Mysore
26
light rain

Social Media

ಭಾನುವಾರ, 03 ನವೆಂಬರ್ 2024
Light
Dark

ದಹಿಸುತ್ತಿದ್ದರೂ ನಗುತ್ತಾ ತೆರಳಿದ ಅಪರ್ಣಾ

  • ಭಾರತಿ ಹೆಗಡೆ

ಅಪರ್ಣಾ ಮತ್ತು ನನ್ನ ನಡುವಿನ ಮಾತುಗಳು ಶುರುವಾಗುತಿದ್ದುದೇ ಆರೋಗ್ಯ ಸಂಬಂಧಿಯಾಗಿರುತ್ತಿತ್ತು. ಫೋನ್ ಮಾಡಿದಾಗಲೆಲ್ಲ, ‘ಯಾಕೋ ತುಂಬ ಬೇಜಾರು. ಎಷ್ಟು ಸೋಮಾರಿತನ ನನ್ನನ್ನು ಆವರಿಸುತ್ತದೆಯೆಂದರೆ ಮನೆಯಲ್ಲೇ ಇದ್ದರೆ ಇಡೀ ದಿನ ಬಿದ್ದೊಂಡೇ ಇರ್ತೀನಿ. ನೆಟ್ಟಗೆ ಕೂದ್ಲು ಕೂಡ ಬಾಚಿಕೊಳ್ಳಲ್ಲ ಗೊತ್ತಾ…’ ಎಂದು ಅಪರ್ಣಾ ಹೇಳಿದರೆ, ‘ಸೇಮ್… ನನ್ಕತೆ… ನನ್ನ ಇಡೀ ಜೀವನ ಶೈಲಿಯನ್ನು ಆಫೀಸೇ ರೂಪಿಸಿದೆಯೇನೋ ಅನ್ನುವ ರೀತಿಯಲ್ಲಿ ಆಫೀಸಿಗೆ ಹೋಗುವಾಗ ಮಾತ್ರ ಅಲಂಕಾರ ಮಾಡಿಕೊಳ್ಳುವುದು, ಮನೆ ಯಲ್ಲೇ ಇದ್ದರೆ ಇಡೀ ದಿನ ಬಿಡ್ಕೊಂಡೇ ಇರೋದು’ ಎನ್ನುತ್ತಿದ್ದೆ.

“ಅದ್ಯಾಕೆ ಹಾಗೆ, ಅಲ್ಲ, ನಾವಿಷ್ಟೆಲ್ಲ ಸಾರ್ವಜನಿಕ ಲೈಫಲ್ಲಿರ್ತೀವಿ. ಆದ್ರೂ ನಮಗೆ ಬೇಜಾರು. ಕೆಲವರು ಮನೆಯಲ್ಲೇ ಆರಾಮಾಗಿ ಅಡುಗೆ ಮಾಡ್ಕೊಂಡು, ಮನೆ ನೋಡ್ಕೊಂಡಿದ್ರೂ ಅದೆಷ್ಟು ಖುಷಿಯಾಗಿರ್ತಾರೆ. ಆ ಖುಷಿ ನಮಗ್ಯಾಕಿರಲ್ಲ.. ಅಪರ್ಣಾ ಪ್ರಶ್ನೆಯಿದು.

ಯಾಕೆಂದರೆ ನಮನ್ನು ಬೆಳೆಸಿರೋ ರೀತಿಯೇ ಹಾಗೆ. ಸದಾ ಒಂದು ಚೌಕಟ್ಟಿನಲ್ಲಿ ನಾವು ಇರ್ತೀವಿ. ಅತಿಯಾದ ಪ್ರಾಮಾಣಿಕತನ, ಒಳ್ಳೆತನಗಳ, ಪಾಪ, ಪುಣ್ಯಗಳ ಕುರಿತ ಭಯ… ಇಂಥ ಭಯಗಳಿಂದ್ದೇ ನಮ್ ಅಪ್ಪ ಅಮ್ಮಂದು ನಮ್ಮನ್ನು ಬೆಳೆಸಿದ್ರು. ನಾವೂ ಹಾಗೇ ಬೆಳ್ಕೊಂಡು ಬಂದ್ವಿ. ಅದಕ್ಕೆ ನಮಗೆ ಒಂದು ಸಣ್ಣ ತಪ್ಪಾದರೂ ಅದು ಮನಸ್ಸಿಗೆ ಚುಚ್ಚುತ್ತೆ. ಇಂಥವೆಲ್ಲ ಬಿಟ್ಟಾಕಿ ಮುನ್ನಡೆಯಬೇಕು ಎಂದು ನಾನು ದೊಡ್ಡ ವೇದಾಂತಿಯಂತೆ ಭಾಷಣ ಬಿಗಿದೆ. ಹು… ಮುಂದೆ ಸಿಕ್ಕೋಣ. ಸಿಕ್ಕಾಗ ಎಲ್ಲಾನೂ ಬಿಟ್ಟಾಕೋಣ… ಎಂದರು ಅಪರ್ಣಾ. ಇಬ್ಬರು ಜೋರಾಗಿ ನಕ್ಕೆವು.

ಅಷ್ಟರ ನಂತರ ಕೂಡ ಅನೇಕ ಸಲ ಫೋನು ಮಾಡಿದಾಗ ಅಥವಾ ಎದುರಿಗೆ ಸಿಕ್ಕಾಗಲೆಲ್ಲ ಬಿಟ್ಟಾಕೋಣ ಅಲ್ವಾ… ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅಪರ್ಣಾ ನನಗೆ ಪರಿಚಯವಾಗುವ ಹೊತ್ತಿಗೆ ಅವರು ತುಂಬ ಎತ್ತರದ ಸ್ಥಾನದಲ್ಲಿದ್ದರು. ನಾನಾಗ ಪತ್ರಿಕೆಯೊಂದರಲ್ಲಿ ಮುಖ್ಯ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅಷ್ಟೊತ್ತಿಗಾಗಲೇ ಅವರು ಹಿರಿತೆರೆ- ಕಿರುತೆರೆಯ ಕಲಾವಿದೆಯಾಗಿ, ನಿರೂಪಕಿಯಾಗಿ ಸಾಕಷ್ಟು ಹೆಸರು ಮಾಡಿದವರಾಗಿದ್ದರು. ಕಾರ್ಯಕ್ರಮವೊಂದಕ್ಕೆ ದೆಹಲಿಯ ಹೋಟೆಲ್ ಒಂದರಲ್ಲಿ ನಾಲ್ಕು ದಿವಸ ಒಂದೇ ಕೋಣೆಯಲ್ಲಿ ತಂಗಿದ್ದೆವು. ಬರುವ ಮುನ್ನವೇ ನಿಮಗೆ ಶಾಪಿಂಗ್ ಇಷ್ಟನಾ ಎಂದು ಕೇಳಿದ್ದರು. ಹೂ, ತುಂಬಾ ಇಷ್ಟ ಅದೂ ದೆಹಲಿಗೆ ಹೋದಮೇಲೆ ಶಾಪಿಂಗ್ ಮಾಡ್ಡೆ ಇದ್ರೆ ಹೇಗಪ್ಪಾ..? ಆದ್ರೆ ಹೇಗ್ ಹೋಗೋದು, ಕಾರ್ಯಕ್ರಮದ ಪಟ್ಟಿ ಅಷ್ಟು ದೊಡ್ಡದಿದೆಯಲ್ಲ ಎಂದೆ. ಹೇಗಾದ್ರೂ ಬಿಡುವು ಮಾಡ್ಕೊಂಡು ಯಾರಿಗೂ ಸುದ್ದಿ ಹೇಳ್ದೆ ನಮ್ ಪಾಡಿಗೆ ಹೋಗಿ ಬಂದುಬಿಡೋಣ ಎಂದರು.

ಅದೊಂದು ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವಾಗಿತ್ತು. ದಲೈಲಾಮಾ, ಅಶೋಕ್ ಸಿಂಘಾಲ್, ಕಿರಣ್ ಬೇಡಿ, ವಂದನಾ ಶಿವ ಮುಂತಾದವರೆಲ್ಲ ಇದ್ದ ಸಮಾವೇಶ ಅದಾಗಿತ್ತು. ಅದರಲ್ಲಿ ಇಂಗ್ಲಿಷಿನಲ್ಲಿ ಸುಲಲಿತವಾಗಿ ಅಪರ್ಣಾ ಮಾತನಾಡಿದ್ದರು.

ತುಂಬ ಜನರಿಗೆ ಗೊತ್ತಿಲ್ಲದ ವಿಷಯವಿದು. ಅಪರ್ಣಾ ಕನ್ನಡದಲ್ಲಿ ಎಷ್ಟು ಚೆನ್ನಾಗಿ ನಿರೂಪಣೆ ಮಾಡಬಲ್ಲವರಾಗಿದ್ದರೋ ಅಷ್ಟೇ ಚೆನ್ನಾಗಿ ಇಂಗ್ಲಿಷಿನಲ್ಲಿಯೂ ಮಾತನಾಡಬಲ್ಲವರಾಗಿದ್ದರು. ದೃಶ್ಯ, ಶ್ರವ್ಯ ಹಾಗೂ ಅನೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿ ನಿರೂಪಣೆಗೊಂದು ತಾರಾ ಮೌಲ್ಯವನ್ನು ತಂದುಕೊಟ್ಟಂಥವರು. ಅದುವರೆಗೆ ನಿರೂಪಣೆ ಎಂಬುದು ಒಂದು ನಿರ್ಲಕ್ಷಿತ ವಲಯವಾಗಿತ್ತು. ಇಂಥವರು ನಿರೂಪಿಸಿದರು ಎಂದು ಒಂದು ಸಾಲು ಪತ್ರಿಕೆಗಳಲ್ಲಿ ಬರುವಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಅಪರ್ಣಾ ಅದಕ್ಕೊಂದು ಘನತೆ ತಂದುಕೊಟ್ಟವರು. ಹೀಗೆ ಉದ್ಘಾಟನೆ ಮುಗಿದ ಮೇಲೆ ಸಂಜೆಯ ಹೊತ್ತು ನಾವು ನಾಲೈದು ಜನ ಮೆಲ್ಲಗೆ ಅಲ್ಲಿಂದ ಹೊರಟು ಕರೋಲ್ ಬಾಗ್‌ಗೆ ಬಂದೆವು. ಅಲ್ಲಿ ಶಾಪಿಂಗ್ ಮಾಡುವಾಗ ಕಂಡಕಂಡ ಸರ, ಉಂಗುರ ಬಳೆಗಳನ್ನೆಲ್ಲ ತಗೊಂಡು ಹಾಕಿಕೊಂಡು ಹೇಗೆ ಕಾಣೀನಿ ಎಂದು ಅಪರ್ಣಾ ಮಗುವಿನಂತೆ ಕೇಳಿದ್ದರು. ಅಷ್ಟರ ನಂತರ ಅದೆಷ್ಟೋ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದೆವು. ಮಂಗಳೂರಿನ ಕಾಲೇಜೊಂದಕ್ಕೆ ಇಬ್ಬರೂ ಅತಿಥಿಯಾಗಿ ಹೋದಾಗ ಅಲ್ಲಿನ ಬೀಚ್‌ನಲ್ಲಿ ಮತ್ತದೇ ಮಕ್ಕಳ ಥರ ಆಟವಾಡಿದ್ದರ ನೆನಪಿನ್ನೂ ಮಾಸಿಲ್ಲ. ನಾನು ಫೇಸ್‌ಬುಕ್‌ನಲ್ಲಿ ಹಾಕುವ ನನ್ನ ಟೆರೇಸ್ ಗಾರ್ಡನ್‌ನ ಫೋಟೋಗಳನ್ನು ನೋಡಿ ನಿಮ್ಮನೆಗೆ ತಂಬುಳಿಯ ಊಟ ಮಾಡಲು ಬರಬೇಕು ಎಂದು ಹೇಳಿದ್ದರು. ಅದು ಕಡೆಗೂ ಕನಸೇ ಆಗಿಹೋಯಿತು.

