Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಮೈದುಂಬಿದ ಕಬಿನಿ

20,000 ಕ್ಯೂಸೆಕ್ಸ್ ಒಳ ಹರಿವು, 5,000 ಕ್ಯೂಸೆಕ್ಸ್ ನಿಂದ ದಿಢೀರ್ ಏರಿಕೆ

20,000 ಕ್ಯೂಸೆಕ್ಸ್  ನೀರು ಹೊರಕ್ಕೆ; ಗರಿಷ್ಟ ಮಟ್ಟ ತಲುಪಿದ ಜಲಾಶಯ

4 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಟ್ಟಿರುವುದರಿಂದ ಹೆಚ್ಚಾದ ರಭಸ

ಮಂಜು ಕೋಟೆ

ಎಚ್.ಡಿ.ಕೋಟೆ : ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ಉಂಟಾಗಿದ್ದ ತಿಕ್ಕಾಟಕ್ಕೆ ಉತ್ತರವೆಂಬಂತೆ ವರುಣ ಜೀವಜಲವನ್ನು ಧಾರೆಯೆರೆಯುತ್ತಿದ್ದಂತೆ ಧಾರಾಕಾರ ಮಳೆ ಸುರಿದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ತಾಲ್ಲೂಕಿನ ಕಬಿನಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಬೆಳಿಗ್ಗೆಯಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕೇರಳದ ವಯನಾಡು ಮತ್ತು ತಾಲ್ಲೂಕಿನ ಗಡಿಭಾಗದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ 5 ಸಾವಿರ ಕ್ಯೂಸೆಕ್ಸ್ ಇದ್ದ ಒಳಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ಸ್ ಗೆ ಏರಿಕೆಯಾಗಿ, 82 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ ಗರಿಷ್ಟ 84 ಅಡಿ ತಲುಪಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಬೆ.11 ಗಂಟೆಯಿಂದ 4 ಕ್ರಸ್ಟ್ ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಬಿದರಳ್ಳಿ, ಕಳಸೂರು, ಬೀರಂಬಳ್ಳಿ, ಹೊಸಬಿದರಹಳ್ಳಿ, ಬೇಗೂರು ಪ್ರದೇಶಗಳ ವ್ಯಾಪ್ತಿಗೆ ತೆರಳುವ ಜನರಿಗೆ ಜಲಾಶಯದ ಮೇಲ್ಬಾಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಕಳೆದ ತಿಂಗಳು ಮಳೆಯ ಅಭಾವದಿಂದ 61 ಅಡಿಗಳಿಗೆ ಕುಸಿತ ಕಂಡಿದ್ದ ಕಬಿನಿ ಜಲಾಶಯದಲ್ಲಿ ಕೇವಲ ಒಂದು ತಿಂಗಳ ಒಳಗಾಗಿ 23 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಈ ಜಲಾಶಯ 19.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಕಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಅಧಿಕಾರಿಗಳಾದ ಚಂದ್ರಶೇಖರ್, ಗಣೇಶ್, ರಮೇಶ್ ಬಾಬು ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಜಲಾಶಯದ ಕುರಿತು ಕ್ಷಣ ಕ್ಷಣದ ಮಾಹಿತಿಗಳನ್ನು ಮೇಲಧಿಕಾರಿಗಳು ಮತ್ತು ಶಾಸಕ ಅನಿಲ್ ಚಿಕ್ಕಮಾದು ಪಡೆದುಕೊಳ್ಳುತ್ತಿದ್ದಾರೆ.

  • ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಜಲಾಶಯದ ಮುಂಭಾಗದ ಸೇತುವೆ ಜಲಾವೃತ
  • ಒಳಹರಿವಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಸ್ಥಳದಲ್ಲೇ ಅಧಿಕಾರಿಗಳ ಮೊಕ್ಕಾಂ
  • ಜಲಾಶಯದ ವ್ಯಾಪ್ತಿಯ ರೈತರು, ಕೂಲಿಕಾರ್ಮಿಕರು, ಜನ ಸಾಮಾನ್ಯರು ಸುರಕ್ಷಿತ ಸ್ಥಳಕ್ಕೆ ತೆರಳಲು ಅಧಿಕಾರಿಗಳ ಮನವಿ
    ಜನರು ನದಿ ಬಳಿ ಹೋಗಬಾರದು ಎಂಬ ಎಚ್ಚರಿಕೆಯ ಸಂದೇಶ

