಿಂದ ಕಳೆದ 15 ದಿನಗಳಲ್ಲಿ ಸುಮಾರು 5 ಟಿಎಂಸಿ ನೀರನ್ನು ನದಿಗೆ ಹರಿಸಿದೆ ಎಂದು ಹೇಳಲಾಗುತ್ತಿದೆ.
ಈಗ ತಮಿಳುನಾಡಿಗೆ ನೀರಿನ ಅವಶ್ಯಕತೆ ಇಲ್ಲದೇ ಇದ್ದರೂ ನೀರಿಗಾಗಿ ಬೇಡಿಕೆ ಇಟ್ಟಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಮೊದಲು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು.