ಅಮ್ಮ ನೇಯ್ದ ನೀಲಿ ಬಣ್ಣದ ಗೆಂಟಿಗೆ ಹೂವಿನ ದಂಡೆಯನ್ನು ನೋಡಿ, ಹೇ… ಎಷ್ಟು ಚೆನ್ನಾಗಿದೆ, ನಾನೊಮ್ಮೆ ಆ ದಂಡೆಯನ್ನು ಮುಡಿಯಬೇಕು ಎಂದಿದ್ದರು. ಅದನ್ನು ನೆನಪಿಟ್ಟುಕೊಂಡ ಅಮ್ಮ, ನನ್ನ ಮೊದಲ ಪತ್ನಿಯ ದುಗುಡ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಅಪರ್ಣಾಗೆ ತಾನೇ ನೇಯ್ದ ಗೆಂಟಿಗೆ ಹೂವಿನ ದಂಡೆಯನ್ನು ತಂದುಕೊಟ್ಟಿದ್ದಳು. ಪ್ರೀತಿಯಿಂದ ಆ ದಂಡೆಯನ್ನು ತೆಗೆದುಕೊಂಡು ಇನ್ನೇನು ಮುಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಪುಟ್ಟ ಹುಡುಗಿಯೊಬ್ಬಳು ಬಂದು, ಆಂಟೀ, ಆ ದಂಡೆ ನಂಗೆ ಬೇಕು, ಕೊಡಿ ಫ್ಲೀಸ್ ಎಂದು ಕೇಳಿದಳು. ಅಪರ್ಣಾ ಒಮ್ಮೆ ಅಮ್ಮನ ಮುಖ ನೋಡಿ ಅವಳಿಗೇ ಕೊಟ್ಟರು. ಇನ್ನೊಮ್ಮೆ ಅಮ್ಮನ ಬಳಿ ಹೂವಿನ ದಂಡೆಯನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು. ಆದರೆ ಆ ಇನ್ನೊಮ್ಮೆ ಮತ್ತೆ ಬರಲೇ ಇಲ್ಲ.‌

ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬನ್ನಿ ಎಂದು ಆಹ್ವಾನಿಸಲು ಫೋನ್ ಮಾಡಿದರೆ ತಕ್ಷಣಕ್ಕೆ ಎತ್ತಿಕೊಳ್ಳಲಿಲ್ಲ. ಸ್ವಲ್ಪ ಬ್ಯುಸಿ ಇದ್ದೇನೆ, ನಾಳೆ ಮಾಡ್ತೇನೆ ಎಂದು ಮೆಸೇಜಿಟ್ಟರು. ಮಾರನೇ ದಿನ ನಮ್ಮ ಕಾರ್ಯಕ್ರಮದ ಕುರಿತು ವಿವರಿಸಿ ಬನ್ನಿ ಎಂದು ಕರೆದೆ. ನನಗೆ ಬೇರೆ ಏನೋ ಕಾರ್ಯಕ್ರಮವಿದೆ. ಯಾವುದಕ್ಕೂ ಇಂದು ಸಂಜೆ ನಿಮಗೆ ಫೋನ್ ಮಾಡಿ ತಿಳಿಸ್ತೀನಿ ಎಂದವರು ಪೋನ್ ಮಾಡಲೇ ಇಲ್ಲ. ಮಾರನೇ ದಿನ ಮತ್ತೆ ನಾನೇ ಮಾಡಿದಾಗ ಸಾರಿ ಭಾರತಿ, ನಿನ್ನೆ ಬೇಗ ಮಲಗಿಬಿಟ್ಟೆ, ಆಯ್ತು, ನಾನು ಬರ್ತೀನಿ ಅಂತ ಹೇಳಿದರು. ಅವತ್ತು ನಮ್ಮಿಬ್ಬರಿಗೂ ಕಾಮನ್ ಫ್ರೆಂಡ್ ಒಬ್ಬರಿಗೆ ಕ್ಯಾನ್ಸರ್ ಬಂದಿತ್ತು. ಅದರ ಕುರಿತು ಸಾಕಷ್ಟು ಮಾತನಾಡಿಕೊಂಡೆವು. ಪಾಪ… ಪಾಪ… ಎಂದೆಲ್ಲ ಹೇಳಿದರು. ನಂತರ ನಮ್ಮ ಕಾರ್ಯಕ್ರಮಕ್ಕೆ ಬಂದ ಅಪರ್ಣಾರನ್ನು ನೋಡಿ ಒಂದು ಕ್ಷಣ ನನಗೆ ಗುರುತೇ ಸಿಗಲಿಲ್ಲ. ಏನಿದು, ಹೀಗಾಗಿದ್ದೀರಿ, ಹುಷಾರಾಗಿದ್ದೀರಾ ಎಂದು ಕೇಳಿದ್ದಕ್ಕೆ, ಹೋ..ಆರಾಮಿದೀನಿ ಎಂದರು ಅದೇ ಬೆಳ್ ನಗುವಿನಿಂದ. ಅರೆ, ಕೂದಲೆಲ್ಲ ಯಾಕೆ ಕಟ್ ಮಾಡ್ತಿದ್ದೀ ಎಂದು ಕೇಳಿದೆ. ತುಂಬ ಉದುರುತ್ತಿತ್ತು. ಪಾರ್ಲ‌್ರನವಳು ಕಟ್ ಮಾಡಿಸಿ, ಮತ್ತೆ ಬೆಳೆಯುತ್ತೆ ಎಂದಳು. ಹೌದೆಂದು ಕಟ್ ಮಾಡಿಸಿಬಿಟ್ಟೆ. ಆದರೆ ಅದು ಬೆಳೆಯಲೇ ಇಲ್ಲ ಎಂದು ನಕ್ಕರೇ ವಿನಾ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಡಲಿಲ್ಲ. ನಾನು ತಮಾಷೆಗೆ ಎಲ್ಲಾನೂ ಬಿಟ್ಟಾಕಿದ್ರಾ ಹಾಗಿದೆ ಎಂದು ಕೇಳಿದೆ. ಹೌದೌದು ಎಂದು ಜೋರಾಗಿ ನಕ್ಕರು. ಕಾರ್ಯಕ್ರಮದಲ್ಲಿ ಎಂದಿನಂತೆ ಚೆಂದವಾಗಿ ಮಾತನಾಡಿದರು. ಮನೆಗೆ ಹೋದ ಮೇಲೆ ಫೋನ್ ಮಾಡಿದರೆ ತೆಗೆದುಕೊಳ್ಳಲಿಲ್ಲ. ಮಾರನೆಯ ದಿನ ರಾತ್ರಿ ಬೇಗ ಮಲಗಿಬಿಟ್ಟೆ, ಸಾರಿ, ಕಾರ್ಯಕ್ರಮ ತುಂಬಾ ಚೆನ್ನಾಗಾಯ್ತು ಎಂಬ ವಾಯ್ಸ್ ಮೆಸೇಜಿಟ್ಟದ್ದರು.

ಈಗ ವಸ್ತಾರೆಯವರ ಬಳಿ ಕಳೆದ ವರ್ಷದ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದ ರೆಂದು ನೆನಪಿಸಿದೆ. ನೆನಪಿದೆ. ಅಷ್ಟು ತಯಾರು ಮಾಡಿ ನಾವೇ ಅವಳನ್ನು ಕಳಿಸಿದ್ದೆವು, ನಿಮ್ಮ ಕಾರ್ಯಕ್ರಮ ಮುಗಿದು ಮನೆಗೆ ಬಂದವಳೇ ಸುಸ್ತು ಎಂದು ಮಲಗಿಬಿಟ್ಟಳು ಎಂಬ ಮಾತುಗಳು ಮನಕಲಕಿದವು. ಅಂದರೆ ನನ್ನ ಫೋನೆತ್ತದೇ ಇದ್ದಿದ್ದಕ್ಕೆ, ವಾಯ್ಸ್ ಮೆಸೇಜಿಟ್ಟಿದ್ದಕ್ಕೆಲ್ಲ ಕಾರಣ ಈಗ ತಿಳಿಯುತ್ತಿದೆ. ಅಬ್ಬಾ…ಅನಿಸಿಬಿಟ್ಟಿತು. ಒಡಲೊಳಗೆ ಅಗ್ನಿಕುಂಡವೇ ದಹಿಸುತ್ತಾ ಇದ್ದರೂ, ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಡದೆ ನಗುನಗುತ್ತಾ ಇರೋದಕ್ಕೆ ನಿಜಕ್ಕೂ ಶಕ್ತಿ ಬೇಕು.

 

ಪ್ರೀತಿಯಿಂದ ಗೆಂಟಿಗೆ ಹೂವಿನ ಆ ದಂಡೆಯನ್ನು ತೆಗೆದುಕೊಂಡು ಇನ್ನೇನು ಮುಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಪುಟ್ಟ ಹುಡುಗಿಯೊಬ್ಬಳು ಬಂದು, ಆಂಟೀ, ಆ ದಂಡೆ ನಂಗೆ ಬೇಕು, ಕೊಡಿ ಫೀಸ್ ಎಂದು ಕೇಳಿದಳು. ಅಪರ್ಣಾ ಒಮ್ಮೆ ಅಮ್ಮನ ಮುಖ ನೋಡಿ ಅವಳಿಗೇ ಕೊಟ್ಟರು.

 

 

 

 

 

ಭಾರತಿಹೆಗೆಡೆ

Tags: