ಮದ್ದೂರು : ರಾಜ್ಯದೆಲ್ಲೆಡೆ ವಿಶಿಷ್ಟ ಆಚರಣೆಯಲ್ಲಿ ಮನೆ ಮಾತಾಗಿರುವ ತಾಲೂಕಿನ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಐತಿಹಾಸಿಕ ಹಿನ್ನೆಲೆಯ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವದ ಪ್ರಯುಕ್ತ ಬರುವಂತಹ ಭಕ್ತರಿಗೆ ಸಂಪ್ರದಾಯದಂತೆ ತಾವರೆ ಎಲೆ ಪ್ರಸಾದ ವಿತರಿಸಲಾಯಿತು. ತಾವರೆ ಎಲೆ ಶ್ರೀತೋಪಿನ ತಿಮ್ಮಪ್ಪನ ದೇವರ ಪತ್ನಿ ಲಕ್ಷ್ಮೀ ದೇವಿಗೆ ಪ್ರಿಯವಾಗಿರುವ ಕಾರಣ ಪ್ರತಿವರ್ಷವು ಕೂಡ ಈ ದೇವಸ್ಥಾನದಲ್ಲಿ ಉತ್ಸವದ ಪ್ರಯುಕ್ತ ಭಕ್ತರಿಗೆ ವಿಶೇಷ ತಾವರೆ ಎಲೆ ಊಟ ನೀಡಲಾಗುತ್ತದೆ.
ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಹರಿಸೇವೆ ಉತ್ಸವಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆದು ಬಳಿಕ ತಾವರೆ ಎಲೆಯಲ್ಲಿ ಪ್ರಸಾದ ಸ್ವೀಕರಿಸಿದರು. ಇನ್ನು ಉತ್ಸವದ ಪ್ರಯುಕ್ತ ದೇವಸ್ಥಾನದ ಆವರಣ ಹಾಗೂ ತಿಮ್ಮಪ್ಪನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.