13-07-24
ಕೆಆರ್ ಎಸ್
ಗರಿಷ್ಟ ಮಟ್ಟ: 124 ಅಡಿ
ಇಂದಿನ ಮಟ್ಟ : 104.62 ಅಡಿ
ಒಳಹರಿವು :3,101 ಕ್ಯೂಸೆಕ್ಸ್
ಹೊರಹರಿವು; 2,257 ಕ್ಯೂಸೆಕ್ಸ್

ಹೇಮಾವತಿ
ಗರಿಷ್ಟ ಮಟ್ಟ: 2,922 ಅಡಿ
ಇಂದಿನ ಮಟ್ಟ : 2,901.50 ಅಡಿ
ಒಳಹರಿವು : 4,538 ಕ್ಯೂಸೆಕ್ಸ್
ಹೊರಹರಿವು; 250 ಕ್ಯೂಸೆಕ್ಸ್

ಹಾರಂಗಿ
ಗರಿಷ್ಟ ಮಟ್ಟ: 2,853 ಅಡಿ
ಇಂದಿನ ಮಟ್ಟ : 2,840.87 ಅಡಿ
ಒಳಹರಿವು : 922 ಕ್ಯೂಸೆಕ್ಸ್
ಹೊರಹರಿವು; 50 ಕ್ಯೂಸೆಕ್ಸ್

ಬಿಡುಗಡೆ ಆದೇಶ 1 ಟಿಎಂಸಿ, ವರುಣ ನೀಡಿದ ಹರಿವು 2 ಟಿಎಂಸಿ
ಮೈಸೂರು: ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡು ವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಆದೇಶ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಖಚಿತ ನಿರ್ಧಾರ ಕೈಗೊಳ್ಳಲು ಜು.14ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

ಈ ನಡುವೆ ಕಬಿನಿಯಿಂದ 20 ಸಾವಿರ ಕ್ಯೂಸೆಕ್ಸ್ (2 ಟಿಎಂಸಿ) ನೀರು ನದಿಗೆ ಹರಿಯುತ್ತಿರುವ ವಿಚಾರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಕಬಿನಿ ಜಲಾಶಯ ಭರ್ತಿ ಯಾಗಿರುವುದು ಸಂತಸದ ವಿಚಾರ, ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿ ತರ ಗಣ್ಯರು ಬಾಗಿನ ಅರ್ಪಿಸಲಿದ್ದಾರೆ. ಜೊತೆಗೆ ಜಲಾಶಯ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗೆ, ಈ ಭಾಗದ ಹಲವಾರು ಜನರಿಗೆ ಮನೆ ನಿರ್ಮಾಣಕ್ಕೆ ಹಾಗೂ ಕಬಿನಿ ಜಲಾಶಯದ ಮುಂಭಾಗದಲ್ಲಿ ಬೃಂದಾವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
-ಅನಿಲ್ ಚಿಕ್ಕಮಾದು, ಶಾಸಕರು

ಕಬಿನಿ ಜಲಾಶಯದಿಂದ 20,000 ನೀರನ್ನು ನಾಲ್ಕು ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ಒಳಹರಿವಿನ ಪ್ರಮಾಣ ಹೆಚ್ಚಾಗಲಿರುವುದರಿಂದ ಮತ್ತಷ್ಟು ನೀರನ್ನು ಬಿಡಬಹುದು. ಜಲಾಶಯದ ಭಾಗದ ವ್ಯಾಪ್ತಿಯಲ್ಲಿ ರುವ ರೈತರು ಕೂಲಿಕಾರ್ಮಿಕರು, ಜನ ಸಾಮಾನ್ಯರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಸಾರ್ವಜನಿಕರು ನದಿಯ ಬಳಿ ಬರಬಾರದು.
-ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರರು, ಕಬಿನಿ ಜಲಾಶಯ.

Tags:
error: Content is protected !!