ಚಾಮರಾಜನಗರ : ಜಿಲ್ಲೆಯ ೫೭ ಮಂದಿಗೆ ಕುಡುಗೋಲು ರೋಗ ಕಾಣಿಸಿಕೊಂಡಿದ್ದು, ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಶುರುವಾಗಿದೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬಳಿಗಿರಿರಂಗನ ಬೆಟ್ಟ, ಕನ್ನೇರಿ ಕಾಲನಿ, ಪುಣಜನೂರು ಮದ್ದೂರು ಕಾಲನಿ, ಮಹದೇಶ್ವರ ಬೆಟ್ಟ ಸೇರಿ ಇನ್ನಿತರ ಪ್ರದೇಶದಲ್ಲಿ ಅಂದಾಜು ೨೩ ಸಾವಿರಕ್ಕೂ ಹೆಚ್ಚು ಸೋಲಿಗ ಜನರಿದ್ದು, ಈ ಪೈಕಿ ಮಗುವಿನಿಂದ ೪೦ ವರ್ಷದವರೆಗಿನ ೧೧೭೭೦ ಮಂದಿಗೆ ತಪಾಸಣೆ ಮಾಡಲಾಗಿದ್ದು, ಇದರಲ್ಲಿ ೫೭ ಮಂದಿಗೆ ಪಾಸಿಟವ್ ಬಂದಿದೆ ಎಂದು ಇಲಾಖೆ ತಿಳಿಸಿದೆ.
ಬುಡಕಟ್ಟು ಜನಾಂಗದಲ್ಲಿರುವವರಿಗೆ ಹೆಚ್ಚಾಗಿ ಈ ಕುಡುಗೋಲು ರೋಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸರ್ಕಾರದಿಂದ ಜಿಲ್ಲೆಯಲ್ಲಿ ೧೨ ಸಾವಿರ ಮಂದಿಗೆ ತಪಾಸಣೆ ಮಾಡುವ ಗುರಿಯನ್ನ ಹೊಂದಿದ್ದು, ಈಗಾಗಲೇ ೧೧೭೭೦ ಮಂದಿಗೆ ತಪಾಸಣೆ ಮಾಡಲಾಗಿದೆ. ಈ ರೋಗವನ್ನ ತಡೆಗಟ್ಟುವ ಸಲುವಾಗಿ ನಿತಂತರವಾಗಿ ಸರ್ಕಾರದಿಂದ ತಪಾಸಣೆಯ ಜೊತೆಗೆ ಜಾಗೃತಿ ಸಹ ಮೂಡಿಸುವ ಕೆಲಸ ಆಗುತ್ತಿದೆ.
ಇದೊಂದು ಅನುವಂಶಿಕ ಕಾಯಿಲೆಯಾಗಿದ್ದು, ಇದರಲ್ಲಿ ಕೆಂಪು ರಕ್ತ ಕಣಗಳು ಕುಡುಗೋಲು ಆಕಾರದಲ್ಲಿರುವುದರಿಂದ ಇದಕ್ಕೆ ಕುಡುಗೋಲು ರೋಗ ಎನ್ನಲಾಗುತ್ತದೆ. ಈ ರೋಗ ಲಕ್ಷಣವಿರುವ ಪೋಷಕರಿಂದ ಮಕ್ಕಳಿಗೆ ಬರಲಿದ್ದು, ಈ ರೋಗದ ಲಕ್ಷಣವಿರುವ ಹುಡುಗ-ಹುಡುಗಿ ಮದುವೆಯಾದರೂ ಅವರಿಂದ ಅವರ ಮಕ್ಕಳಿಗೆ ಬರಲಿದೆ. ಈಗಾಗಿ ಇದನ್ನ ತಡೆಗಟ್ಟಲು ಪ್ರತಿಯೊಬ್ಬರಿಗೂ ಸಿಕೆಲ್ ಸೆಲ್ ಅನಿಮಿಯಾ ಕಾರ್ಡ್ ಗಳನ್ನ ವಿತರಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ೧೦೦ ಮಂದಿಗೆ ಈ ಕಾರ್ಡ್ ವಿತರಿಸಲಾಗಿದ್ದು, ಇದರಿಂದ ರೋಗಿಗಳು ಶೀಘ್ರವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ಕಾರ್ಡ್ ಮೂಲಕ ಉಚಿತ ಚಿಕಿತ್ಸಾ ಸೇವೆಗಳು, ಔಷಧ ಪಡೆಯಲು ಹಾಗೂ ಸರ್ಕಾರದ ಯೋಜನೆಗಳನ್ನ ಪಡೆದುಕೊಳ್ಳಬಹುದಾಗಿದೆ.





