Mysore
23
broken clouds

Social Media

ಸೋಮವಾರ, 30 ಡಿಸೆಂಬರ್ 2024
Light
Dark

ಪನ್ನಗಾಭರಣ ನಿರ್ದೇಶನದ ಚಿತ್ರದಲ್ಲಿ ಗಣೇಶ್‍?

ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿದೆ. ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರವು ಆಗಸ್ಟ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಕೃಷ್ಣಂ ಪ್ರಣಯ ಸಖಿ’ ನಂತರ ಗಣೇಶ್‍ ಯಾವ ಚಿತ್ರದಲ್ಲಿ ನಟಿಸುತ್ತಾರೆ? ಇಂಥದ್ದೊಂದು ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇದೆ.

ಹೀಗಿರುವಾಗಲೇ, ಪನ್ನಗಾಭರಣ ನಿರ್ದೇಶನದ ಚಿತ್ರವೊಂದರಲ್ಲಿ ಗಣೇಶ್ ಅಭಿನಯಿಸುತ್ತಿರುವ ಸುದ್ದಿ ಬಂದಿದೆ. ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಮಗನಾದ ಪನ್ನಗ, ಕೆಲವು ವರ್ಷಗಳ ಹಿಂದೆ ‘ಹ್ಯಾಪಿ ನ್ಯೂ ಇಯರ್‍’ ಎಂಬ ಚಿತ್ರ ನಿರ್ದೇಶಿಸಿದ್ದರು. ಬಿ.ಸಿ. ಪಾಟೀಲ್‍ ನಿರ್ಮಾಣದ ಈ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಆ ನಂತರ ಅವರು ಪಿ.ಆರ್‍.ಕೆ. ಪ್ರೊಡಕ್ಷನ್ಸ್ಗಾಗಿ ‘ಫ್ರೆಂಚ್‍ ಬಿರಿಯಾನಿ’ ಚಿತ್ರವನ್ನು ನಿರ್ದೇಶಿಸಿದರು. ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರ ಮೆಚ್ಚುಗೆ ಪಡೆದಿತ್ತು.

ಈಗ ಅದಾಗಿ ನಾಲ್ಕು ವರ್ಷಗಳ ನಂತರ ಗಣೇಶ್‍ ಅಭಿನಯದಲ್ಲಿ ಪನ್ನಗ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಇದೊಂದು ಕಾಮಿಡಿ ಚಿತ್ರವಾಗಿದ್ದು, ಗಣೇಶ್ ಇಮೇಜ್‍ಗೆ ಹೇಳಿ ಮಾಡಿಸಿದೆಯಂತೆ. ಈಗಾಗಲೇ ಗಣೇಶ್‍ ಮತ್ತು ಪನ್ನಗ ನಡುವೆ ಒಂದು ಸುತ್ತಿನ ಮಾತುಕತೆಯೂ ಆಗಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ? ಯಾವಾಗ ಶುರುವಾಗುತ್ತದೆ? ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ. ಸದ್ಯಕ್ಕೆ ಕಥೆ ಮಾತ್ರ ಓಕೆ ಆಗಿದ್ದು, ಮಿಕ್ಕ ವಿಷಯಗಳು ಮುಂದಿನ ದಿನಗಳಲ್ಲಿ ಹೊರಬೀಳಬೇಕಿದೆ.

ಇದಲ್ಲದೆ, ಗಣೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನೊಂದು ಚಿತ್ರತಂಡ ಗಣೇಶ್‍ಗೆ ಶುಭಾಷಯಗಳನ್ನು ಕೋರಿದೆ. ಹಾಗೆ ನೋಡಿದರೆ ಇದು ಹೊಸ ಚಿತ್ರವೇನಲ್ಲ. ಕಳೆದ ವರ್ಷವೇ ವಿಖ್ಯಾತ್‍ ಪ್ರೊಡಕ್ಷನ್ಸ್ ಸಂಸ್ಥೆಯಡಿ ವಿಖ್ಯಾತ್‍ ಒಂದು ಹೊಸ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ ಮತ್ತು ಅದರಲ್ಲಿ ಗಣೇಶ್‍ ಮತ್ತು ರಮೇಶ್‍ ಅರವಿಂದ್‍ ಜೊತೆಯಾಗಿ ನಟಿಸುತ್ತಿದ್ದಾರೆ ಎಂಬ ವಿಷಯ ಹೊರಬಿದ್ದಿತ್ತು. ಅಷ್ಟೇ ಅಲ್ಲ, ಇಬ್ಬರೂ ನಟರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಶುಭಾಶಯಗಳನ್ನು ಕೋರಿತ್ತು.

ಈಗ ಆ ಚಿತ್ರವು ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಮುಂಚೆ ಈ ಚಿತ್ರವನ್ನು ವಿಖ್ಯಾತ್‍ ನಿರ್ಮಿಸಿ-ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಈಗ ನಿರ್ದೇಶನ ಮಾತ್ರ ವಿಖ್ಯಾತ್ ಮಾಡುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಧನಂಜಯ್‍ ಅಭಿನಯದ ‘ಅಣ್ಣ ಫ್ರಮ್‍ ಮೆಕ್ಸಿಕೋ’ ಚಿತ್ರ ನಿರ್ಮಿಸುತ್ತಿರುವ ಸತ್ಯ ರಾಯಲ ನಿರ್ಮಿಸುತ್ತಿದ್ದಾರೆ ಎಂದು ಸುದ್ದಿಯಾಗಿದೆ.

ಅಲ್ಲಿಗೆ ‘ಕೃಷ್ಣಂ ಪ್ರಣಯ ಸಖಿ’ ನಂತರ ಗಣೇಶ್‍ ಅಭಿನಯದ ಎರಡು ಚಿತ್ರಗಳ ಕುರಿತು ಸುದ್ದಿ ಕೇಳಿ ಬರುತ್ತಿವೆ. ಈ ಪೈಕಿ ಯಾವುದು ಮೊದಲು ಸೆಟ್ಟೇರುತ್ತದೋ ನೋಡಬೇಕು.

Tags: