Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಓದುಗರ ಪತ್ರ| ಮುಡಾ ಹಗರಣ; ನಿಷ್ಪಕಪಾತ ತನಿಖೆಯಾಗಲಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ರಾಜ್ಯದಾದ್ಯಂತ ಚರ್ಚೆಯಾಗುತ್ತಿದ್ದು, ಸಾವಿರಾರು ಕೋಟಿರೂ. ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಗಮನಿಸಿದರೆ, ಎಲ್ಲ ರಾಜಕೀಯ ಪಕ್ಷಗಳ ಕೆಲ ನಾಯಕರು ಫಲಾನುಭವಿಗಳಾಗಿದ್ದಾರೆ ಅನಿಸುತ್ತದೆ. ಈ ಪ್ರಕರಣ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ತನಿಖೆಯಾದರೆ ಆ ರಾಜಕೀಯ ನಾಯಕರ ಮುಖವಾಡ ಕಳಚಿ ಬೀಳುತ್ತದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ‘ಮುಡಾದಲ್ಲಿ ಇಂತಹ ಹಗರಣಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ’ ಎಂದಿರುವುದು ಹಗರಣ ನಡೆದಿದೆ ಎಂಬುದಕ್ಕೆ ಇಂಬುಕೊಟ್ಟಿದೆ.

ಈ ಪ್ರಕರಣದಲ್ಲಿ ಬಹುಪಾಲು ರಾಜಕಾರಣಿಗಳೇ ಭಾಗಿ ಯಾಗಿರುವುದರಿಂದ ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಲಿದೆ ಎಂಬ ನಂಬಿಕೆ ಜನರಲ್ಲಿ ಇಲ್ಲ. ಕೆಲವು ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬಹುದೇ ವಿನಾ ಅಕ್ರಮವಾಗಿ ಹಂಚಿಕೆಯಾಗಿರುವ ನಿವೇಶನಗಳು ಮರಳಿ ಮುಡಾ ವಶಕ್ಕೆ ಬರಲಿವೆ, ಅವು ಜನಸಾಮಾನ್ಯರಿಗೆ ಹಂಚಿಕೆಯಾಗಲಿವೆ ಎಂಬ ವಿಶ್ವಾಸ ಯಾರಿಗೂ ಇಲ್ಲ. ಆದ್ದರಿಂದ ತನಿಖಾಧಿಕಾರಿಗಳು ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಬೇಕು.

– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags: